ವಿಷಕಾರಿ ಹುಡುಗಿ

ಉರುಟುಗಲ್ಲುಗಳ ಸೆರಗಿಗೆ ಕಟ್ಟಿ
ಯಾವ ತೊರೆಯ ತಡೆಯುವ ಪಯತ್ನ?
ಸುಮ್ಮನೆ ಪಾದವ ಹರಿವಿಗೆ ನೀಡಿ
ಕಾಣಬಾರದೇ ಸಾವಿರ ಸ್ವಪ್ನ?!!

ಮುತ್ತುಗದೆಲೆಗಳ ಚುಚ್ಚಿ ಕೂಡಿಸಿ 
ಯಾವ ಔತಣ ಕೂಟಕೆ ಸಜ್ಜು?
ಕಣ್ಣಿಗೆ ಬಿದ್ದ ಧೂಳನು ಹಿಡಿದು
ಕೂಡಿಸುವೇಕೆ ನೆನಪಿನ ಗೀಜು?!!

ಬಳೆಗಳ ಕಳಚಿ ಪಕ್ಕಕೆ ಇಟ್ಟೆ
ಒಣ ಎಲೆಗಳ ಜೀವಂತಿಕೆ ಕಾಣು;
ಹೆಬ್ಬೆರಳು ಗೀಚಿದ ರಂಗೋಲಿಯ
ಗುರುತು ಹಚ್ಚಿತೇ ಬಣ್ಣದ ಮೀನು?!!

ಆಚೆ ದಡದ ಗೊಲ್ಲನ ಕೊಳಲು
ನಿಚ್ಚಲವಾಗಿಸಿತೇ ಕೈ ಬೆರಳ?
ಆಗಸದಾಚೆ ಎಲ್ಲೋ ದೂರಕೆ
ಚಾಚಿದೆಯೇನು ಮನದೊಳ ತುಮುಲ?!!

ಸಂಜೆಯ ಬಾನು ಗಲ್ಲಕೆ ತಾನು
ಸವರಿಕೊಂಡಿದೆ ಸೋಜಿಗವಲ್ಲ;
ಹನಿದ ಕಂಬನಿ ಮುತ್ತಿದರೂನು
ಕಾಮನ ಬಿಲ್ಲು ಮೂಡುತಲಿಲ್ಲ!!

ಮುಗಿಲಿನ ಸಾಲು, ನೀರಿನ ಬಿಂಬ
ಹೋಲಿಕೆಯಲ್ಲಿ ಉಳಿದವು ದೂರ
ತೊರೆಗೆ ಕೊನೆ ತಾನಿರುವುದು ಒಂದೇ
ನಡುವೆ ನೂರು ತವರಿನ ತೀರ!!

ಸತ್ತ ಮೀನು ತೇಲಿತು ತಾನು
ಚಂದ್ರನ ಹೆಣದ ಒಟ್ಟಿಗೆ ಅಲ್ಲಿ;
ನಿಟ್ಟುಸಿರ ವಿಷ ಕಾರಿ ಹೋದೆಯಾ?
ಉತ್ತರ ಅರಸಿಯೂ ಸಿಗದಿರುವಲ್ಲಿ!!

                                --ರತ್ನಸುತ

Comments

  1. ಮನೋ ವಿಷಯುಕ್ತ ಅವಳಿಗೆ ಅದಕೇ ಸಲೀಸಾಗಿ ತೊರೆದಳೆರನೋ!

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩