Thursday 3 April 2014

ಕಾವ್ಯ ಕನ್ನಿಕೆ

ಕಣ್ಣರಳಿದರಚ್ಚರಿ
ಮೂಗರಳಲು ಮುನಿಸು
ತುಟಿ ಜಗ್ಗುವುದೇ ಸ್ಮಿತ 
ಮೊಗ ಸುಂದರ ಕನಸು
ಗುಟ್ಟಿನ ಶ್ರವಣೇಂದ್ರಿಯ
ಸುತ್ತ ಕುರುಳ ತೀರ
ಗಲ್ಲವ ನಂಬಿದ ಮಚ್ಚೆಗೆ
ಕಳ್ಳ ನಗೆಯ ಭಾರ

ಬಾಜು ಎಳೆಯ ಕಂದು
ಬೆರಳು ಗರಿಯ ಕುಣಿತ
ಎದೆಯ ಶಂಖದೊಳಗೆ
ಪ್ರಣಯ ಪವನ ಮೊರೆತ
ಎಡಕೆ ಬಲದ ಸಾಟಿ
ಬಲ ಎಡಗಡೆ ಬಿಂಬ
ಮಥಿಸಿ ದಣಿಯುವಲ್ಲಿ
ಮಧುರಾಮೃತ ಕುಂಭ 

ನಡುವ ರಸ್ತೆ ಮೇಗಡೆ
ಮಡತೆಗಿಲ್ಲ ಉಳಿವು
ಹೊತ್ತು ಗೊತ್ತು ನೋಡದೆ
ಅರಳಲೊಲ್ಲ ಹೂವು
ನೇರ ಹೋದರಲ್ಲಿಗೆ
ಅಧಿಕೃತ ಅಪರಾಧ
ಮೀರಿ ಮುಂದುವರಿದರೆ
ಕಾವ್ಯದೆದೆಯ ಛೇದ

ತೆಳು ರಾಗಿ ಪೈರಿನ
ಮೊದಲ ದಿನದ ಇಣುಕು
ಕರವ ಮುತ್ತಿ ನಿಮಿರಿದ
ರೋಮಾಂಚನ ಪಲುಕು
ಪುಷ್ಕರಿಣಿ ಕಣ್ಣಿನಲ್ಲಿ
ನೂರಾಸೆಯ ತೆಪ್ಪ
ನಾಜೂಕು ನುಡಿಯಿಂದ
ಕಿವಿಗೆ ಜೇನ ತುಪ್ಪ

ಪಾದವಿಟ್ಟ ಕಡೆಯಲೆಲ್ಲ
ಪದಗಳ ಪಾಂಡಿತ್ಯ
ಹೆಬ್ಬೆರಳು ಗೀರಿದಲ್ಲಿ
ಕಿರುಗಾತ್ರದ ಚಿತ್ರ
ಒಡಲ ಬಯಲ ಉಬ್ಬು-ತಗ್ಗು
ಮತ್ತೊಂದು ಭೂಮಿ
ಹೇಮಂತದ ಚಂದ್ರನಂತೆ
ನಾ ಅದುರಿದ ಪ್ರೇಮಿ!! 

                        -- ರತ್ನಸುತ

1 comment:

  1. ಅಧಿಕೃತ ಅಪರಾಧ
    ಮೀರಿ ಮುಂದುವರಿದರೆ
    ಕಾವ್ಯದೆದೆಯ ಛೇದ
    - ಅಲ್ಲವೇ ಮತ್ತೇ!!!!

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...