ಕಾವ್ಯಾಂಕಿತ

ಬರೆಯಬೇಕು ನಿನ್ನ ಕುರಿತು
ಸುಳ್ಳು ಅಕ್ಷರ ಪೋಣಿಸುತ್ತ
ತಡೆಯ ಒಡ್ಡುವ ನಿನ್ನ ನಗುವಲಿ
ಚೂರು ನಿಂತು ಯೋಚಿಸುತ್ತ

ಕಿವಿಯ ಆಲೆಯ ಓಲೆ ಸಂದಿಯ
ಬೇಡಿ ಜಾಗ ಪಡೆಯಬೇಕು
ಅಲ್ಲೇ ಒಂದು ಲಕ್ಷ ಪುಟಗಳ
ಓಲೆ ಬರೆದು ಮುಗಿಸಬೇಕು

ಕಣ್ಣೆವೆಯ ಜೋಕಾಲಿಯ-
ಮೇಲೊಮ್ಮೆ ಹಾಗೆ ಜೀಕಿ ನಿಂತು
ಸಣ್ಣ ಸಾಲಿಗೆ ಬಣ್ಣ ಬಳಿಯುವ 
ಯೋಗ ಕುಂಚಕೆ ಒದಗಿ ಬಂತು

ಲವಣ ಸತ್ವಕೆ ಸಪ್ಪೆ ಪದಗಳ
ಅದ್ದಿ-ಅದ್ದಿ ಒಣಗಿಸಿಟ್ಟೆ
ನಗ್ನವಾಗಲು ಒಲ್ಲೆ ಎಂದವುಗಳಿಗೆ
ಕಾಡಿಗೆ ಪೂಸಿ ಬಿಟ್ಟೆ

ಗುಳಿಯ ಸೇರನು ಮೀರುವಂತೆ
ಕುಪ್ಪೆ ಕುಪ್ಪೆ ಕಾವ್ಯ ಸುರಿದೆ
ಶಾಯಿ ಮುಗಿಯುತ ಬಂದ ಹೊತ್ತಿಗೆ
ನನ್ನ ಹೃದಯವ ನೇರ ಇರಿದೆ

ನವಿರು ತುರುಬಲಿ ಸಿಕ್ಕು ಸಿಕ್ಕಿಗೆ
ಸತ್ತ ಶತ ಸಂಕಲನಗಳಿವೆ
ಗೋರಿ ಕಲ್ಲುಗಳುನ್ನು ನಿಲ್ಲಿಸಿ
ಚುಟುಕು ಪರಿಚಯ ಕೆತ್ತಿಕೊಳುವೆ 

ಎಷ್ಟೇ ಆದರು ಮೂಲ "ನೀನು"
ನಿನ್ನ ಹೆಸರಿಗೆ ಎಲ್ಲ ಅಂಕಿತ
ಮುನಿದು ದೂರುಳಿದವುಗಳಲ್ಲೂ
ಈ ವಿಶಯದೊಳುಂಟು ಸಹಮತ 

                                 --ರತ್ನಸುತ 

Comments

  1. ’ಗೋರಿ ಕಲ್ಲುಗಳುನ್ನು ನಿಲ್ಲಿಸಿ
    ಚುಟುಕು ಪರಿಚಯ ಕೆತ್ತಿಕೊಳುವೆ ’
    ನಮ್ಮ ಪಾಡೂ ಇದೇ...

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩