Tuesday 29 April 2014

ನವಿಲಾದವರು

ಅವರಿಬ್ಬರೂ ನಮ್ಮಂತೆಯೇ
ಲೋಕವ ಮರೆತ ಮರುಳರು;
ಮುಳ್ಳಿನ ತಂತಿಯ ದೇಹಕೆ ಸುತ್ತಿ
ನೆತ್ತರಲಿ ಗೀಚಿಕೊಳ್ಳುತ್ತ ನಕ್ಕವರು!!

ನೆನಪನ್ನೇ ಉಸಿರಾಡುತ್ತ ಜೀವಿಸಿ,
ಸ್ಮಶಾಣಕ್ಕೆ ಮೇಲ್ಸೇತುವೆ ನಿರ್ಮಿಸಿ,
ದಿನಾಲೂ ಹಾದು ಹೋಗುತ್ತಾರೆ
ಮಂದಹಾಸದ ಮಳೆಗರೆದು;

ಇರುಳುಗಳ ಚಿವುಟಿ, ತೊಟ್ಟಿಲ ತೂಗಿ
ತಾವಷ್ಟೇ ಎಚ್ಚರಿರುವರು
ಬೆಳಕಿಗೂ ಮಂಪರು ತರಿಸಿ
ಕನಸುಗಳ ಸ್ವಗತದಲಿ ಲೀನರಾಗುತ್ತ!!

ಬೇವಿನ ಕಹಿಯನ್ನೂ ಚಪ್ಪರಿಸಿ
ಸಕ್ಕರೆಗೆ ಸಂಕೋಚ ತರಿಸುವರು;
ಮೇಣದ ಹಾಗೆ ಕರಗುವರು
ಸಣ್ಣ-ಪುಟ್ಟ ವಿರಹದ ಕಿಡಿಗೆ!!

ಎಲ್ಲರೊಳಗೂ ತಾವಿಬ್ಬರು;
ಅವರವರೊಳಗೆ ಅವರ ನಡುವೆ
ಗಾಳಿ ನುಸುಳುವಷ್ಟೂ ಇಲ್ಲ
ಅವಕಾಶದ ಸಲುಗೆ!!

ಇಬ್ಬರೂ ನಾಚಿ ಗೀರಿಕೊಂಡ 
ನೆಲದ ಮಡಿಲಲ್ಲೀಗ ಗಿಣಿಯಾಕಾರ;
ಮಣ್ಣು ಯಾರನ್ನೂ ದೂರುವುದಿಲ್ಲವಂತೆ
ಬೆಚ್ಚಗುಳಿದರು ಅಲ್ಲೇ ನಮ್ಮಂತೆ!!

                                     -- ರತ್ನಸುತ

1 comment:

  1. ಇದು ನಿಜಾಂತ್ಯ ಕಲ್ಪಿಸುವ ಕವಿತೆ.

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...