Tuesday 10 June 2014

ಆಕಾಶ ಮೈನೆರೆದು

ಮುಗಿಲ ಮರೆಯ ಬೆಳಕಿಗೆ
ಇಂದೇಕೋ ನಾಚಿಕೆ
ಬರಲೊಲ್ಲದು ಈಚೆಗೆ;
ತೆರೆ ಹಿಂದಿನ ಹೊಸಗೆ ಹೆಣ್ಣು,
ಮಾಗಿ ಕೆಂಪು ಗಲ್ಲ ಹಣ್ಣು,
ಚೂರು ಕದಲಿ ಮುಗಿಲ ಗರಿ
ಹೊಂಬಣ್ಣದ ಮುದ್ದು ಕುವರಿ
ಬಾಗಿನಕೆ ಬರುತಿಹಳು!!

ಭೂಮಿ ಕಣ್ಣೆದುರಿನ ಕೂಸು
ಮೈ ನೆರೆದ ನೀಲಿ ಹೂವು
ಕೊಂಚ ಬಿಳಿ, ಕೊಂಚ ಕಪ್ಪು
ಕೊಂಚ ಮೊಗ್ಗು, ಕೊಂಚ ಎಳೆಸು;
ಕೆನ್ನೆ ಗಿಂಡಿದರೆ ಉದುರುವ
ಆಲಿಕಲ್ಲ ಮುತ್ತುಗಳು,
ದುರದಿಂದ ಪ್ರಜ್ವಲಿಸುವ
ಮಧುರಾಮೃತ ಕಂಗಳು!!

ಕದ್ದು ಮುಚ್ಚಿ ಹಿಗ್ಗಿಕೊಂಡ
ಮೇರು ಶಿಖರದಂಚು
ಮದುಮಗನ ಮುತ್ತಿಕೊಂಡ
ಬೆಳ್ಳಿ ಮೋಡ ಮಂಜು;
ನದಿ ಅಲೆಯೋ, ಕುಂಚ ಕಲೆಯೋ
ದುಮುಕುವ ಚಿತ್ತಾರ,
ಮರಳ ದಂಡೆ ಅತಿಥಿ ತಾಣ
ಅಲೆಗಳ ವೈಯ್ಯಾರ!!

ಪನ್ನೀರ ಸಿಂಪಡಿಸಿ
ಹುನ್ನಾರ ನಡೆಸುತಿದ್ದ
ಆಸೆ ಉಕ್ಕಿ ತುಂಬಿ ಬಂದ
ಕಾರ್ಮುಗಿಲೊಂದೆಡೆಗೆ;
ನೆರೆದವರ ನಡುವೆ 
ಕಳೆದ ಚಪ್ಪಲಿ ಹುಡುಕುತಲಿದ್ದ
ಊಟದ ಪಂಕ್ತಿಯಲಿ ಕಂಡ
ಚಂದಿರನೂ ಕಡೆಗೆ!!

ತುಸು ಚಳಿಯಲಿ ಬೆವರರಿಸಿದ
ಕಾಡು ಮರದ ಬೇರು
ಹುಲ್ಲಿನುಪ್ಪರಿಗೆ ಕೆಳಗೆ
ಮೂಖ ಕಲ್ಲ ಹಾಡು
ಚಿನ್ನ ಬೇಡ, ಬೆಳ್ಳಿ ಬೇಡ
ರೇಷಿಮೆ ಬೇಡವೇ ಬೇಡ,
ಹೊತ್ತು ತನ್ನಿ ಕೆಂನ್ನೀರು
ಸೋಬಾನೆ ಹಾಡ;

ಬೆಳಗಿ ಬಾನಿಗೆ
ಧರೆಗೆ ಹನಿಯ ದೇಣಿಗೆ!!

                  -- ರತ್ನಸುತ

1 comment:

  1. ಸಂಪೂರ್ಣ ವಿಭಿನ್ನ ವಸ್ತುವನ್ನು ಚೆನ್ನಾಗಿ ಮಂಡಿಸಿದ್ದೀರ. ಕವಿತೆಯ ಶೀರ್ಷಿಕೆಗೆ ಉಧೋ...

    ಬೆಸ್ಟ್:
    ಕೆನ್ನೆ ಗಿಂಡಿದರೆ ಉದುರುವ
    ಆಲಿಕಲ್ಲ ಮುತ್ತುಗಳು,

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...