ಏನೆಲ್ಲ ಅನಿಸುವುದು!!

ಕತ್ತಲಲಿ ನೆರಳನ್ನು
ಕಂಡವಳು ನೀನು
ಬೆಳಕಲ್ಲಿ ಪತ್ತೆ ಹಚ್ಚದೆ ಹೋದೆ ನನ್ನ
ಅಕ್ಷರಕೆ ಮಿತಿಯನ್ನು
ಇಟ್ಟವಳು ನೀನು
ಪತ್ರವ ಪರಿಗಣಿಸು ಹೊರಳಿಸುತ ಕಣ್ಣ!!

ಚಿತ್ರದಲಿ ಮಸಿ ಪೂಸಿ
ಹೊರಟವಳು ನೀನು
ದೋಚುತ್ತ ಇದ್ದಷ್ಟೂ ಬಂಡಾರ ಬಣ್ಣ
ಕ್ಷಣ ಮಾತ್ರದಲಿ ಜೀವ
ತೆಗೆದವಳು ನೀನು
ನೀಡಿದವಳೂ ನೀನೇ ಮರು ಪ್ರಾಣವನ್ನ!!

ಅಧರಕ್ಕೆ ಮೌನವನು 
ಕಲಿಸಿದಾಕೆ ನೀ
ನಾಲಗೆಗೂ ಎಲುಬನ್ನ ಕೊಟ್ಟು ಹೊರಟವಳು
ಎದೆಯಲ್ಲಿ ಉಸಿರನ್ನ
ದೋಚಿದವಳೇ ನೀ
ಸಂಪೂರ್ಣ ಮನವನಾವರಿಸಿಕೊಂಡವಳು!!

ಸ್ವಪ್ನಕ್ಕೆ ಎಳೆನೀರ
ಕುಡಿಸಿದವಳು ನಿನ್ನ
ಕೈ ಬಳೆಯ ಸದ್ದೆಂಬ ಸಿಹಿಯ ಬೆರೆಸಿ
ಮೇಣದ ಕಿಡಿಯಂತೆ
ಕಾರಿದವಳು ನನ್ನ
ಮೈಯ್ತುಂಬ ಪ್ರೇಮದ ಕಿಚ್ಚು ಹೊರೆಸಿ!!

ಗಾಳಿಯಲಿ ಬೆರೆತವಳು
ಆಕಾರವಿರದೆ
ನಾ ಊದಿದ ಉಸಿರು ಬುಡ್ಡೆಯನು ಹೊತ್ತು
ನಾ ಮಿಂದೆದ್ದ
ನೀರಲ್ಲಿ ಉಳಿದವಳು
ಪ್ರತಿ ಅಲೆಗೂ ಒಂದೊಂದು ಹೆಸರನ್ನು ಇಟ್ಟು !!

ಬಾಡಿಗೆ ಕೇಳದೆ
ಇರಿಸಿಕೊಂಡವಳು 
ವೈಭೋಗದಾರಮನೆ ನಿನ್ನ ಆ ಮನಸು
ಸ್ವಂತಕ್ಕೆ ಆದರೆ,
ನಾ ಅರಸನಾದರೆ
ಬಾಳಿಗೆ ಮಿಗಿಲಾಗಿ ಮತ್ತೇನು ಸೊಗಸು?!!

                                       --ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩