Tuesday 29 April 2014

ತೊಂಬತ್ತು+ಚಿಲ್ಲರೆಯ ಹುಡುಗಿ

ಲೋಟವನ್ನ ತುಟಿಗೆ ತಾಕಿಸದಂತೆ
ಮೇಲೆತ್ತಿ ಕುಡಿಯಲು ಹೆಣಗಾಡುತ್ತಿದ್ದ
ಹಣ್ಣು ಮುದುಕಿಗೆ ಬೇಕಾದ್ದದ್ದು
"ಪರ್ವಾಗಿಲ್ಲ ಕಚ್ಕೊಂಡೇ ಕುಡಿ ಅಜ್ಜಿ!!"
ಎಂಬ ಅನುಕಂಪವಲ್ಲದ ಸಹಜ ಕಂಠ!!

ಇನ್ನೇನು ನೆನೆಸಿಕೊಂಡ ಸೀರೆಯ 
ಹಾಗೆ ಗಾಳಿಗೆ ತೂರಿ ಆರಿಸಿಕೊಳ್ಳಬೇಕು,
ಹೆಣ್ಣೆಂಬ ಸಂಕುಚಿತ ಭಾವ ಮೊಮ್ಮಗನೆದುರೂ!!
ಕಾಲ್ಕಿತ್ತರೆ ಮಾತ್ರ ಮುಂದಾಗುತ್ತಾಳೆ
ಇಲ್ಲವೇ ನಾಳೆಗೆ ನೆಗಡಿ, ಶೀತದ ವಕ್ರ!!

ಮುದ್ದೆ ಮುರಿಯಲೂ ತರವಲ್ಲದ ಆಕೆ
ನಾಲಗೆ ಚಡಪಡಿಕೆಯಲ್ಲಿ ರಾಜಿ ಆಗುವುದಿಲ್ಲ;
ಉಪ್ಪು ಹೆಚ್ಚಾದರೆ ಹೆಚ್ಚು, ಕಡಿಮೆಯಾದರೆ ಕಮ್ಮಿ,
ಅಸಮಾದಾನವ ಮುಲಾಜಿಲ್ಲದೆ ತೋರುತ್ತಾಳೆ
ಮುಖಕ್ಕೆ ಬಡಿದಂತೆ!!

ನೆರಿಗೆ ಸರಿಯಾಗಿ ಕೂರಿಸದಿದ್ದರೆ
ಸೀರೆ ಉಡಿಸಿದವರ ಪಾಡು ಹೇಳ ತೀರದು;
ಬೆನ್ನು ಬಾಗಿರುವ ಹದಿನಾರರ ಬಾಲೆ,
ನಿಖರತೆಯ ಗುರಿಯಿಡುವ ಮಂಜುಗಣ್ಣು,
ತನ್ನ ನಿಲುವೇ ಸರಿ ಎಂಬ ಮುಗ್ಧ ವಾದ!!

ಅಜ್ಜಯ್ಯನ ಪಟ ಕಂಡರೆ 
ಈಗಲೂ ಎದುರು ಬಂದಷ್ಟೇ ಬೆದರುವ
ಅಮಾಯಕ ವ್ಯಕ್ತಿತ್ವಕ್ಕೆ ಕನ್ನಡಿಯೆಂಬಂತೆ
ದಿನವೂ ಕೈ ಮುಗಿದು ಕಣ್ಮುಚ್ಚುತ್ತಾಳೆ;
ಇಗೋ, ಅಗೋ ಎಂದು ವರ್ಷದಿಂದ ವರ್ಷಕ್ಕೆ
ಹಣ್ಣಾಗುತ್ತಲೇ ಸಾಗಿ!!

ಮನೆ ಮೂಲೆ-ಮೂಲೆಯ ಎಚ್ಚರಿರಿಸುವಳು
ಕುಟ್ಟುತ ತಾಂಬೂಲವ,
ವೀಳೆಯದೆಲೆ ಬೆಲೆ ಏರು-ಪೇರಾದರೂ,
ಗೋಟಡಿಕೆ ಚೂರಾದರೂ;
ಕಡ್ಡಿ ಪುಡಿಯದ್ದೇ ಸದಾ ದೂರು!!

ಅಜ್ಜಿಯ ಪೆಟ್ಟಿಗೆ, ಗುಟ್ಟಿನ ಗೂಡು
ಕದ್ದು ನೋಡುವ ಆಸೆಯಿದೆ;
ಆದರೆ ಅದಕೆ ಎಂದೂ ಬಿಚ್ಚದ
ಹಿತ್ತಾಳೆ ಬೀಗದ ಕಾವಲಿದೆ!!

                        -- ರತ್ನಸುತ

1 comment:

  1. ಸಾದೃಶತೆಯು ನಿಮ್ಮ ಶಕ್ತಿ, ಉದಾ:
    ’ಅಜ್ಜಿಯ ಪೆಟ್ಟಿಗೆ, ಗುಟ್ಟಿನ ಗೂಡು
    ಕದ್ದು ನೋಡುವ ಆಸೆಯಿದೆ;
    ಆದರೆ ಅದಕೆ ಎಂದೂ ಬಿಚ್ಚದ
    ಹಿತ್ತಾಳೆ ಬೀಗದ ಕಾವಲಿದೆ!!’

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...