ಕೃಷ್ಣ ನೀ ನಡೆದಾಗ

ಆಗಷ್ಟೇ ನಡೆಯಲು ಕಲಿತ
ಮುದ್ದು ಎಳೆ ಕಾಲುಗಳಿಗೆ
ಪಾದಕ್ಕಾಗುತ್ತಿದ್ದ ಒತ್ತ್ತಿಗೂ 
ಹೆಚ್ಚು ಖುಷಿ ಕೊಟ್ಟದ್ದು
ಅಂಗೈಯ್ಯ ನಿರಾವಲಂಬನೆ!!

ಮೊಳಕಾಲ ಬಿಗಿ ಹಿಡಿದು
ನೇರ ನಿಲ್ಲುವ ಅದಕೆ 
ಅಂಬೆಗಾಲಿಡುವಲ್ಲಿ ಕಾಡುತ್ತಿದ
ಮಣ್ಣು, ಚೂರುಗಲ್ಲು, ಕಸ-ಕಡ್ಡಿಗಳ
ಗೆದ್ದ ಉಮ್ಮಸ್ಸು!!

ತೂರಾಡುತ್ತಲೇ, ಇಡಬೇಕಾದಲ್ಲೇ
ಇಟ್ಟ ಹೆಜ್ಜೆಗೆ ಒಂದು ಚಪ್ಪಾಳೆ;
ಪೀ-ಪೀ ಸದ್ದಿನ ಚಪ್ಪಲಿ ಧರಿಸಿ
ಆಟವ ಕಾಣಿರಿ ಆಮೇಲೆ!!

ಕೈಯ್ಯಲಿ ಒಂದು ಬಾಟಲಿ ಕಮ್ಮಿ
ಥೇಟು ಕುಡುಕರ ದರ್ಬಾರು,
ತಡಬಡಿಸಿ ಮುಗ್ಗರಿಸಿದರಲ್ಲಿಗೆ
ಅತ್ತು ಕರೆವುದರ ಜೋರು!!

ಅಮ್ಮಳಿಗೋ ಕಾವಲಿನ ಕೆಲಸ
ಎದೆ ಬಿಡಿಸಿಕೊಳ್ಳಲಿಚ್ಛಿಸದಾಕೆ,
ಎಷ್ಟೇ ಚುರುಕುಗೊಂಡರೂ ತುಂಟ
ಹಸಿವ ದಾಟಲಮ್ಮಳೆದೆಯೇ ನೌಕೆ!!

ಗೆಜ್ಜೆ ಕಟ್ಟಿ, ರಂಗೋಲಿ ಮೆಟ್ಟಿ
ಮನೆ ತುಂಬ ಬಾಲ ಕೃಷ್ಣನ ಹೆಜ್ಜೆ
ನೋಡು ನೋಡುತ್ತಲೇ ಬೆಳೆದವನ
ಗುರುತಿಗೆ ಸಣ್ಣ ಕವನದ ದರ್ಜೆ!!

                              -- ರತ್ನಸುತ

Comments

  1. ಈ ಕವನದ ಓದಿದ ಮೇಲೆ, ರಾಧೆ - ಅಂದರೆ ನಮ್ಮ ನಾದಿನಿಯ ಪಾಪುವಿನ ಬಾಲ್ಯದಾಟಗಳು ನೆನಪಾದವು.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩