ನಾನು ಹಿಂಗೇ... ಏನಿವಾಗ?!!

ಕಾದ ದಾರಿಗಳೆಲ್ಲ
ಕಾದ ಕಬ್ಬಿಣದಂತೆ
ಕಾಲು ಹಿಡಿದು 
ಕ್ಷಮೆಯಾಚಿಸುತ್ತಿರುವಾಗ
ಸೌಜನ್ಯ ತೋರಲೇ?
ನೋವಲ್ಲಿ ಚೀರಲೇ?
ಏನ ಮಾಡಲಿ
ತೋಚದಾಯಿತೀಗ!!

ಗಾಳಿ ಮಾತಿಗೆ ಕಿವಿಯ
ಹೊತ್ತು ಮೀರಿದ ಗತಿಯ
ತಡೆವ ಸಾಹಸದಲ್ಲಿ
ಸೋತ ಸುಣ್ಣವ ಸವಿದು;
ಯಾರೋ ಕಿವಿ ಹಿಂಡುತಲಿ
ಬೀರುವರು ಸಿಟ್ಟನ್ನು
ಪೋಲಿ ಚಿತ್ರಕೆ ನೋಟ
ಬೀರಿದಾಗ!!

ಅಪ್ಪ ತೋಟವ ಕಾದ
ಅಮ್ಮ ಬಸಿದಳು ಬೆವರು
ತಂಗಿ ತವರಿನ ಕನಸ
ಕಾಣುತಿಹಳು;
ನನ್ನೊಳಗಿನನ್ನಪ್ಪ
ಸೋಮಾರಿ ಸಿದ್ದಪ್ಪ 
ಚಿಂತೆ ಇಲ್ಲದೆ ಮಲಗು
ಅನ್ನುತಿಹನು!!

ಸೂರ್ಯನಿಗೆ ಕ್ಯಾಮಿಲ್ಲ
ಚಂದ್ರನಿಗೆ ತಲೆಯಿಲ್ಲ
ಒಂದೆಡೆಗೆ ಕೂತು
ಮಾತಾಡರವರು;
ಹಗಲಂತೆ, ಇರುಳಂತೆ
ನೆರಳಂತೆ, ಕನಸಂತೆ
ಎಲ್ಲವೂ ಬೇಕೆಂದು
ಯಾರು ಸತ್ತವರು?!!

ಗೋರಿ ತಲೆ ಲೆಕ್ಕಕ್ಕೆ
ಬದುಕಿದವರ ಕಳೆದೆ
ಏಸೋಂದು ಜನ ಇಲ್ಲಿ
ಬದುಕಿದವರು?!!
ಎಲ್ಲೆಲ್ಲೂ ಸಮಾನತೆಯ
ಕಾಣ ಬಯಸುವರಾರೂ
ಇಂಥ ವಿಶಯಕ್ಕೆ ಕೈ
ಹಾಕರವರು!!

ನಾಯಿಗಳು ಬೊಗಳುತವೆ
ಹೂವುಗಳು ಅರಳುತವೆ
ಅಳುವಿಗೆ ಐವತ್ತು ಗ್ರಾಂ
ಉಪ್ಪು ನೀರು;
ನಿಮ್ಮ ಲೆಕ್ಕಿಸುವಲ್ಲಿ
ನಾ ಯಾರೂ ಅಲ್ಲದವ
ನನ್ನ ಪ್ರಶ್ನಿಸುವುದಕೆ
ನೀವು ಯಾರು?!!

                  -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩