ಪಾಪಿ ಪಾರ್ಕು

ಇಷ್ಟಿಷ್ಟೇ ಮಾತಾಡಿಕೊಂಡು
ಎಷ್ಟೆಲ್ಲಾ ಮುಂದುವರಿದೆವೋ
ಇಬ್ಬರಿಗೂ ಕಬರ್ರಿದ್ದಿಲ್ಲ;
ಉದುರೊಣಗಿದೆಲೆಗಳಲ್ಲೂ
ನಮ್ಮದೇ ಪುಕಾರು,
ಯಾರೇ ಹೆಜ್ಜೆ ಇಡಲಿ 
ಸಜ್ಜಾಗುತಾವೆ ದೂರಿಗೆ,
ಗಾಸಿಪ್ ದರ್ಬಾರಿಗೆ!!

ಆ ಮರದಡಿಯಲ್ಲೇ ಕೂತು
ಜೋಪಾನವಾಗಿಸಿದೆವು
ಲೋಕದ ಕಿವಿಗೆ ಬೀಳದಂತೆ ಗುಟ್ಟುಗಳ;
ಈಗ "ಪೇ ಬ್ಯಾಕ್ ಟೈಮ್"?!!

ಕೆ.ಎಫ್.ಸಿ ವಿಂಗ್ಸ್ ತಿಂದು
ಬಿಸಾಡಿದ ಬೆತ್ತಲೆ ಮೂಳೆಗಳು 
ಆ ಪಾರ್ಕಿನ ತುಂಬ
ರಾಜಾರೋಶವಾಗಿ ಚೆಲ್ಲಾಡಿಕೊಂಡಿವೆ;
ಅದಕ್ಕೂ ತಿಳಿದಿದೆ
ನಮ್ಮ ದೌರ್ಬಲ್ಯಗಳು!!
ಅಂದು ನೀ ಕಣ್ಣೀರಿಟ್ಟಿದ್ದು ದುಃಖಕ್ಕೋ,
ಚಿಕನ್ ಮಸಾಲೆ ಘಾಟಿಗೋ? ಇನ್ನೂ ತಿಳಿದಿಲ್ಲ!!

ಟಿಶು ಪೇಪರ್ರಿಗೆ ದೇಣಿಗೆ ಕೊಟ್ಟು
ಬಿಟ್ಟು ಕೊಟ್ಟದ್ದೇ ತಪ್ಪಾಯಿತು ನೋಡು,
ಬೀದಿ ಬೀದಿಗಳಲ್ಲಿ ಅಬ್ಬೇಪಾರಿಗಳಾಗಿ
ಡಂಗೂರ ಸಾರಿಸುತ್ತಿವೆ
ಸಣ್ಣ ವಿಷಯಕ್ಕೂ 
ಉಪ್ಪು, ಹುಳಿ, ಖಾರ ಬೆರೆಸಿ;
ಕೆಲವಿಗಂತೂ ನಾ ಗೀಚಿ ಬಿಟ್ಟ
ಕಿರುಗವನಗಳ ಸಲುಗೆ ಬೇರೆ!!

ಪಾರ್ಕಿನ ಬಳ್ಳಿಗಳೆಲ್ಲ ಆಗ
ಸೈಲೆಂಟಾಗಿದ್ದವು ಪಿಸು ಮಾತನಾಲಿಸಿ;
ಈಗಲೋ, ಎಲೆಯೆಲೆಗೂ ಗರ್ವ,
ಹೂಗಳಿಗೆ ಪರ್ವ!!

ಯಾರೇ ಎದುರಾಗಲಿ 
ನನ್ಹೆಸರಿಗೆ ನಿನ್ನದನ್ನ
ಇಲ್ಲವೆ
ನಿನ್ಹೆಸರಿಗೆ ನನ್ನದನ್ನ ಜೋಡಿಸಿ
ಪ್ರಶ್ನೆಗಳ ಕೆದಕಿದಾಗ 
ಸಿಹಿ ನಿಂಬೆ ಶರ್ಬತ್ತಿನ ಬದಲು
ಸಿಪ್ಪೆಯ ಕಹಿಯೇ ನೆನಪಾಗುತ್ತೆ
ಅದಕ್ಕಾಗಿಯೇ ಆ ಪಾರ್ಕಿಗೆ
ನನ್ನ ಬಹಿಷ್ಕಾರ!!

                          -- ರತ್ನಸುತ

Comments

  1. ಇದೇ ರೀತಿಯಲ್ಲಿ ನಾನೂ ಹಲವು ಪರ್ಕುಗಳಿಗೆ ಭಹಿಷ್ಕಾರ ಹಾಕಿದ್ದೇನೆ! :(

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩