Tuesday 29 April 2014

ಕಲ್ಲಾದರೆ ನಾನು

ನಾ, ಕೈ ಕಡಿದ 
ತಲೆ ಉರುಳಿದ ಶಿಲೆ,
ನೆಲ ಕಚ್ಚಿದ ಜಡತೆಯ
ನಿರಾಕಾರ ಕೆತ್ತನೆ!!

ನನ್ನ ಯಾರೂ ಮುಟ್ಟಿದವರಿಲ್ಲ
ಎಲ್ಲರೂ ತಟ್ಟಿದವರೇ
ಉಳಿಯ ತಲೆ ಮೊಟಕಿ
ಸುತ್ತಿಗೆಯ ಬಡಿದು!!

ಊರಾಚೆಗಿನ ಹೆಬ್ಬಾಗಿಲ
ಅಡಿಪಾಯಕ್ಕೆ ಬೇಡವಾಗಿ,
ಅಲ್ಲೇ ಹೆಚ್ಚುವರಿ ಚೂರುಗಳ ನಡುವೆ
ಬಿದ್ದ ಹೆಣ ನಾನು!!

ನನ್ನಿಂದ ದೂರಾದ ಚಕ್ಕೆಗಳು
ಮಳೆ, ಗಾಳಿ, ಬಿಸಿಲಿಗೆ ಮೈಯ್ಯೊಡ್ಡಿ,
ಸವೆದು ನುಣುಪಾಗಿವೆ
ತೊರೆಯ ತರಾತುರಿ ಹ(ಅ)ರಿವಿಗೆ ಸಿಕ್ಕಿ!!

ಬಚ್ಚಲ ಮನೆಯಲ್ಲಿ  
ಮೈ ಕೊಳೆ ಬಿಡಿಸಿ
ಧನ್ಯವಾದವು
ಕಳಂಕಿತವೆನಿಸಿಕೊಳ್ಳಲಿಲ್ಲ!!

ನೆತ್ತರಂಟಿಸಿಕೊಂಡು ಅಟ್ಟಹಾಸ-
ಮೆರೆದವರ ತಾಳಕೆ ಕುಣಿದವು ಕೆಲವು,
ಕುಂಟೇ ಬಿಲ್ಲೆಗಳಾಗಿ 
ಮಕ್ಕಳಾಟಕೆ ಸಿಕ್ಕವು ಹಲವು!!

ಉರುಳಿದ ತಲೆ ಊರೂರು ಸುತ್ತಿ
ಉರುಟುಗಲ್ಲಾಗಿದೆಯಂತೆ;
ಕಡಿದ ಕೈಗಳೆಂದೋ 
ಆಕಾರ ಕಳೆದುಕೊಂಡಾಗಿವೆ!!

ಕೆತ್ತಿದವರು ಕಾಲನು ಲೆಕ್ಕಿಸದೆ
ಕೆತ್ತದೆಯೇ ಬಿಟ್ಟಿರುವರು;
ಮರುಕ ಪಡಲೀಗ ಕಣ್ಣಿಲ್ಲ
ಕಲ್ಲು ಮನಸು ಮಾತ್ರ!!

                  -- ರತ್ನಸುತ

No comments:

Post a Comment

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...