Tuesday 29 April 2014

ಮೌನ ಸಂಭಾಷಣೆ !!

ಮನದ ಪಿಸು ಮಾತುಗಳ ಆಲಿಸೋಕೆ
ನೂರು ಕಿವಿಗಳಿದ್ದೂ
ನೀ ಕೇಳಿಸಿಕೊಳ್ಳಲಿಲ್ಲವೆಂದು 
ಶರಣಾಗುವ ಬದಲು
ಮುಟ್ಟಲೇ ಇಲ್ಲವೆಂದು ಆಪಾದಿಸು,
ಮತ್ತೆ, ಮತ್ತೆ ಪಿಸುಗುಡಲು
ಹಿಂದೇಟು ಹಾಕಲಾರೆ,
ಹೊರತು ಬದುಕುಳಿಯಲಾರೆ!!

ಪತ್ರಗಳು ಕೇವಲ ಪದಗಳ ಗುಪ್ಪೆಯಲ್ಲ
ತುಂಬು ಬಸುರಿಯ ಕುಸುರಿಗಳು;
ಪ್ರಸವದವಸರಕೆ ಮಡಿಲಾಗು
ಸುಸೂತ್ರ ಸಂತತಿ, ಬಾಣಂತನಕೆ;
ನಂತರದ ಬೆಳವಣಿಗೆಯ ಭಾರ
ಅದದರ ಪಾಡಿಗಿರಲಿ,
ದಿನಕ್ಕೊಂದು ನೆನಪಿನ ಮುತ್ತನಿಟ್ಟರೆ
ಅದೇ ಪೌಷ್ಟಿಕ ಆಹಾರ!!

ಕೆಲಕಾಲ ವಾಲಿ, ತೂಕಡಿಸುವಾಗ
ಭುಜಗಳ ಕಂಪಿಸು ನಾಚುತ;
ನಿದ್ದೆ ಬಲು ದೂರ ಹಾರದೆ
ಇಲ್ಲೇ ತುಸು ದೂರ ಸುತ್ತಿ ಬರಲಿ;
ನಾ ಕಾದಿರಿಸಿಟ್ಟ ಹೂವ ಮುಟ್ಟದೆ
ಕಣ್ಣೆಟುಕಿನಂತರದಿ ಸತಾಯಿಸು
ಒಮ್ಮೆಲೆಗೆ ಸಾಯುವ ಬದಲು
ಬಿಡಿ-ಬಿಡಿಯಾಗಿ ಸಾಯಲಿ!!

ಜೀವ ಬೆಸೆಯುವುದು ಬೇಡ,
ಇರಲಿ ಅವವುಗಳ ಪಾಡಿಗೆ ದೂರ;
ಹತ್ತಿರವಾಗದ ನಮ್ಮ ಉಸಿರು
ಚೂರು ಚಡಪಡಿಸಲಿ ವಿನಿಮಯಕೆ;
ಲೋಕದ ಮಂಜುಗಣ್ಣಿನೆದುರು
ನೀನ್ಯಾರೋ, ನಾನ್ಯಾರೋ ಅನಿಸಿ
ಗೌಪ್ಯ ಸಂಧಾನ ನಡೆಸುವ,
ಎಚ್ಚರ ಕನಸುಗಳ ಎತ್ತರ ತಾಣದಿ!!

ಒಂದು ಮಾತೂ ಆಡದೆ
ಮುಗಿಸುವ ಸಂಭಾಷಣೆಯ ಕೊನೆಗೆ
ಮಂದಹಾಸವ ಲೇಪಿಸಿ
ಇಬ್ಬಾಗ ಮಾಡಿ ಇರಿಸಿಕೊಳ್ಳುವ
ತೀರ ಮನಸಿಗೆ ಹತ್ತಿರದಲ್ಲಿ;
ಚಿರ ಪರಿಚಿತರಂತೆ ಭಾಸವಾಗಿಸುತ
ದೂರಾಗಿಸುವವುಗಳ ಪಾಲಿಗೆ
ಕಹಿ ಸವಿಗಳ ಸಾಲಿಗೆ !!

                              -- ರತ್ನಸುತ

No comments:

Post a Comment

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...