Tuesday, 29 April 2014

ಆಗಬಾರದ್ದು ಆಗಿಯೇ ಹೋಯಿತು

ನಾನೇನು ಹೇಳುವುದು
ನೀನೆಲ್ಲ ದೋಚಿರಲು
ಮಾತುಗಳು ವ್ಯರ್ಥದ ಕಂತೆ;
ನೀನಿದ್ದ ಕಡೆಯೆಲ್ಲ
ನಾ ಚಿತ್ತ ಕಳೆದಿರಲು
ಈನಡುವೆ ಇದೇ ದೊಡ್ಡ ಚಿಂತೆ!!

ನೀ ಸಾರಿ ಹೇಳುವುದ
ಪ್ರತಿ ಸಾರಿ ಕೇಳಿದರೂ
ಬೇಸರಿಕೆ ಬರಿಸುತಲೇ ಇಲ್ಲ;
ನೀ ಎದುರು ನಿಂತಾಗ
ಅಂಗಾತ ತಿರುಗದಿರು
ಉಪವಾಸ ಸಾಯುವೆನು ಮೆಲ್ಲ!!

ನಾ ಕೊಡದ ಉಡುಗೊರೆಗೆ
ನೀನಿಡುವ ಹೆಸರುಗಳ-
ಪಟ್ಟಿಗೆ ಕೊನೆಯೆಂಬುದೆಲ್ಲಿ?
ಆಗಾಗ ನೋಡುವೆ
ಮೋಹ ಉಕ್ಕಿದ ರೀತಿ
ಆದರೂ ಅನುಮಾನದಲ್ಲಿ!!

ಇನ್ನೆಲ ಸಮಯವನು
ನಿನಗಾಗಿ ಬರೆದಿಡಲು
ಬರಬೇಕು ಒಪ್ಪಂದ ಸಹಿಗೆ;
ಏನೊಂದೂ ಬೇಡಿಕೆಯ
ಸೂಚನೆ ಇರದಲ್ಲಿ
ಒಲವೊಂದೇ ಅನಿವಾರ್ಯ ಗುಳಿಗೆ!!

ನೀನೋದುವ ಹಾಳೆ
ದಿನಕೊಂದು ಹೊಸ ರೂಪ
ಒದಗಿಸುವ ದಿನಚರಿಯು ನಾನು;
ನೀ ನಕ್ಕರೆ ಅದುವೇ
ಭಾವನೆಗೆ ತೀವ್ರತೆ
ಮಿಕ್ಕಂತೆ ತೃಣವಲ್ಲವೇನು?

                   -- ರತ್ನಸುತ

1 comment:

  1. 'ಒಲವೊಂದೇ ಅನಿವಾರ್ಯ ಗುಳಿಗೆ' ವಾರೇವ್ಹಾ ಭೆತಮುನಿಗಳೇ!!!

    ReplyDelete

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು

ನೀರವ ಸ್ಥಿತಿಯಲ್ಲಿ ಯಾರಿವನೆನ್ನದಿರು ನೀನಿರದೆ ಈ ಗತಿ ಸಿದ್ಧಿಸಿತು ಜೀವಕೆ ಹಾಡುಹಗಲಲ್ಲಿ ನೀ ಆವರಿಸಿಕೊಂಡಿರುವೆ ಕನಸೊಂದು ಬೀಳುತಿದೆ ಗೊತ್ತಿದ್ದೂ ಬಾವಿಗೆ ಬ...