ಮಿಣುಕು

ಮೂಗುತ್ತಿ ಕಳಕೊಂಡು
ಕಿಂಚಿಷ್ಟೂ ಚಿಂತಿಲ್ಲ
ಯಾವ ದೆವ್ವ ಮೆಟ್ಟಿಕೊಂತು
ಬಿನ್ನ ನಡತೆಗೆ
ಮೂರ್ಹೊತ್ತೂ ಸಳೆಕೊಂಡು
ಬೆನ್ನ ಹಿಂದೆ ಬೀಳುತೀಯೆ
ಸಬೂಬು ಏನ ನೀಡಬೇಕು
ದೇಹ ಜಡತೆಗೆ

ಕೆಂಪೆದ್ದ ನಾಲಗೆಯಲಿ
ನನ್ನ ಕೋಪ ಬಿಂಬಿಸುತ್ತ
ಮತ್ತೂ ಸುಣ್ಣಗಾಯಿ ತೀಡಿ
ಸುಟ್ಟುಕೊಳ್ಳುವೆ
ಇರಲಿಯೆಂದು ಚೂರು-ಪಾರು
ಘದರು ಗಾಂಭೀರ್ಯದಲಿ
ಅಂಗಿ ಕೊನೆಗೆ ನಿನ್ನ ಸೆರಗ
ಕಟ್ಟಿಕೊಳ್ಳುವೆ

ಮೊನ್ನೆ ತಂದ ಕೆಂಗುಲಾಬಿ
ಹಾಳೆ ನಡುವೆ ವ್ಯರ್ಥವಾಗಿ
ಮರು ಹುಟ್ಟಿನ ಹಕ್ಕಿನಲ್ಲೇ
ಸಿಟ್ಟು ಬೀರಿದೆ
ಸಂತೆಯಲ್ಲಿ ಕೊಡಿಸದಂಥ
ಮಣಿಯ ಸರಕೆ ಮುನಿಸಿಕೊಂಡೆ
ಹಠವ ಜೊತೆಗೆ ಹೊತ್ತು ತಂದೆ
ಬಿಟ್ಟು ಬಾರದೆ

ಘಾಟು ನುಡಿಯ ಕೊಂಕಿನಲ್ಲಿ
ದಾಟಿ ಬರುವೆ ಎಲ್ಲ ವಾದ
ಸೋತ ದಿನದಿ ಮಾತ್ರ ನೀನು
ಸತ್ಯ ಸುಂದರಿ
ಹೇಳಿ ತೀರದಂಥ ಮಾತು
ಪಳಗಿತಲ್ಲ ಸೋತು-ಸೋತು
ಹೊಗಳಿಬಿಟ್ಟರಲ್ಲಿ ಮುಗಿಯದಲ್ಲ
ವೈಖರಿ

ಮೂಗುತ್ತಿ ಹುಡುಕಾಟಕೆ
ನನ್ನ ಸಂಗ ಕರೆದು ನೋಡು
ಸಿಗದ ಅದಕೆ ಹೊಸತು ರೂಪ
ಮತ್ತೆ ನೀಡುವೆ
ಕಳ್ಳತನದ ಅರಿವಿನಲ್ಲೂ 
ಅರಿಯದಂತೆ ನಟಿಸುತೀಯೆ
ಮೌನ ವಹಿಸಿದಾಗ ಮುಷ್ಠಿ
ಬಿಡಿಸಿಕೊಳ್ಳುವೆ

                         --ರತ್ನಸುತ

Comments

  1. ಯಾವುದೋ ಪುಳಕಕ್ಕೆ ಮನಸ್ಸು ಈಡಾಯಿತು. ಅ ಮಿಣುಕು ಚಿತ್ರಗಳು ಸಾದೃಶವಾದವು.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩