ಅಮ್ಮ ಪೂರ್ಣಗೊಳಿಸಿದ ಕವಿತೆ

"ಅಮ್ಮ
ಇಂದು ನಾ ಬರೆದ ಕವಿತೆ
ಕಾಣೆಯಾಗಿದೆಯಮ್ಮ;
ಇನ್ನೂ ಚೂರು ಬಾಕಿ ಉಳಿದಂತೆ
ನಿನ್ನ, ಅಪ್ಪನ ಚಿತ್ರ ಪಟದ ವಜೆಯಿಟ್ಟು
ಹಾರದಂತೆ ಬಿಟ್ಟು ಹೋಗಿದ್ದೆ
ಕಂಡೆಯಾ ಅಮ್ಮ, ಕಂಡೆಯಾ?!!"

"ಅಪ್ಪನ ಕುರಿತಷ್ಟೇ ಬರೆದಿದ್ದೆ,
ನೀನಿನ್ನೂ ಮೊದಲಾಗಿದ್ದೆ ಅಷ್ಟೇ
ಆಗಲೇ ಹಸಿವಾಗಿ, ನಿನ್ನ ನೆನಪಾಗಿ
ಕೂಗುತ್ತ ಎದ್ದು ಹೊರಟಿದ್ದು,
ಅಪೂರ್ಣ ಕಾಗದ ಬಿಟ್ಟು ಬಂದಿದ್ದು
ಎಲ್ಲವೂ ಕಣ್ಣಿಗೆ ಕಟ್ಟಿದಂತಿದೆಯಮ್ಮ!!"

ಯಾರಾದರೂ ಕದ್ದಿರಬಹುದೇ?
ದುರುಪಯೋಗ ಪಡಿಸಿಕೊಂಡರೇ?
ಮೂರ್ಖರೇ ಆಗಿರಬೇಕು;
ನನ್ನದೇ ಆಗಬೇಕೆ ಕಳುವಿಗೆ?!!

ಅಸೂಯೆ ಪಟ್ಟು ಹರಿದು ಹಾಕಿರುವರೇ?
ಕಸದ ಬುಟ್ಟಿಯನೊಮ್ಮೆ ಚದುರಿಸಿದೆ
ಚೂರುಗಳು ಕಂಡವು
ಬರವಣಿಗೆಯ ಕುರುಹುಗಳಿರಲಿಲ್ಲ;
ಕಮಟು ಘಮಲನ್ನ ಹಿಂಬಾಲಿಸಿ ಹೊರಟೆ
ಕಾಡ್ಗಿಚ್ಚು? ಅಲ್ಲಿ ನನ್ನ ಸುಳುವೆಲ್ಲಿ?
ಹತಾಶನಾಗಿ ಹಿಂದಿರುಗಿದೆ!!

ಒಲೆಯ ಮೇಲಿನ ಮಡಿಕೆಯಲಿ
ತಳ ಸುಟ್ಟ ನೀರು;
ಹಿಟ್ಟು ಸುರಿವುದ ಮರೆತ ಜನನಿ
ಅದೇ ಹೊತ್ತಿಗೆ ಹಿತ್ತಲ ಬಾಗಿಲ ತೆರೆದು,
ಅಲ್ಲೇ ಅವಿತು,
ನನ್ನಿಂದ ಏನನ್ನೋ ಮುಚ್ಚಿಡುತ್ತಿದ್ದಳು;
ಅದು ಅದೇ ಕಳುವು ಕಾಗದ?!!

ಬಹಳ ಸಹಜವಾಗಿಯೇ ನನ್ನೆಡೆ ಬಂದು
ಮಡಿಸಿಟ್ಟ ತುಂಡನ್ನ ಕೈಗಿಟ್ಟಳು;
ತೆರೆದು ನೋಡಿದರಲ್ಲಿ
ಅವಳ ನಾಲ್ಕು ತೊಟ್ಟು ಕಂಬನಿ
ಕೊನೆ ಸಾಲ ಕೊನೆಯಲ್ಲಿ;
ಕವಿತೆ ಪೂರ್ಣಗೊಳಿಸಿದ್ದಳು ತಾಯಿ!!

                                 -- ರತ್ನಸುತ

Comments

  1. ನಾನೂ ಅತ್ತುಬಿಟ್ಟೆ. ಬಹುಶಃ ಅಮ್ಮನೆಂದರೆ ಹೀಗೇ ಏನೋ?

    ReplyDelete
  2. ನಾನೂ ಅತ್ತುಬಿಟ್ಟೆ. ಬಹುಶಃ ಅಮ್ಮನೆಂದರೆ ಹೀಗೇ ಏನೋ?

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩