ಜೀವ ಜೊತೆಗಿರದೆ

ದೀಪಕ್ಕೆ ಅಡ್ಡಲಾಗಿ ನಿಂತವಳ
ಬೆಳಕಿಗೇ ಅಡ್ಡಗಟ್ಟಿದವಳೆಂದು
ದೂರುತ್ತಿದ್ದಂತೆಯೇ 
ಯಾರೋ ಅತ್ತ ಸದ್ದು;
ಅವಳನ್ನೊಳಗೊಂಡ ಬೆಳಕಲ್ಲ,
ಬೆಳಕನ್ನೊಳಗೊಂಡ ಅವಳಲ್ಲ;
ಕತ್ತಲ ಮರೆಯ ಧೂಪದ್ದೇ ಇರಬೇಕು
ನಿತ್ರಾಣ ಮರುಕ!!

ಒಂದು ಕನಸ ಕಂಡೆ,
ಅಲ್ಲಿ ಹಸಿರ ಹಾದಿಯ ಸುತ್ತ
ಬರಡು ಭೂಮಿಯ ಬಿರುಕು;
ಅವಳ ಪಾದ ಸೋಂಕಿಗಾಗಿ
ಬಾಯ್ದೆರೆದ ಒಣ ಗರಿಕೆಯ ಬೇರು
ಅದು ನನ್ನ ಪೊಗರು;
ಕಾಲಡಿಯ ಜೀವಂತಿಕೆಯಿಂದ
ಅನೂಹ್ಯ ಚಿಗುರು!!

ಕೂತು ಕೇಳಿದಾಗ
ರೇಡಿಯೋ ಪೆಟ್ಟಿಗೆ ಉತ್ಸುಕ,
ಹಾಡಿತು ಇನ್ನೂ ಉಲ್ಲಾಸದಿಂದ;
ಕಂಪನಾಂಕ ತಪ್ಪಿಸಿ ಸಾಗಿತು
ಆಕೆಯುಟ್ಟ ಸೀರೆಯ ಪಲ್ಲು;
ಹುರುಳಿಲ್ಲದ ಬ್ಯಾಟರಿ,
ನಿಶಕ್ತ ಆಂಟೆನ,
ಆಕೆಯಿಲ್ಲದೆ ಎಲ್ಲೆಲ್ಲೂ ಕ್ಷೋಭೆ!!

ಗಡಿಯಾರದ ಮುಳ್ಳಿಗೂ,
ನೆನಪುಗಳ ಬೇಲಿಗೂ
ನನ್ನ ಇರಿದು, ಪರಚುವ ಆಸೆ
ಅತ್ತರೆ ತಾನೆ ಕೆನ್ನೆಗೆ ಬಯಲು?!!
ಅಳದೆ ಸುಮ್ಮನಿದ್ದ ಹನಿ
ಒಳಗೊಳಗೇ ಬಿಕ್ಕಿ
ಕಣ್ಣುಗಳೀಗ ತುಂಬಿದ
ತುಮುಲಗಳ ಜೋಡಿ ಪಾತ್ರೆ!!

ರಂಗೋಲಿ ಪುಡಿಯ ಬಟ್ಟಲೂ,
ಮದರಂಗಿ ಗಿಡದ ಸುತ್ತಲೂ 
ಇರುವೆಗಳ ಹಿಂಡು;
ಕೊನೆ ಬಾರಿ ಆಕೆ ಅಲ್ಲಿ 
ಅತ್ತು ಹೊರಟಿರಬೇಕು?!!
ನಿಲ್ಲುತ್ತೇನೆ ಸುಮ್ಮನೆ 
ಏನೂ ಅರಿಯದ ಕಂದಮ್ಮನಂತೆ
ನಂತರ ಚೀರಿ, ಚೀರಿ ಅತ್ತಂತೆ!!

                            -- ರತ್ನಸುತ

Comments

  1. ಹಲ ಚಿತ್ರಗಳನ್ನು ಒಮ್ಮೆಲೇ ಕಟ್ಟಿಕೊಡಬಲ್ಲಿರ.
    ಭೇಷ್...

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩