Monday 14 April 2014

ಗೋರಂಟಿ ಪ್ರಿಯೆ

ನವಿಲು ಗರಿ ಹಿಡಿದಳು;
ಗರಿಗಳು ಬಳುಕಾಡಿ, ಬಡಿದಾಡಿ
ಸೋತು ಕೊನೆಗಲ್ಲಿ
ಮೈ ಮಾರಿಕೊಂಡವು
ಆಕೆಯ ಉಗುರಿನ ಬಯಕೆಗೆ

ಸಂಜೆ ಏಕಾಂತದಲಿ
ಆವರಣ ಶುಚಿಗೊಳಿಸಿ
ಚುಕ್ಕಿ ಹೆಣೆದು ರೇಖೆ ಚೆಲ್ಲಿ
ಬಾನ ಬಣ್ಣ ಬೇಡಿದಳು;
ಕೈ ಸೇರಿದ ಸಂಜೆ ರಂಗು
ಉಗುರಲ್ಲೇ ಅಂಟಿಕೊಂಡು
ರಂಗೋಲಿಯ ಅರೆಬೆತ್ತಲ
ಚಿತ್ತಾರವಾಗಿಸಿತು!!

ಹೂಗಳ ಸವರಿ
ಮಂಕಾದವು ತಾವು,
ಕೆಲವಂತೂ ಮುದುಡಿದವು
ಸಹಿಸದೆ ನೋವು;
ಪಚ್ಚೆಗೆ ಪರಚು ಗಾಯ,
ಚಂದಿರನೊಡಲಲ್ಲೂ ಕಲೆ,
ಏಕವರ್ಣ ಬೇಸರಿಕೆ
ಕಲೆಗುಂದಿತು ಕೈಯ್ಯ ಬಳೆ

ಕಾಮನ ಬಿಲ್ಲಲಿ ಹೇಗೆ
ಒಂದೊಂದೇ ಬಣ್ಣ ಕುಂದು?!!
ಗಳಿಗೆಗೊಂದು ಪೂಸಿಕೊಂಡ-
-ಳುಗುರ ಮೇಗಡೆ;
ಚಿಟ್ಟೆಗಳೆತ್ತಲೋ ಹಾರಿ
ವಿಳ್ಹಾಸ ಮರೆತವೋ ಏನೋ
ಹಿತ್ತಲಲಿ ಬಿಟ್ಟ ಮೊಗ್ಗು
ಕಸಕೆ ಸೇರ್ಪಡೆ!!

ಬಣ್ಣಗಳೇ ಇಲ್ಲದಾಗಿ
ಎರಗಿದಳು ಬೆನ್ನಿಗೆ ನೇರ
ತೊಗಲಿನಾಳದಲ್ಲಿ ಹರಿದ
ಕೆಂಪು ರಕುತಕೆ;
ಗೋರಂಟಿ ರಂಗೇರಿತು
ಕೆಂಪು-ಕಂದಿಗೆ ತಿರುಗಿ
ನೀಲ ದೇಹದಲ್ಲೂ ಒಂದು
ಬಣ್ಣ ಕಾಣಿಕೆ!!

                     --ರತ್ನಸುತ

No comments:

Post a Comment

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...