Wednesday 16 April 2014

ಮತ್ತೊಮ್ಮೆ ಮನಸಾಗಿ

ಬಲಗಾಲ ಇಟ್ಟವಳೇ
ಒಪ್ಪಿಗೆ ಸೂಚಿಸಿದೆ
ಎಡಗಾಲಿಗೆಂಥ ಬಾದೆ;
ರಾತ್ರಿ ಬಾರದ ನಿದ್ದೆ
ನಿನ್ನ ಕುರಿತೇ ಧ್ಯಾನ
ಆಗ ತುಸು ಅರ್ಥವಾದೆ!!

ಕೋಪಗೊಳ್ಳುತ ಹಾಗೆ 
ತಾಪಮಾನಕೆ ಚೂರು
ಏರಿಳಿತ ತಂದೆ ನೀನು;
ಮಾತುಗಾರನ ಕಚ್ಚಿ
ಅಳುಬುರುಕನಾಗಿಸಿ
ಹುಣ್ಣಾಗಿ ಉಳಿದೆಯೇನು?!!

ಕಪ್ಪು ಮೋಡದ ಸಾಲ
ಹೊತ್ತು ತರುವಾತುರ
ಏಕೆ ಆ ಕಣ್ಣೋಟಕೆ?!!;
ಕಣ್ಣ ಕಟ್ಟಿದರೆಂತು
ಪತ್ತೆ ಹಚ್ಚುವೆ ನಿನ್ನ
ಅಂತ್ಯವಿಡು ಜೂಟಾಟಕೆ!!

ಹೂ ಬಿಟ್ಟ ದಿನವೆಲ್ಲ
ನಿನ್ನದೇ ಗುಂಗಿನಲಿ
ಮೈಮರೆತ ಬಳ್ಳಿ ನಾನು;
ನನ್ನಾಸೆಯ ಹಣ್ಣ
ಗೊಂಚಲು-ಗೊಂಚಲಿಗೆ
ಬಾಗಿ ನೆಲ ಕಚ್ಚಲೇನು?!!

ದೀಪದೆಣ್ಣೆ ಮುಗಿದು
ಧೂಪವಾದ ಬತ್ತಿ
ನಾ ನಿನ್ನ ಹೊತ್ತು ಉರಿದು;
ಸುತ್ತ ಮುತ್ತಲ ಬೆಳಕು
ಕತ್ತಲಿಗೆ ಹೆದರಿದೆ
ಚೀರುತ ಅತ್ತು-ಕರೆದು!!

ಗತಿಗಾಣದ ಬಾಣ
ನೀ ಗುರಿಯ ತಪ್ಪಿಸಲು
ಎಲ್ಲೆಂದು ನಾಟಿಕೊಳಲಿ;
ಹೆಚ್ಚು ಜಗ್ಗಿ ತುಟಿಯ
ನೋಯಿಸುವ ಬದಲು
ಇಷ್ಟಕ್ಕೆ ಸತ್ತು ಬಿಡಲಿ!!

ತೀರಕ್ಕೆ ಬರುವೆ
ಬರುವಿಕೆಗೆ ಕಾದು
ತಪ್ಪದೇ ಬರುವೆ ತಾನೆ?!!;
ಇಲ್ಲವೆನ್ನಲು ಏಕೆ
ಸಮಯವ ಕೊಲ್ಲುವೆ?
ಓ ನೀರ ತೊರೆದ ಮೀನೇ!!

ಮರಳಿಗೂ ಮನಸಾಗಿ
ನನ್ನೊಲವ ಬೇಡಿದೆ
ನಿನ್ನ ಕುರಿತಂತೆ ಬರೆದು;
ಸೋನೆಗೂ ಸಹವಾಸ
ಸಾಕಾಗಿ ಹೋಗಿದೆ
ನನ್ನತ್ತ ಸುರಿದು ಝರಿದು!!

ಗೋರಿ ಕಲ್ಲನು ಕೆತ್ತಿ
ಉಳಿಗೂ ಪೆಟ್ಟಾಗಿದೆ
ಸುತ್ತಿಗೆಗೆ ಪಾಪ ಪ್ರಜ್ಞೆ;
"ನೀ" ಬೇಕು ಅನ್ನುವುದು
ಪ್ರೇಮವಾದರೂ 
"ನೀನೇ" ಎಂಬುದು ಪಾಪದಾಜ್ಞೆ!!

                             -- ರತ್ನಸುತ

1 comment:

  1. ಕವಿತೆಯಾಳದ ರಸಿಕ ಮನ ಮನ ಸೆಳೆಯಿತು
    .ಝರಿದು ಒಳ್ಳೆಯ ಪದ ಪ್ರಯೋಗ.

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...