ನಾ ಇದ್ದಂತೆಯೇ ಇದ್ದಾಗ!!

ತರಾತುರಿಯ ಆಟದಲ್ಲಿ
ಗೆದ್ದರೆ ಬೇಸರಿಕೆ,
ಸೋತರೆ ತಲೆ ತುರಿಕೆ!!

ಬದುಕೂ ಒಂಥರ ಹಾಗೇ;
ಎದುರು ನೋಟವ ಹಾದು,
ಒದರಿಕೊಳ್ಳುವುದು
ಅನಿರೀಕ್ಷಿತ ಅಚ್ಚರಿಗಳ!!

ಒಪ್ಪುವುದೋ, ತಪ್ಪುವುದೋ
ತಿಳಿದುಕೊಳ್ಳುವಷ್ಟರಲ್ಲೇ ಮಾಯ;
ಎಲ್ಲವನ್ನೂ ರೆಪ್ಪೆ ಬಡಿತದಷ್ಟೇ
ಸೂಕ್ಷ್ಮವಾಗಿರಿಸಿಕೊಳ್ಳುವುದು
ತಲೆನೋವಿಗೂ ತಲೆ ಬಿಸಿ!!

ಮೊನ್ನೆ ಮೊನ್ನೆಯಷ್ಟೇ
ಬೀದಿ ಹೆಣಕ್ಕೆ ಕೈ ಮುಗಿದು
ಪಕ್ಕದಲ್ಲದ ಪಕ್ಕ ಬೀದಿಯಲ್ಲಿ
ನಾಯಿಗಳ ಕಾಟಕ್ಕೆ ಕೈಲಿ ಕಲ್ಲು ಹಿಡಿದು
ನಡೆಯುತ್ತಿದ್ದಾಗ ಕಂಡಳು;
ಅಬ್ಬಬ್ಬಾ, ಅದೇನಿದ್ದಳು!!
ಆಗಲೇ ಅವಳ ಮಡುವೆ?...

ಓದಿಕೊಂಡ
ಸ್ಕೂಲು, ಕಾಲೇಜುಗಳಿಗೆ
ನಮ್ಮ ನೆನಪುಗಳಂತೆ
ಮುಪ್ಪೇ ಆಗೊಲ್ಲವೇ?!!
ವರ್ಷದಿಂದ ವರ್ಷಕ್ಕೆ
ಬಿಳ್ಡಿಂಗ್ ಫಂಡಿನ ಫಂಡಾ,
ನಮ್ಮ ಜನ್ಮಕ್ಕೂ ಇರಬೇಕಿತ್ತು
ಏರಿಸಿ ಬಿಡಬಹುದಿತ್ತು ಆಕಾಶಕ್ಕೆ!!

ಮೆನೆ ಮುಂದಿನ ಖಾಲಿ ಸೈಟಲಿ
ಪಾರ್ಥೇನಿಯಂ ಗಿಡಗಳಿಗೇನು ಅವಸರ
ಅಷ್ಟು ಬೇಗ ಬೆಳೆದು ಬಿಟ್ಟವು;
ಅಷ್ಟರಲ್ಲೆ ಪಾಯ ತೋಡಿಕೊಂಡು
ಒಂದು, ಎರಡು, ಮೂರು, ನಾಲು ಅಂತಸ್ತು 
ನಿಂತೇ ಬಿಟ್ಟಿತು ಕಟ್ಟಡ
ನನ್ನನ್ನ ಕುಬ್ಜವಾಗಿಸಿ!!

ಪಾರ್ಕಿನಲ್ಲಿ ನೆಟ್ಟ ಗಿಡಗಳು
ಹೂ ಬಿಟ್ಟು ನಳನಳಿಸುತ್ತಿವೆ;
ನನ್ನ ಕಾಣುತ ನಕ್ಕು
ಬೇರಿಗೆ ವ್ಯಂಗ್ಯ ಪರಿಚಯ ಮಾಡಿಸಿ;
ರಸ್ತೆ, ಕಾಂಪೌಂಡು, ಲೈಟ್ ಕಂಬ
ಪೋಲಿ ಟೆಂಟು, ತರ್ಕಾರಿ ಮಂಡಿ
ಎಲ್ಲವೂ ಬದಲಾಗಿವೆ,
ದಿಢೀರನೆ!!

"ತಾಳಿದವನು ಬಾಳಿಯಾನು" ಎಂಬ
ಮಾಸಲು ಸ್ಟಿಕ್ಕರ್ರು ಅಂಟಿದ 
ರೂಮಿನ ಬೀರೂವಿನಲ್ಲಿ
ಅದ ಅಂಟಿಸಿದ ಮುತ್ತಾತನ
ಹರಿದ ಜೋಡಿದೆಯಂತೆ;
ಎಷ್ಟು ಹುಡುಕಾಡಿದರೂ
ಸಿಗುತ್ತಲೇ ಇಲ್ಲ!!

                           -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩