Monday, 30 June 2014

ಗೆಳೆಯನ ಗುಂಗಲ್ಲಿ

ಗೆಳೆಯ ಬರುತಾನೆ
ಹೂ ಗುಚ್ಚವ ಹೊತ್ತು
ಕೈ ಹಿಡಿದು ಕೊಡುತಾನೆ
ಹಣೆಗೊಂದು ಮುತ್ತು

ಬಲು ದೂರ ನಡೆಸುತಾನೆ
ಕಣ್ಣಲಿ ಕಣ್ಣಿಟ್ಟು
ಕಣ್ಣಂಚನು ತಡವುತಾನೆ
ಬರವಸೆಯ ಕೊಟ್ಟು

ಗೆಳೆಯ ನಗುವಾಗೆಲ್ಲ
ಏಕೋ ಆತಂಕ
ಉಳಿಸಬಲ್ಲೆನೇ ನಗುವ
ಉಸಿರ ಕಡೆ ತನಕ?

ನೆರಳಲ್ಲಿ ಇರಿಸುತಾನೆ
ಇರುಸು ಮುರುಸು ನನಗೆ
ಮಾತೇ ಆಡದ ಚಂದ
ಸಂಭಾಷಣೆ ಕೊನೆಗೆ

ಗೆಳೆಯ ಕೊಡಿಸುವ ಸೀರೆ
ನನಗೇಕೋ ಸಿಗ್ಗು
ಅರಳು ಹೂವ ಬಳಸಲು
ಮತ್ತೊಮ್ಮೆ ಮೊಗ್ಗು

ಹೋಗಿ ಬರುವೆನು ಎಂದು
ಅಳಿಸುವಾತ ಗೆಳೆಯ
ಬಂದು ಹೋಗದ ಹಾಗೆ
ಎದೆಯಲ್ಲೇ ಇರೆಯಾ?

ಮತ್ತೆ ಬರುವನು ಆತ
ಹೊಸ ಹೂ-ನಗೆ ಹೊತ್ತು
ನಗಲಿಲ್ಲ ಅವನಷ್ಟು ನಾ
ಯಾವತ್ತೂ!!

ಮತ್ತೊಮ್ಮೆ ಕೊಡುತಾನೆ
ಬೊಗಸೆಯಷ್ಟು ಪ್ರೀತಿ
ನನ್ನಷ್ಟೇ ಇರಬಹುದೇ
ಅವನಲ್ಲೂ ಭೀತಿ?!!

               -- ರತ್ನಸುತ

1 comment:

  1. ಈ ಕವಿತೆ ಓದುವಾಗ, ನಮ್ಮ ಗಡಿ ಕಾಯುವ ಸೈನಿಕರು ತವರಿಗೆ ಬಂದು ಹಿಂದಿರುಗುವಾಗ ಅವರ ಬಾಳ ಸಂಗಾತಿಗಳ ಮನೋಭಾವ ಹೇಗಿರಬಹುದು ಎನ್ನುವ ದೃಶ್ಯ ಸುಳಿಯಿತು.

    ReplyDelete

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು ನೀನಿರದೆ ಈ ಗತಿ ಸಿದ್ಧಿಸಿತು ಜೀವಕೆ ಹಾಡುಹಗಲಲ್ಲಿ ನೀ ಆವರಿಸಿಕೊಂಡಿರುವೆ ಕನಸೊಂದು ಬೀಳುತಿದೆ ಗೊತ್ತಿದ್ದೂ ಬಾವಿಗೆ ಬ...