ಪವನ ಪಾವನಿ

ಗಾಳಿಯ ಹಿಡಿಯೆ ಹೊರಟವ ನಾನು
ನೀ ಗಾಳಿಯಲ್ಲದೆ ಮತ್ತೇನು?!!
ನಿರಾಯಾಸಕ್ಕೆ ಸಿಕ್ಕಿ ಜಾರುವೆ
ಬರಿಗೈಯ್ಯ ಬೊಗಸೆಯಲಿ ನಿಲ್ಲದೆ!!

ನಿನ್ನ ಕಂಪಿನ ಕುರುಹು ನಿನ್ನಲ್ಲೇ ಉಂಟು,
ನಾಸಿಕವನ್ನರಳಿಸಿ, ನರಳಿಸಿ ಹರಿದು
ಮನದಲ್ಲಿ ಉಳಿದಿದ್ದು ಹಳೇ ಸಂಗತಿ;
ಇದು ನೇರ ಪ್ರಸಾರದ ಜೀವ ಮಾಹಿತಿ!!

ಉಡಿಸಲೆತ್ನಿಸುವ ನನ್ನ ಹುಂಬ ಕೈಗಳಿಗೆ
ಸೀರೆ ಅದೆಷ್ಟು ಬಾರಿ ಹೇಳಿತೋ
"ಬಿಡು, ಬಿಟ್ಟುಬಿಡಿದು ವ್ಯರ್ಥ ಪ್ರಯತ್ನ,
ನೆರಿಗೆ ನಡು ಮೇಲೆ ನಿಲ್ಲುವುದು ಹುಚ್ಚು ಸ್ವಪ್ನ!!"

ಬೇಜಾರಿನಲ್ಲಿ ನೇವರಿಸುವೆ ಹಣೆಯ
ಹಿಂದೆಂದೂ ನನ್ನ ಆ ಸ್ಥಿತಿಯ ನೆನಪಿಡದೆ;
ವಿರಹ ಬೇಗೆಗೆ ಚೂರು ಹೆಚ್ಚೇ ಬೆಂಬಲಿಸುವೆ
ತಪ್ಪಿಸಿಕೊಳ್ಳುವ ದಿಕ್ಕುಗೊಡದೆ!!

ತಲೆ ಕೆಡಿಸುವ ನೂರು ವಿಷಕಾರಿ ವಿಷಯಕ್ಕೆ
ಮೈಯ್ಯಾಗುವೆ ಸುಲಭವಾಗಿ ನೀನು,
ಶ್ವಾಸಕೋಶದಿ ನಿನ್ನ ಬಹಳ ಹಿಡಿದಿಡಲಾರೆ
ಬದಲಾದ ಅವತಾರ ತಾಳಲೇನು?!!

ನಿನ್ನ ಚಲನೆಗೆ ನಾನು ಮೋಡವಾಗುವ ಮುನ್ನ
ಕೆಲ ಕಾಲ ಶಿಖರಗಳ ಮೊರೆ ಹೋಗುವೆ,
ನೀ ಎತ್ತ ಬೀಸುವೆಯೋ ಅತ್ತ ನಾ ಬಾಗುವೆ
ಭಾವು"ಕತೆ"ಗಳ ಪುಟದಿ ಬಲಿಯಾಗುವೆ!!

                                           -- ರತ್ನಸುತ

Comments

  1. ’ನೀ ಎತ್ತ ಬೀಸುವೆಯೋ ಅತ್ತ ನಾ ಬಾಗುವೆ
    ಭಾವು"ಕತೆ"ಗಳ ಪುಟದಿ ಬಲಿಯಾಗುವೆ’
    ಸರಿಯಾಗಿ ಹೇಳಿದಿರಿ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩