Tuesday 10 June 2014

ಎದೆಯಲ್ಲಿ ಕಚಗುಳಿ

ಯಾರೋ ಬೀದಿ ದಾಸನೊಬ್ಬ
ಹಾಡಿಬಿಟ್ಟ ಸಾಲ ಹಿಡಿದು
ಇಂಥ ಮಟ್ಟ ಗೀಚುವಂಥ
ಧೈರ್ಯ ಬಂದಿದೆ;
ಹೀಗೆ ಬಂದು, ಹಾಗೆ ಹೋಗು
ಕಿವಿಯಗೊಟ್ಟು ಮಗ್ನಳಾಗು
ಮೂಲೆಗೆಸೆಯಬೇಡ ಕರೆಯ
ಓಲೆ ಓದದೆ!!

ದಾರಿಯೊಂದು ಹೆಜ್ಜೆಗಾಗಿ
ಊರಿಗೂರೇ ಬೇಟಿಗಾಗಿ
ಕಾದು ಕೂತ ಹೃದಯಕಿಲ್ಲ
ಬಸ್ಸು, ಬಂದರು;
ನಿನ್ನ ದನಿಯ ಮೂಲವೊಂದೇ
ಮಿಡಿತ ಕಂಡ ಮೇರು ಸ್ಪೂರ್ತಿ
ಎದೆಯ ಕಿಟಕಿಯಾಚೆ ಬಿಡದ
ಸಣ್ಣ ತುಂತುರು!!

ಒಪ್ಪಬೇಕು ನೀನೂ ಕಡೆಗೆ
ದಾಪುಗಾಲನಿಟ್ಟು ನಡಿಗೆ
ಬೆಳೆಸಬೇಕು ನಾನು ನೆಟ್ಟ
ಹೂವ ತೋಟಕೆ;
ಒಬ್ಬಳೇಕೆ ಹೋದೆ ಅಲ್ಲಿ
ನನ್ನ ನೆರೆಳು ನೋಯಿತಿಲ್ಲಿ
ಕೂಗಬೇಕು ನನ್ನ, ಜೊತೆಗೆ
ಪ್ರೇಮದಾಟಕೆ!!

ಚಂದ್ರನಿಲ್ಲ ಬಾನಿನಲ್ಲಿ
ಆದರೇನು ಬಂತು ನನಗೆ
ನಿನ್ನ ಮೊಗದ ವೃತ್ತವೊಂದು
ತುಂಬು ಹುಣ್ಣಿಮೆ;
ಕಣ್ಣಿನೆರಡು ಕಲೆಯ ಜೊತೆಗೆ
ಕೆಂಪು ಅಧರ ಮೊಗ್ಗಿನೊಳಗೆ
ಮುತ್ತು ಜೋಡಿಸಿಟ್ಟ ಮಳಿಗೆ,
ಕೆನ್ನೆ ರೇಷಿಮೆ!!

ಸಾಂದ್ರವಾದ ಮಂದಹಾಸ
ಲಾಂದ್ರ ಹಿಡಿದರಲ್ಲಿ ಖಾಸ
ನನ್ನ ಹೆಸರಿಗೆಲ್ಲ ಬರೆದೆ
ಹೇಗೆ ತಾಳಲಿ;
ಈಗ ತಾನೆ ಬಂದ ಸುದ್ದಿ
ಎಲ್ಲ ನೆನಪು ಸಾಲು ರದ್ದಿ
ನಿನ್ನ ಹೆಸರ ಗೂಡಿನಲ್ಲಿ
ತುಂಟ ಕಚಗುಳಿ!!

ಬಿದ್ದು ತರಚಿಕೊಂಡ ಗಾಯ
ನೋವು ಕೊಡುತಲಿಲ್ಲ ನನಗೆ
ಹೊತ್ತು ತಂದ ಹೂವ ಬುಟ್ಟಿ
ಚೆಲ್ಲಿ ಹೋಗಿದೆ;
ನಾನು ಒಂದು ಹೂವ ಹೆಕ್ಕಿ
ಬುಟ್ಟಿಯೊಳಗೆ ಹಾಕುವಾಗ
ಮನದ ಒಳಗೆ ನೀನೂ ಕೂಡ
ಕೈಯ್ಯ ಚಾಚಿದೆ!!

                      -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...