ಸೀರೆಯ ಸೋಗು

ಸೀರೆ ಉಟ್ಟವರಲ್ಲಿ ಆಕೆಯಷ್ಟರ ಮಟ್ಟ
ಮುಟ್ಟಿ ಬಂದವರಾರೂ ಕಂಡೇ ಇಲ್ಲ
ಕಣ್ಣ ಕಾಡಿಸುವಷ್ಟು ಚಂದಾದ ಮೈ-
ಹೆಣ್ಣ ಸೃಷ್ಟಿ ಮೂಲಕೆ ಕಟ್ಟುಪಾಡೇ ಇಲ್ಲ!!

ಗಟ್ಟ ಗೂಡಲ್ಲಿ ಗುದ್ದಾಟ ನಡೆಸಿದ ಆಸೆ
ಒಂದೊಂದೇ ಗರಿ ಚಾಚಿ ಹಾರುತಾವೆ;
ಮಂಕು ಬೂದಿಯ ಹೊತ್ತ ಚಿತ್ತ ಕಾಮನೆಗಳು
ಹಿಂದೆಂದೂ ಇರದಂಗೆ ಬಿರಿಯುತಾವೆ!!

ಒಂದು ನಗೆ ದ್ವಿಗುಣಿಸಿತು ತಾರಕ ಮಂಡಲವ
ಗೊಂದಲದ ಮನದಿ ಗಂಧರ್ವ ಹಾಡು;
ಅಲೆಯ ಮೇಲಲೆಯಪ್ಪಳಿಸಿತಲ್ಲಿ ಉಸಿರನ್ನು-
ಬಿಗಿ ಹಿಡಿದಳಲ್ಲೆನಗೆ ಹೆಣದ ಪಾಡು!!

ನೆರಿಗೆ ಸಾಲಿನ ಗುಚ್ಚದಚ್ಚು ನಡುವನು ಕಚ್ಚಿ
ಸ್ವಚ್ಛ ನಾಭಿಯ ಸುತ್ತ ನಾಚುಗೆಂಪು;
ಪಾದ ಊರಿಸುವಲ್ಲಿ ಸಣ್ಣ ಕಂಪನ ಎದ್ದು
ಹೆಜ್ಜೆ ಗೆಜ್ಜೆಯ ಸದ್ದು, ಆತ್ಮ ತಂಪು!!

ಭುಜದಿಂದ ಬಾಜುವದು ದಂತದ ಕೋಲು,
ಸ್ವರಗಳ ಏರಿಳಿತ ಕೈಬೆರಳ ಸಾಲು,
ಎದೆ ಹಾದು ಬೆನ್ನ ಸವರಿದ ಸೀರೆ ಅಂಚು
ಯಾವ ವರ ಒಳಗೊಂಡ ಪುಣ್ಯದ ಪಾಲು?!!

ಹಣೆಯ ಸುಕ್ಕಿಗೆ ಚೆದುರದ ಬೊಟ್ಟು ಚುಕ್ಕಿ,
ಗಲ್ಲವದು ಒಲೆಯ ಹಾಲಂತೆ ತಾ ಉಕ್ಕಿ,
ನೀಳ ಕೊರಳಿನ ಹಾದಿ ತೊಗಲಿನ ಕೊಳಲು,
ಪ್ರೇಮಾಂಮೃತದ ಬುಗ್ಗೆ ಕಣ್ಣಾಳ ಕಡಲು!!

ಉಬ್ಬು ಉಬ್ಬುಗಳೊಲ್ಲದಲ್ಲಿ ಉಬ್ಬಿಲ್ಲ,
ತಗ್ಗು ತಗ್ಗಿಸದಾಗಿ ಮೊಗ್ಗ ತಲೆಯ,
ಮಲ್ಲೆ, ಸಂಪಿಗೆ, ಜಾಜಿ, ಕೆಂದಾವರೆ
ಗುಲ್ಮೊಹರುಗಳಿಗೂ ತಿಳಿಸಿ ಬಿಡುವೆ ವಿಷಯ!!

                                              -- ರತ್ನಸುತ

Comments

Popular posts from this blog

ಜೋಡಿ ಪದ

ಗರುಡ ಪ್ರಯತ್ನ ೩

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!