ಬೋಳು ಮರದ ಕೆಳಗೆ

ಚಳಿಗಾಲದ ಎಲೆಯ ಪಾಡನ್ನು ಊಹಿಸಲು
ತಿಳಿ ಗಾಳಿಯಲ್ಲೊಮ್ಮೆ ನಿಂತು ಬರುವ
ಒಂದನೊಂದು ತಬ್ಬಿ ಉದುರಿಕೊಂಡವುಗಳ
ನಾನೊಂದು ನೀನೊಂದು ಜೋಡಿಸಿಡುವ

ಮಾತಾಡದ ಜಾಡ ಇಜ್ಜೋಡು ಹೆಜ್ಜೆಗಳು
ಇಟ್ಟಲ್ಲಿ ಇಟ್ಟಂತೆ ನುಡಿಸುತಿತ್ತು
ನಡು ನಡುವೆ ನಿನದೊಂದು ಉಸಿರಾಟದ ತೊಡಕು
ಬಿಕ್ಕಳಿಕೆಯ ಸದ್ದನೆಬ್ಬಿಸಿತ್ತು!!

ಒಬ್ಬೊಬ್ಬರಾಗಿ ನಾವಿಬ್ಬರೇ ಆದಾಗ
ತಬ್ಬಿಬ್ಬುಗೊಂಡರೂ ಇಲ್ಲ ತಪ್ಪು
ಕೊಬ್ಬಿದ ಕಬ್ಬಕ್ಕೆ ತಬ್ಬುವ ಪರಿಹಾರ
ಮುನ್ನುಗ್ಗು ಅನ್ನುತಿದೆ ಜೊನ್ನ ಕಪ್ಪು!!

ಬೆವರೆಂಬ ಹಣೆಪಟ್ಟಿ ಹೊತ್ತು ನಿಂತೆವು ಅಲ್ಲಿ
ಸತ್ತ ಮೌನಕೆ ಶಾಂತಿ ಕೋರುವಾಗ
ಮೋಡ ಹಿಂದಿನ ಕಳ್ಳ ಆಗಷ್ಟೇ ಎದ್ದಂತೆ ಆಕಳಿಸಿದ 
ಕೈಯ್ಯ ಹಿಡಿವ ಬೇಗ!!

ಮರದಡಿಯ ಮಬ್ಬಲ್ಲಿ ಬಿಂಬವಾದವು ಕಣ್ಣು
ಅದುರಿದ ಅಧರಗಳ ಗದರಿಕೊಂಡು
ಮರದ ಮೇಗಡೆ ತೂಗುತಿದ್ದ ಬಾವಲಿ ತಾನು
ಹಾರಿ ಹೊರಟಿತು ರೆಕ್ಕೆ ಒದರಿಕೊಂಡು!!

ಬೆಳಕು ಮೂಡುವ ಮುನ್ನ ಮರವೇ ಬೋಳಾಯಿತು
ಹೊಸ ಚಿಗುರಿನ ಸಿಗ್ಗು ಕೇಳಿಸಿತ್ತು
ಉದುರಿದೆಲೆಯಡಿಯಲ್ಲಿ ಗುರುತಾದ ನಾವುಗಳು
ನಿದ್ದೆ ಮಾಡದೆ ಎದ್ದು ಹೊರಡೋ ಹೊತ್ತು!!

                                                 -- ರತ್ನಸುತ

Comments

  1. "ಕೊಬ್ಬಿದ ಕಬ್ಬಕ್ಕೆ ತಬ್ಬುವ ಪರಿಹಾರ
    ಮುನ್ನುಗ್ಗು ಅನ್ನುತಿದೆ ಜೊನ್ನ ಕಪ್ಪು"
    ತಮ್ಮ ಕಾವ್ಯ ಸಂಪತ್ತಿಗೆ ಸಜೀವ ಉದಾಹರಣೆಯಾಗಿದೆ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩