ನನ್ನ ಸಾವಿಗೂ ಮುನ್ನ

ಸಂತೆಯಲ್ಲಿ ಎಂದೂ ಅವಳ
ಕೈ ಬಿಟ್ಟು ನಡೆದವನಲ್ಲ,
ಅಂದು ನೋಡಿ ನಕ್ಕ ಬಳೆ
ಹಿಡಿಯ ಚೂರು ಸಡಿಲಿಸಿತು;
ಆತಂಕಗೊಂಡಳು ಪಾಪ
ಭುಜವ ಒತ್ತಿ ಹಿಡಿದು;
ಕಳುವಾದಳು ಬಳೆ ಬೀದಿಯಲ್ಲಿ,
ನಂತರ ಯಾವ ಬಳೆ ಸದ್ದೂ ಕೇಳಲಿಲ್ಲ!!

ಮಳೆ ನಿಂತ ಮಣ್ಣ ರಸ್ತೆ,
ನನ್ನ ಹೆಜ್ಜೆಗೆಜ್ಜೆ ನೀಡಿ
ಹಿಂಬಾಲಿಸಿ ಬರುತಿದ್ದಳು
ಜಾರು ಕಣಿವೆ ನಡುವೆ;
ಕಣ್ಣ ಮುಚ್ಚಿ ಹುಡುಕು ಎಂದು
ತಾಕೀತು ಮಾಡಿದಳು,
ಕಣ್ಬಿಟ್ಟರೆ ಸೋಲುವೆನೆಂದು
ಕತ್ತಲಲ್ಲೇ ಬದುಕಿರುವೆ, ಆಕೆ ಎಂದಾದರೂ ಸಿಗಬಹುದೆಂದು!!

ಒಂಟಿ ದೀಪದುರಿಯಲ್ಲಿ
ರಾಗಿ ಹುಲ್ಲ ಉಪ್ಪರಿಗೆಯ 
ತೋಟದ ಮನೆ ಬಾಗಿಲೂ
ನನಗಾಗಿಯೇ ಕಾದಿತ್ತು;
ಒಳಗೆ ಆಕೆ ಅಡುಗೆಯೊಡನೆ
ಎಲೆ ಬಡಿಸಿ ಕಾದಿದ್ದಳು,
ಮಿಂಚೆರಗಿ ಸುಟ್ಟು ಹಾಕಿತೆನ್ನ ಮನವ,
ಬೆಳಕಿಗೂ ಅಂದಿನಿಂದ ಬಹಿಷ್ಕಾರ!!

ನಕ್ಷತ್ರವಾದ ಆಕೆ ತಾರಕದಲ್ಲಿ;
ನನಗೂ ಮಣ್ಣಿಗೂ ಋಣವಿಲ್ಲ,
ನಿದ್ದೆಗೊಡದ ಇರುಳು,
ಬದುಕಗೊಡದ ಹಗಲು;
ನಡುನಡುವೆ ಚಂದ ಕನಸು
ನಿಜಗಳೇ ಬಲು ದಾರುಣ;
ಅತ್ತ ಮೊದಲಾಗಿ ಅರ್ಧಕ್ಕೆ ನಿಂತ
ಅಪೂರ್ಣ ಕವಿತೆಯೊಳಗೂ ಆಕೆಯ ನಗು!!

ಸಂತೆಯ ತೆರವುಗೊಳಿಸಿ,
ಕಣಿವೆಯನ್ನೆಲ್ಲಾ ಜಾಲಾಡಿ,
ದೀಪಕ್ಕೂ, ಮಿಂಚಿಗೂ ತಣ್ಣೀರೆರೆದು,
ತಾರಕ ವ್ಯಾಪ್ತಿಗೂ ತೆರೆ ಎಳೆದು,
ಹಗಲಿರುಳುಗಳ ಒಂದು ಮಾಡಿ,
ಕವಿತೆ ಪೂರ್ಣಗೊಳಿಸಲು ಕೂತೆ
ಪುನರ್ಜನ್ಮ ಪಡೆದವಳಂತೆ
ಮೆಲ್ಲಗೆ ನನ್ನ ಆವರಿಸಿಕೊಂಡು, ಕೊನೆ ಉಸಿರೆಳೆದಳು!!

                                                      -- ರತ್ನಸುತ

Comments

  1. ನಾನು ಮಾಮೂಲಿಯಾಗಿ ’ಸಾವು’ ವಸ್ತುವನ್ನುಟ್ಟುಕೊಂಡು ಬರೆದ ಕವನಗಳನ್ನು ಓದುವುದೇ ಇಲ್ಲ.
    ಆದರೆ ಈ ಕವನವು ಬಹು ಅರ್ಥಗರ್ಭಿತ ಮತ್ತು ತೂಕದ್ದಾಗಿದೆ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩