ನನ್ನ ಪ್ರೀತಿಯ ತಾತ

ಹೆಜ್ಜೆ ಗುರುತುಗಳ ಬಿಟ್ಟು
ಸಾಗು ದೇವ ಮಾನವ
ಮೃದು ಮೊಳಕಾಲು, ಪಾದಗಳು
ಇನ್ನು ಅದೆಷ್ಟೋ ಇವೆ
ನಿನ್ನ ಹಿಂಬಾಲಿಕೆಗೆ ಕಾದು

"ಮುಳ್ಳು ಚುಚ್ಚೀತು ಹುಷಾರು"
ಅದಾವ ಲೆಕ್ಕ ನಿನಗೆ?!!
ಬಿರುಕು ಬಿಟ್ಟ ಬೆರಳುಗ-
-ಳೊಂದೊಂದೂ ಸಾಹಸ ಗಾಥೆ,
ಸವರಲೂ ಸಹಿಸಲಾಗದ ನಾನು
ನಿನ್ನ ಶ್ರಮವ ಊಹಿಸಲಿಕ್ಕೂ
ಅನರ್ಹನು!!

ನೆರೆ ತೋಟಗಳಲ್ಲಿ
ಕಳೆ ಚಿಗುರು ಕಣ್ಣಿಗೆ ಬಿದ್ದರೂ
ಚುವುಟಿಹಾಕುವ ನಿನ್ನ ಮನಸಿನ ತೂಕ
ಅದಾವ ಶಿಖರಕ್ಕೆ ಸಾಟಿ?!!
ಮಾತನಲ್ಲಗಳೆದವರೆಡೆ ಬೀಸುವೆ
ಅಸಮಾದಾನದ ಚಾಟಿ!!

ಬಿಳಿ ಕುರುಚಲು ಗಡ್ಡಕ್ಕೆ
ಮುತ್ತಿಕ್ಕಿಸಿಕೊಳ್ಳಲಿಕ್ಕೆ ನೀ ಪಡುತಿದ್ದ ಸಾಹಸ
ಆ ಬಗವಂತನ ಹೊಟ್ಟೆಗೂ
ಚುರುಕು ಮುಟ್ಟಿಸುವಂತದ್ದಾಗಿತ್ತು;
ಕೊನೆಗೂ ಸಿಕ್ಕರೆ ಅದೇ ಖುಷಿ
ಕಾಸಿನ ವಿಚಾರದಲ್ಲಿ ಕಂಡೇ ಇಲ್ಲ
ಮಾಡಿದ್ದು ಚೌಕಾಶಿ!!

ಎಷ್ಟು ಸರಳ ಕಣಯ್ಯ ನೀನು?!!
ನೆನಪಿಗೆ ಬಂದಾಗಲೆಲ್ಲ
ಅದೇ ಪಟಾಪಟ್ಟಿ ಚಡ್ಡಿ,
ಬನೀನು, ಟವಲ್ಲು
ಕಣ್ಣಲ್ಲಿ ಅಂಟಿದ ಗೀಜು
ಅದೇ ಮೆರಗು!!
ಎದೆ ಮೇಲೆ ಮಲಗಿದರೆ
ಕಿವಿಗೆ ಹೃದಯದ ಪಾಠ
ಮೂಗಿಗೆ ಬೆವರಿನ ಪಾಠ
ಕಣ್ಣಿಗೆ ಕನಸಸಿನ ಪಾಠ!!

ಸಣ್ಣವನಾಗಿದ್ದಾಗ ಕೈ ಹಿಡಿದು
ಇಡಿ ಬೆಂಗಳೂರು ಸುತ್ತಿಸಿದ್ದೆ,
ಒಂದೊಂದು ಊರಿಗೂ
ಒಂದೊಂದು ನೆನಪು ಮೆಲಕು ಹಾಕುತ್ತ
ಇಬ್ಬರು ಆಗಲೇ ಕೂತಿದ್ದ
ಬಸ್ಸಿನ ಇಕ್ಕಟ್ಟು ಸೀಟಿನಲ್ಲಿ ನನಗೊಂದಿಷ್ಟು
ಜಾಗ ಹೊಂದಿಸಿದ್ದು ಇನ್ನೂ ನೆನಪಿದೆ!!

"ಎಷ್ಟೆಲ್ಲ ಬದಲಾವಣೆ
ಜಾಗತೀಕರಣ, ಖಾಸಗೀಕರಣ
ಅಭಿವೃದ್ಧಿಗಳ ಹೆಸರಲ್ಲಿ;
ಬದಲಾದ ಹಳ್ಳಿಗಳ ಗುರುತಿಗೆ
ಹಳೆ ಹೆಸರುಗಳು ಓಳ್ಡ್ ಫ್ಯಾಷನ್,
ಯಾವೊಂದೂ ನಾಲಗೆಗೆ ಹೊರಳೊಲ್ಲ" ಎಂದು
ನೀ ನಗುವಾಗಿನ ಹಿಂದೆ
"ನಮ್ಮ ಕಾಲ ಅದೆಷ್ಟು ಚೆಂದ" ಅನ್ನುವ
ನಿಟ್ಟುಸಿರ ಭಾವ!!

ನನ್ನ ಎತ್ತಿ ಆಡಿಸಿದ ಕೈಗಳು
ಈಗ ನನ್ನ ಬೆನ್ನು ಸವರಿ
ತಲೆಯನ್ನು ನೀವುತ್ತಿದ್ದಂತೆ
ಕಣ್ಣುಗಳು ಆಸೆ ಪಡುತ್ತಿವೆ
ಮೊಮ್ಮಗನ ಮದುವೆಗೆ
ಮರಿ ಮೊಮ್ಮಗನ ಕನಸಿಗೆ!!

ತಾತ,
ನಿನ್ನಾಸೆಗಳೆಲ್ಲವೂ ನಿಜವಾಗುತ್ತವೆ
ಪ್ರಾಮಿಸ್!!

                             --ರತ್ನಸುತ

Comments

  1. ಈ ವಿಚಾರದಲ್ಲಿ ತಾವೇ ಪುಣ್ಯಾತ್ಮರು.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩