ಅನುಭಾವ

ಕದ್ದು ನೋಡುವ ಪೀಕಲಾಟವೇ ಇಲ್ಲ,
ಅವಳ ಕಣ್ಣು ಸಹಜವಾಗಿಯೇ ಕಂಡಿತ್ತು;
ವಿಷೇಶವೇನಂದರೆ
ಅಲ್ಲಿ ನನಗೆ ಇಷ್ಟವಿಲ್ಲ್ಲದಾಗಿದ್ದು
ನನ್ನ ಆ ಹಸಿದ ನೋಟವಷ್ಟೇ!!

ಅಮಿತ ಆಭರಣಗಳು ಅವಳ ಅಂದವ ತಬ್ಬಿ
ಅವಳೇ ಕಾಣದಂತಾಗಿದ್ದೂ
ಆಕೆ ಯಾವ ಒಡವೆ ಅಂಗಡಿಯ ರಾಯಭಾರಿಯಲ್ಲ,
ಪ್ರದರ್ಶನಕ್ಕಿಟ್ಟ ಗೊಂಬೆಯೂ ಆಗಿರಲಿಲ್ಲ!!

ಬಿಡಿ-ಬಿಡಿಯಾಗಿ ಹೇಳ ಕೂತರೆ
ಯೋಗಿಯಾಗುವ ಲಕ್ಷಣಗಳಲ್ಲಿ
ನನ್ನನ್ನೇ ಮರೆವ ಸೂಚನೆಯಿದೆ;
ಸೂಚ್ಯವಾಗಿ ಹೇಳುವುದಾದರೆ
ಆಕೆಯೊಂದು ಅದ್ವಿತೀಯ ಪ್ರತಿಮೆ!!

ಸುಂದರ ಸೊಲ್ಲು, ಸುಮಧುರ ಸಾಲುಗಳು
ಕಟ್ಟಿ ಹಾಕ ಹೊರಟರೂ
ಮುರಿದು ಬೀಳುವಷ್ಟು ಕೋಮಲ ತ್ವಚೆ,
ನಿರ್ಮಲ ಹೃದಯ, ಮಾರ್ಮಿಕ ಮೌನ!!

ತಪಸ್ವಿಯ ನಿದ್ದೆಗೆಡಿಸುವ ಕಿಡಿಗೇಡಿತನ
ಮುಡಿಯಿಂದ ಉಂಗುಟದವರೆಗೂ 
ತುಳುಕುವ ಹೊತ್ತಿಗೇ
ಸಾಮಾನ್ಯನೂ ಅಸಹಜ ಉಪಮೆಗಳ
ದಾಸನಾಗಿದ್ದೇನೆ;
ಇಷ್ಟು ಮೋಸದ ಚಮತ್ಕಾರಕ್ಕೆ
ಜಾದುಗಾರನೇ ಬೆರಗಾಗಿರಬೇಕು!!

ಅಷ್ಟು ಮಾತ್ರವಲ್ಲದೆ,
ಒಂದೊಂದೇ ಬಾಣಗಳ ಬೊಕ್ಕಸದಿಂದ ಕದ್ದು
ಗುರಿ ಹೂಡದಂತೆ ಸಂಚು ರೂಪಿಸಿದ 
ಆ ಚೆಲುವಿಗೆ
ಯಾವ ಹೆಸರಿಡಬೇಕೋ ತಿಳಿಯದೆ
ಸುಮ್ಮನಾಗಿಬಿಟ್ಟೆ;
ಮನಸು ಅಷ್ಟಕ್ಕೆ ತೃಪ್ತಿ ಪಡದೆ
ಎಳೆ ಮಗುವಿನಂತೆ ಹಠಕ್ಕೆ ಬಿದ್ದಿದೆ!!

ಚಾಟಿ ಬೀಸಿದ ನೀಳ ಜಡೆ
ನನ್ನ ಅಹಂಕಾರಕ್ಕೆ ಪೆಟ್ಟು ಕೊಟ್ಟು
ಮುದ್ದಿಸಿದಂತೆ ಭಾಸವಾದರೂ,
ಆಕೆಯಲ್ಲಿ ಮೀರಿಸಲಾಗದ ಸೊಕ್ಕು
ಆ ಅಂದಕ್ಕೆ ಒಪ್ಪುವಂತಿತ್ತು!!

ಇದ್ದ ಜೇಬುಗಳನ್ನೆಲ್ಲ ತಡಕಾಡಿದೆ;
ಜಾರಿ ಹೋಗದಂತೆ ಜೋಪಾನವಾಗಿರಿಸಿದ್ದ
ಒಂಟಿ ಹೃದಯವನ್ನ
ಎಲ್ಲೊ ಬೀಳಿಸಿಕೊಂಡಿದ್ದೆ ಆಗಲೇ;
ಬಹುಶಃ ಮೊದಲ ನೋಟದಲ್ಲೇ ಇರಬೇಕು?!!

ಇದನರಿತಮೇಲಂತೂ
ಇಮ್ಮಡಿಗೊಂಡ ಉನ್ಮಾದ
ಈ ರಾತ್ರಿಗೆ ನಿದ್ದೆಗೊಡದಿದ್ದರೆ 
ಆಶ್ಚರ್ಯ ಪಡಬೇಕಾಗಿಲ್ಲ!!

                     -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩