Thursday 19 June 2014

ಮನದ ಮುಂಬಾಗಿಲಲಿ

ನೂರು ಬಾರಿ ತಟ್ಟಿಕೊಂಡೆ
ಒಮ್ಮೆ ಕೂಡ ತೆರೆಯಲಿಲ್ಲ
ಯಾರೂ ಇಲ್ಲವೆಂದುಕೊಂಡೆ
ನನ್ನ ಮನಸಲಿ;
ಕಳ್ಳ ದಾರಿಯಲ್ಲಿ ಯಾರೋ
ಕೊಳ್ಳೆ ಹೊಡೆಯಲಿಕ್ಕೆ ಬಂದು
ಎಬ್ಬಿಸುತ್ತಲಿರುವರೇನೋ
ಚೂರು ಗಲಿಬಿಲಿ?!!

ಎಲ್ಲ ಹೆಸರು ಇಟ್ಟು ಕೂಗಿ
ಎಲ್ಲದಕ್ಕೂ ಒಂದೇ ಮೌನ
ಯಾರೂ ಇಲ್ಲ ಉತ್ತರಿಸಲು
ಪ್ರತಿದ್ವನಿಯಲಿ;
ಹೂವು ಅರಳಿ ಬಾಡಿ ಸತ್ತು
ಧೂಪ ಉರಿದು ಉದುರಿ ಬಿತ್ತು
ಒಂಟಿ ದೀಪ ನಂದಲಿತ್ತು
ಸಾವ ಮನೆಯಲಿ!!

ಬೀಸಿ ಮೆಲ್ಲ ಗಾಳಿ ಚೂರು
ಮುರಿದು ಬಿದ್ದ ಕಿಟಕಿ ಸದ್ದು
ಸಿಕ್ಕ ಸಂದಿಯಲ್ಲೇ ನುಸುಳುತಿತ್ತು
ಬೆಳಕದು;
ಒಳಗೆ ಕೆಟ್ಟು ಕೂತ ಹಳೆಯ
ಗಡಿಯಾರದ ಮುಳ್ಳ ಸದ್ದು
ಕಿವಿಯ ಕಿತ್ತು ಆನಿಸಿಟ್ಟೆ
ಏನೂ ಕೇಳದು!!

ಬಣ್ಣವಿಲ್ಲ, ಬರಹವಿಲ್ಲ
ಸುಣ್ಣವಿಲ್ಲ, ಸರಸವಿಲ್ಲ
ಸುತ್ತ ಮುತ್ತ ಬರೆಯ ಸಪ್ಪೆ
ಕಪ್ಪು ಕಲೆಗಳು;
ಚಂದಗೊಳಿಸಲೆಂದು ಬಂದು
ಇಲ್ಲೇ ಕೊಳೆತು ನಾರುತಾವೆ
ಹಿಂದಿಂದೆ ಜಿಗಿದು ಬಂದ 
ಒಪ್ಪುವಲೆಗಳು!!

ಮನೆಯೂ ದೂರ, ಮಸಣ ಘಮಲು
ಮೊಗಸಾಲೆಯು ಬಿಕ್ಕುತಿರಲು
ಯಾವ ನೆಂಟ ತಾನೆ ಇತ್ತ
ತಲೆಯ ಹಾಕುವ;
ಹೆಸರಿಗೊಂದು ಕಾಲು ದಾರಿ
ಕಗ್ಗತ್ತಲು, ಮುಳ್ಳು ಬೇಲಿ
ಬರುವುದಾದರೆ ಹೇಳಿ-
ಬನ್ನಿ ನೋಡುವ!!

                   -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...