Wednesday 2 April 2014

ಬೆಳಕನ್ನೂ ಕತ್ತಲಾಗಿಸಿ

ನಡುರಾತ್ರಿ ಕರೆಯಲ್ಲಿ
ಇಡಿ ರಾತ್ರಿಗೆ ಖಾಲಿಯಾಗದಷ್ಟು
ಮಾತುಗಳ ಆಡಿಕೊಂಡದ್ದು
ತಾಮಸಕ್ಕೂ ಅಸಹನೀಯವಾದಂತಿದೆ!!

ಬೆಳಕನಿಷ್ಟಕೆ ಬಿಟ್ಟು 
ಚೇತರಿಕೆ ಕಾಣಹೊರಟ 
ಮನಸುಗಳ ಬೇರಾಗಿಸುವ ಅದನು
ಕಣ್ಮುಚ್ಚಿಕೊಳ್ಳುತಲೇ ಬಿಗಿದಪ್ಪಬೇಕಿದೆ!!

ಕಣ್ಣೆವೆಯ ಕಾವಲನು ದಾಟಲಾಗದ ಕಿರಣ
ಬಾಗಿಲಲ್ಲೇ ಉಳಿದು ಸೋಲೊಪ್ಪದಾಗಿರಲು
ಹಠವೆಂಬ ಜಡ ಖಾಯಿಲೆಯ
ಖಯಾಲಿಯನು ಮೈಗೂಡಿಸಿಕೊಂಡು
ಮುಚ್ಚಿದವು ಮುಚ್ಚಿದಂತೆಯೇ ಇದ್ದವಲ್ಲಿ
ಬೆಳಕಿಗೆ ಗಡಿಪಾರು;
ಒಳಗೆ ಕತ್ತಲ ಜಾತ್ರೆ!!

ಅಂತರಗಳ ಪರಿಚಯದ ಪರಿವೇ ಇಲ್ಲದೇ
ಕೂಡಿಸುವ ಮಬ್ಬು
ಹಿಂದೊಮ್ಮೆ ನನ್ನ ನನ್ನೆದುರೇ ನಿಲ್ಲಿಸಿ
ಬೆದರಿಸಿದ್ದ ನೆನೆದು ನಕ್ಕು ಬಿಕ್ಕಾಗ
ಬೇಳಕಿಗೂ ಇಣುಕುವ ಕಾತರ 
ತನ್ನ ಮಧ್ಯಸ್ಥಿಕೆ ತೋರುವ ತುಡಿತ!!

ಅದೆಷ್ಟು ವಿನಿಮಯಗಳು
ರಾತ್ರಿಯ ವಹಿವಾಟಿನಲ್ಲಿ!!
ಸೋತರೂ ಸಿಹಿಯೇ
ಗದ್ದರಂತೂ ಲಾಟರಿ ಹೊಡೆದಂತೆ!!

ಕದಲದ ತುಟಿಗಳ ಕೇಳಬೇಕು,
ಹಚ್ಚಿದ ಕೆಂಪು ಸೀದಾ ಲಜ್ಜೆಗೆ
ನುಣುಪಾಗಿ ಬಳಿವುದೇ ಸೊಗಸು;
ಕಾಣಲು ಕಣ್ಣಿನ ಜರೂರತ್ತಿದೆ
ಬೆಳಕೇ ಬೇಕೆಂಬುದು ಸಣ್ಣತನವಾದೀತು!!

ಮಾತುಗಳು ಮುಗಿದಾಗ 
ಮುಗುಳುನಗೆಯೊಪ್ಪಿಗೆ;
ಅಡಗಿಸಿಟ್ಟವುಗಳು ಥಟ್ಟನೆ ಎಚ್ಚೆತ್ತು
ಸಜ್ಜಾಗುತಾವೆ ಸಮರಕ್ಕೆ
ತಮ್ಮ ನಕಲು ಬಣ್ಣವ ಒರೆಸಿ
ಅಸಲಿಗೆ ಮರಳಲು !!

                                -- ರತ್ನಸುತ 

1 comment:

  1. ಒಂದು ಪುಳಕವನ್ನು ಈ ಕವನ ಹುಟ್ಟು ಹಾಕಿದ್ದಂತು ನಿಜ.

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...