ಹಿತ್ತಲ ಮೌನ

ನಾಕವೆಂಬುದು ಹಿತ್ತಲ ಗುಡಿ
ನರಕ ವಾಸವಿರುವ ಬಿಡಾರ
ನೈಜ್ಯ ಬದುಕನು ಕಂಡದ್ದಿತ್ತಲು
ಸತ್ತಿತ್ತು ನಡುಮನೆಯ ಸಿಂಗಾರ!!

ಕಣ್ಣ ಕಂಬನಿಯ ಬಯಲಿಗೆಳೆದವು
ಗೋಡೆಗೊಪ್ಪುವ ನಿಲುವುಗನ್ನಡಿ
ಮಣ್ಣು ತಾ ಹುದುಗಿಸಿಕೊಂಡಿತು
ತಾಳಿತು ಈ ಗಂಟು ಮುಸುಡಿ!!

ತೊಗಲು ಗೊಂಬೆಗಳು ಮನೆಯ ತುಂಬ
ಮಲಗಗೊಡದ ಮೆತ್ತನೆಯ ಹಾಸಿಗೆ
ಹಿತ್ತಲ ಬೇಲಿಯ ಮುಳ್ಳಿಗೂ ಮನಸಿದೆ
ಉಚ್ಚೆಯ ಹುಯ್ದು ಬೆಳೆಸಿದ್ದೆ!!

ಊರಿಗೆ ಊರೇ ಬಡಿದುಕೊಳ್ಳುತಿರೆ
ಹಿತ್ತಲ ಗುಲಾಬಿ ನಕ್ಕಿತು ಸುಮ್ಮನೆ
ಉಳಿದದ್ದೆಲ್ಲವೂ ಬೇಡದ ಜಡತೆ
ತಿಪ್ಪೆಯ ಬುಡದಲಿ ನನ್ನ ಮನೆ!!

ಕವಿತೆಯ ಹೊತ್ತ ಹಾಳೆಗೆ ಸಿಕ್ಕಿತು
ಬೇಡದವರ ಎಡಗೈ ಶಾಸ್ತ್ರ
ನೆಲವ ಗುಡಿಸಿದ ಪೊರಕೆಯ ಪಾಲಿಗೆ
ತೃಣವಾಯಿತು ಚುಕ್ಕಿಯ ಚಿತ್ರ!!

ಅಂಗಳ ತುಳಸಿ ಕಟ್ಟೆಯ ಸುತ್ತ
ಕಳಶದ ಕಲುಶಿತ ನೀರ ಮಜ್ಜನ
ಹಿತ್ತಲ ಚಂಡು ಹೂವಿನ ಗಿಡಕೆ 
ಚೊಚ್ಚಲ ಹೂವ ಪ್ರಸವದ ಧ್ಯಾನ!!

ಹಿತ್ತಲ ಮದ್ದು ನಾನಾಗಿರುವೆ
ಬೆತ್ತಲ ಗುಣದ ಪರವಾಗಿ
ಕತ್ತಲ ಕೋಣೆಯ ಗೂಟದ ದೇವರ
ಛೇಡಿಸುವಾಟಕೂ ಮಿಗಿಲಾಗಿ!!

                               -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩