Tuesday 29 April 2014

ಮನಸಿಗೂ ಮನಸಾಗಿ

ನಿಜದಲ್ಲಿ ಸುಳ್ಳೊಂದ
ಹುಡುಕುವ ಬರದಲ್ಲಿ
ಸುಳ್ಳಿನ ಮೌಲ್ಯವ ಹೆಚ್ಚಿಸೋದೇ?
ನೀ ನನ್ನ ಗುಟ್ಟಾಗಿ
ಹುಡುಕಾಡುವ ವೇಳೆ
ರಟ್ಟಾದ ನಾ ನಿನಗೆ ಕಾಣದಾದೆ!!

ಭಯದಲ್ಲಿ ಬಲವಾಗಿ
ಒಲವಲ್ಲಿ ಬಿಗಿಯಾಗಿ
ದಿನವೆಲ್ಲ ಅನುಕಂಪದ ಯಾತನೆ;
ಸಮಯಕ್ಕೆ ಶರಣಾಗಿ
ನಡೆದಾಗ ಸರಿಯಾಗಿ
ಸಿಗುವುದೇ ಸರಿಮಾರ್ಗದ ಸೂಚನೆ!!

ಕಣ್ಣೀರ ತಳದಲ್ಲಿ
ಕಂಡದ್ದು ನಾವಲ್ಲ
ನಮ್ಮೊಳಗಿನ ನಾನು ನೀನಲ್ಲವೇ?
ಕೈಯ್ಯಲ್ಲಿ ಕೈಯ್ಯಿಟ್ಟು
ಕಣ್ಣನ್ನು ಬೆಸೆವಾಗ
ಮೌನಕ್ಕೂ ಹಾಡೊಂದ ಹೊಸೆದಿಲ್ಲವೇ?

ಹೊಸದಾಗಿ ನೂರಾಸೆ
ಮೈ ನೆರೆದುಕೊಂಡಾಗ
ತಡೆದದ್ದೇ ತಾನಲ್ಲಿ ತಪ್ಪಾಯಿತು;
ನೀನೆಲ್ಲೋ ನಾನೆಲ್ಲೋ 
ಉಸಿರಾಡಿಕೊಂಡಾಗ 
ಎದೆಗೂಡಲೂ ಬಿರುಕು ಉಂಟಾಯಿತು!!

ಬಂದದ್ದು ಬರಲೆಂದು
ಇದ್ದಾಗಲೇ ನಾವು
ತೆಕ್ಕೆಯಲಿ ಇನ್ನಷ್ಟು ಬಲವಾದೆವು;
ಒಂದಾದ ನಾವಿಂದು
ಸಿಡಿದು ಚೂರಾದಾಗ
ಬಿಡಿಯಾಗಿ ಇಷ್ಟಿಷ್ಟೇ ಬಲಿಯಾದೆವು!!

ಮತ್ತೊಮ್ಮೆ ಹೊಸದಾಗಿ
ಇದಕಿಂತ ಮಿಗಿಲಾಗಿ
ಬಾಳೋದು ಅನಿವಾರ್ಯವೇ ಆಗಿದೆ;
ಏನೆಲ್ಲ ಆಗಿಹುದು
ಎಲ್ಲವನೂ ಮರೆಯುತ
ಮನಸಾಗಲು ಮನಸು ಮುಂದಾಗಿದೆ!!

                                    -- ರತ್ನಸುತ

1 comment:

  1. ಭವಿತವ್ಯ ಬಂಗಾರವಾಗಲೆಂಬ ಆಶಯ ನೆಚ್ಚಿಗೆಯಾಯಿತು.

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...