ದೀಪ-ಉರಿದಾರುವನಕ!!

ಮಹಡಿಯ ಮೇಲೆಲ್ಲ
ಅನಾಥ ಹಕ್ಕಿಗಳ ಚಿಲಿ ಪಿಲಿ
ಮನೆಯೊಳಗೆ ತಳ ಸುಟ್ಟ
ಗಂಜಿಯ ಕರಕುಲು ಘಮಲು
ಅರ್ಧ ಸುಲಿದು ಕಚ್ಚಿಟ್ಟ 
ಬಾಳೆ ಹಣ್ಣಿಗೆ ಹಲ್ಲಿನ ಗುರುತು
ಕೆಟ್ಟು ಕೂತ ರೇಡಿಯೋ ಪೆಟ್ಟಿಗೆಯ
ಕರ್ಕಶ ಕಂಠ!!

ರಾತ್ರಿಯ ಬಾಗಿಲ ತೆರೆದು
ಬೆಳಕು ಮರೆಯ ತಿರುವಿನ ತುದಿಗೆ,
ಗೂಡಿನ ಹಂಗು ತೊರೆದು
ಗುಡಾಣದ ಗುಪ್ಪೆಯಲ್ಲಿ ಬೆಚ್ಚಗುಳಿದ ಗುಬ್ಬಿ;
ಹೆಗ್ಗಣಗಳ ಸಂತತಿ
ಪಾಷಾಣದ ಮರುಕ,
ಬೆಳದಿಂಗಳ ಬಟ್ಟಲಿಡಿದು
ಮನೆ ಮುಂದೆ ತಿರುಕ!!

ಬೀದಿ ದೀಪದ ಪುರಾಣ
ಕೇಳಿ ಮೈ ಮರೆತ ಜಾಡು
ಎಲ್ಲೋ ದೂರದ ಮಬ್ಬಿನೊಳಗೆ
ಅತ್ತ ಮುದುಕಿಯ ಹಾಡು;
ಕೊಟ್ಟಿಗೆಯೊಳಗೆ
ಆಕಳು ಕರುವನು ನೆಕ್ಕುವ ಸರದಿ
ಕೆಚ್ಚಲು ದೂರ, ಹಸಿದ ನಾಲಿಗೆ
ಕಾವಿಗೆ ಕೂತ ಕೋಳಿ ಮಕ್ಕರಿಯೊಳಗೆ!!

ಬಾವಲಿಗಳ ಬವಣೆ
ಗೂಬೆಗಣ್ಣ ಚುರುಕು
ಬೆಂಕಿ ಕಡ್ಡಿ-ಬತ್ತಿಗೂ
ಋಣ ತೀರದ ಬದುಕು;
ವಟರುಗುಡುವ ಕಪ್ಪೆಗಳ
ಪ್ರಖ್ಯಾತ ರಾಗ,
ವಾಸಿಯಾಗಲಿಲ್ಲ ಇನ್ನೂ
ಅರ್ಚಕರ ರೋಗ!!

ರಾಗಿ ಹುಲ್ಲ ಕುಪ್ಪೆ ಮೇಲೆ
ಕದಲದಂತೆ ಬೆಕ್ಕು
ಬೆಳಕು ಆರದಂತೆ ತಡೆದ
ಅವ್ವಳಂಗೈ ಸುಕ್ಕು;
ತೀರಲಿಲ್ಲ ಇರುಳ ಗೋಳು
ಬಾವಿಗಿಲ್ಲ ನೀರ ಚಿಂತೆ
ಊರ ದೇವರೆದುರು ರಾಶಿ
ಬೇಡಿಕೆಗಳ ಕಂತೆ!!

ಕಣ್ಣುಜ್ಜಿ ಸೂರ್ಯ ಕಂಡ
ಅದೇ ಹಾಡು-ಹಸೆ
ಅದೇ ಗೂಡು-ಹಕ್ಕಿ
ಅದೇ ಜಾಡು-ಜಡತೆ
ಗಂಜಿಯ ಮಸಿ, ಅವ್ವಳ ಸುಕ್ಕು
ಹಣತೆಯ ಹೆಣ, ಆಕಳು-ಕರು
ಕೊಳೆತ ಬಾಳೆ, ಬತ್ತ ಬಾವಿ
ಹರಿದ ಮಹಡಿ, ಮತ್ತು ನಾನು!!

                          -- ರತ್ನಸುತ

Comments

  1. ಜೀವನದ ಕ್ರಮದ ರುಚಿಗಟ್ಟಿರದ ದೈನಂದಿನಕ್ಕಿದು ಕನ್ನಡಿ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩