Wednesday 25 June 2014

ಹೀಗೊಂದು ಕಿಚ್ಚು

ಕಣ್ಣಂಚಲಿ ಕಾಡ್ಗಿಚ್ಚನು
ಹೊತ್ತು ತಂದ ಅವಳೆದುರು
ನಾ ಹಪ್ಪಳವಾದ ತೋರಣ;
ಆಕೆ ಸಿಡುಕಿ ಮಾತನಾಡುವಾಗ
ನಸು ನಕ್ಕರದು ದಾರುಣ!!

ಕೋಪ ಕೆನ್ನೆಯ ಮೇಲೆ
ತೊಟ್ಟು ನೀರ ಚೆಲ್ಲಿದಾಗ
ಅಬ್ಬಬ್ಬ್ಬಾ, ಚುರ್ರೆಂದು ಹಿಂಗಿತು!!
ಇನ್ನು ತುಟಿ ಮೆತ್ತುವುದು ಬೇಡೆಂದು
ದೂರುಳಿವುದೇ ಒಲಿತು!!

ಕಿವಿ ಆಲೆಯ ಮೇಲೆ
ಕೊತ, ಕೊತ ಕುದಿಯುವಂತೆ 
ಕೆಂಪು ರಂಗಿನ ಬೆಲ್ಲ ಪಾಕ,
ಶಾಖಕ್ಕೆ ಸುರುಳಿಕೊಂಡು
ಮುದುಡಿ ಕೂತ ಕುರುಳು ಪಕ್ಕ!!

ಉಬ್ಬು ಏರಲು ಹಣೆಯ ದಿಬ್ಬದ
ಒಂಟಿ ತಾರೆಯು ಮಡತೆಯಲ್ಲಿ;
ಕಣ್ಣ ಸುತ್ತಲ ಮಸಿಯ ಕಾಡಿಗೆ
ಮಿಥ್ಯೆ ಕಾಲಲಿ ಜಾರಿತಲ್ಲಿ!!

ತಬ್ಬುವ ಮನ ಹಿಂದೆ ಅವಿತಿದೆ
ಒಂದೊಂದನೇ ಇರಿದಳಾಕೆ;
ಉಗುರು ಬೆಚ್ಚಗೆ ಉಳಿಯಿತಲ್ಲಿ
ಪರಚುವಾಟದಿ ಗೆಲ್ಲಲಿಕ್ಕೆ!!

                          -- ರತ್ನಸುತ

1 comment:

  1. 'ಹಪ್ಪಳವಾದ ತೋರಣ' ಹೊಸ ಪರಿಯ ನುಡಿಗಟ್ಟು ಸಹೋದರ.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...