ಬೆಳಕಿಗೆ ಬಂದ ಕವಿತೆ

ಒಂದು ಕವಿತೆ
ಮನಸಲ್ಲೇ ಓದಿಕೊಂಡೆ;
ಯಾಕೋ 
ಜೋರಾಗಿ ಓದುವ ಮನಸಾಯ್ತು,
ಓದಿಕೊಂಡೆ.
ಒಂದೆರಡು ಪಾತ್ರೆಗಳು
ನೆಲಕ್ಕುರುಳಿ ಡೊಂಕಾದವು,
ಕಿಟಕಿ ಗಾಜು ಚೂರಾದವು,
ಅಟ್ಟದ ಮೇಲೆ ಹೆಗ್ಗಣಗಳು
ಇಷ್ಟಕ್ಕೆ ಓಡಾಡಿಕೊಂಡವು!!

ಅದು ನನಗಿಷ್ಟದ ಕವಿತೆಯಲ್ಲ,
ಅದು ನನ್ನದೇ ಕವಿತೆ;
ಓದಿ ಮುಗಿಸುವ ವೇಳೆಗೆ
ಪರಿಸ್ಥಿತಿ ವಿಕೋಪಿಸಿತ್ತು,
ಹಾಗಾಗಿ ನಿಲ್ಲಿಸುವ ಸಾಹಸ ಮಾಡದೆ 
ಮತ್ತೆ ಓದಲೇ ಬೇಕಾದ ಅನಿವಾರ್ಯತೆ!!

ಕೆಲ ಕಾಲ ಮೌನ ತಾಳಿ
ಪರಿಶೀಲಿಸಿಕೊಂಡೆ
ಮತ್ತೆ ಸದ್ದೆದ್ದದ್ದು 
ಮೌನಕ್ಕೂ ನಾಲಗೆ ನೀಡಿತು,
ಗಂಟಲ ಕಿತ್ತು ಓದಿಕೊಂಡೆ
ಬೇರೆಲ್ಲ ಶಬ್ಧಗಳು
ನಿಚ್ಚಳವಾಗುಳಿದವು
ಅಟ್ಟದ ಹೆಗ್ಗಣಗಳು ಸಹಿತ!!

ತೀರ ಸಹಜವಾದ ಪದಗಳಿಗೆ
ಭಾವೋದ್ವೇಗ ನೀಡಿ
ಅರಚಾಡುತ್ತಿದ್ದುದ ಗಮನಿಸಿದ ಕಾಗೆ
ಅಲ್ಲಿಂದ ಕಾಲ್ಕಿತ್ತದ್ದು
ಅನುಕಂಪಕೋ, ಅನುಭಾವಕೋ?
ಒಟ್ಟಾರೆ, ನಾನಂತೂ ಗೆದ್ದಿದ್ದೆ
ಮಿಕ್ಕೆಲ್ಲರನ್ನೂ ಮೆಟ್ಟಿ ನಿಂತು!!

ಅಡುಗೆ ಮನೆಯಿಂದ ಮತ್ತೊಂದು ಪಾತ್ರೆ
ಕುರೂಪಗೊಳ್ಳುವ ಸರದಿ;
ಅದ ಮೀರಿಸಬಲ್ಲ ಏರುದನಿಯಲ್ಲಿ
ಮತ್ತೆ ಓದಲು ತಲೆನೋವು ತಂದದ್ದು 
ಪಕ್ಕದ ಮನೆ ಶಾನುಭೋಗರಿಗೆ!!

ಸಧ್ಯ ಅಮ್ಮ ಅಪ್ಪನ ಜಗಳ
ಬೀದಿಯ ಕಿವಿಗೆ ಬೀಳಲಿಲ್ಲ,
ಬದಲಿಗೆ, ಸತ್ತ ಸಾಲುಗಳಿಗೊಂದು
ಹಿಡಿ ಶಾಪ ಸಿಕ್ಕಿತು!!
ಹೀಗಾಗಿಯಾದರೂ ಬೆಳಕಿಗೆ ಬಂದು
ಜೀವ ಪಡೆಯಿತಲ್ಲದೆ
ತಾಮಸದ ಹಂಗಲ್ಲಿಯ ಮಿಕ್ಕವುಗಳೆಡೆಗೆ
ಛೇಡಿಸುತ್ತ ತಾ ನಗುತಲಿತ್ತು !!

                                 -- ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩