ಅದಮ್ಯ ಪ್ರೇಮ

ಬರುವ ಮುನ್ನ ಹೇಳಿ ಬಾ
ಹೊರಡುವಾಗ ಹೇಳದಿರು
ಹೃದಯ ಸೂಕ್ಷ್ಮವಾಗಿದೆ
ಅಚ್ಚರಿಗಳ ಸಹಿಸದು;

ನಿನಗಿಂತಲೂ ನಿನ್ನ
ನೆರಳೇ ಹೆಚ್ಚು ಪರಿಚಿತ,
ಕಾರಣ ನಿನಗೂ ಗೊತ್ತು
ಆಗಂತುಕಳಂತೆ ನಟಿಸದಿರು!!

ಸಿಹಿ ನಗುವ ಸಿಂಪಡಿಸಿ
ಕೆಂಗುಲಾಬಿ ಮೊಗ್ಗುಗಳ
ನೀ ಅರಳಿಸುವಾಗ 
ನಾ ದಳದ ದ್ವಾರ ಪಾಲಕ!!

ನೀ ಭೂಮಿಯ ಮೆಟ್ಟಿ,
ಗೆಜ್ಜೆ ಸದ್ದಿಗೆಚ್ಚರಿಸಲು
ಮಳೆಯಾಗಿರಬೇಕು,
ಮುಗಿಲ ಮುಟ್ಟಿ ಸಂಭ್ರಮ!!

ಊದುಗೊಳವೆ ಕೊಳಲಾದ
ಕಥೆಗೆ ನೀನೇ ಪೂರಕ,
ಒಲಯ ಉರಿಗೆ ಸಾವೇ ಇಲ್ಲ
ಉಸಿರೇ ಸುರರ ಪಾನಕ!!

ಮನೆಯ ಮುಂದೆ ತೋರಣ
ಕಟ್ಟಿ ವರುಷವಾದರೂ 
ಬಾಡುವ ಮನಸಿಲ್ಲ,
ನಿನ್ನ ಕುರುಳು ಸೋಕಿತೇ?

ಮರಳಗಾಡ ದಣಿವು ನಿನು
ದಾಟಿಸೋಕೆ ಕಡಲು ಬರಿದು;
ಕ್ಷಿತಿಜದೊಂದು ದನಿಯು ನೀನು
ಕರೆಯದೇನೆ ಸೆಳೆದು!!

ಗಮ್ಯ ನಿನ್ನ ಪ್ರೇಮ
ಅದಮ್ಯ ಅದರ ದಾರಿ;
ಚೂರು ಪೆದ್ದ ನಾನು
ನಡೆವೆ ನಿನ್ನ ಸೇರಿ!!

            -- ರತ್ನಸುತ

Comments

Popular posts from this blog

ಜೋಡಿ ಪದ

ಗರುಡ ಪ್ರಯತ್ನ ೩

ಗರುಡ ಗೀತ ಸಾಹಿತ್ಯ ೧