ಮನದ ಮಳೆಯಲ್ಲಿ

ಮಳೆಯಾಗುತ್ತಿತ್ತು ಹೊರಗೂ, ಒಳಗೂ!!
ಒಳಗೆ ಆಗುತ್ತಲೇ ಇದೆ 
ಅಂದಿನಿಂದೀವರೆಗೆ ಸತತವಾಗಿ;
ಹೊರಗೆ, ಈಗಷ್ಟೇ ಶುರುವಾಗಿದೆ
ಇನ್ನೇನು ನಿಂತುಬಿಡಬಹುದು 
ಶಿಶು ಕೇಂದ್ರದಿಂದ ಕೇಳಿಬರುವ
"ರೇನ್ ರೇನ್ ಗೋ ಅವೇ" ಪದಕ್ಕೆ ತಲೆ ಬಾಗಿ;
ಒಳಗೂ ಅಂಥದ್ದೊಂದ ಸ್ಥಾಪಿಸಬೇಕು
ನಿಂತರೂ ನಿಲ್ಲಬಹುದು!!

ತೋಯ್ದು ಮುದ್ದೆಗಟ್ಟಿದವುಗಳ ಗುರುತಿಗೆ
ತೀರದ ಹೆಣಗಾಟದ ನಡುವೆಯೂ
ಒಲ್ಲದ ಒಂದು ನಗು ಅಂಟಿಸಬೇಕು ತುಟಿಗೆ;
ಬೇಸರಗೊಳ್ಳಬಾರದಲ್ಲ ಅವು!!
ಅವು? ಯಾವವು? ಅವೇ ಕಾಲಕಾಲಕ್ಕೆ 
ರೂಪು ಬದಲಿಸಿ, ಬಣ್ಣ ತೊಟ್ಟು
ನೆಲೆಯೂರಿದ ಮುಗ್ಧ ಭಾವನೆಗಳು;
ಆಗ ಹೊಸತು, ಈಗ ಪಳೆಯುಳಿಕೆಗಳು!!

ಪಾಚಿಗಟ್ಟಿದ ಮನದಂಗಳವ ಮೆಟ್ಟಿ 
ಜಾರಿ ಕಾಲ್ಮುರಿದುಕೊಂಡವುಗಳು
ತೆವಲಾಡುತ್ತಲೇ ಮೂಲೆ ಸೇರಿಕೊಂಡದ್ದು
ತಿಳಿದ ಸಂಗತಿಯಾದರೂ 
ಅದೆಷ್ಟು ಪ್ರಮಾಣದಲ್ಲಿದ್ದವು!!
ಅಬ್ಬಬ್ಬಾ, ಎಣಿಕೆಗೆ ಒಂದಿರುಳು ಸಾಲದೆ
ಹೊತ್ತು ಮುಳುಗೆದ್ದು ಆಕಳಿಸುತಿತ್ತು!!

ಕೊಡೆ ಹಿಡಿದವುಗಳೆಲ್ಲ ಸಜ್ಜನಿಕೆ ತೋರದೆ
ಮಿಂದು ನಡುಗುತಲಿದ್ದವುಗಳೆಡೆಗೆ
ಒಂದೇ ಸಮನೆ ಗಹ ಗಹಿಸಿ ನಗುತ್ತಿದ್ದವು
ಅಮಾನುಷವಾಗಿ!!

ಹಾದರಗಿತ್ತಿತನ ಮುಗಿಸಿ ಬಂದವು ಕೆಲವು
ಬೆನ್ನ ಮೆತ್ತಗೆ ಹಾಸಿ ಆನಿಕೊಂಡಾಗ
ಹುಲ್ಲೂ ಸಿಡಿದೆದ್ದು ಸರದಿಗೆ ಕೇಳಿತು;
ಮರುಕದಲಿ ಸತ್ತ ಭಾವಗಳ ಮಣ್ಣು ಮಾಡಲು
ಯಾವ ಹಿತ ಭಾವನೆಗಳೂ ಮುಂದಾಗದೆ
ದೂರದಿಂದಲೇ ಹಿಡಿ ಮಣ್ಣ ಶಾಪದಲಿ
ಹೂತವುಗಳ ಪುನಃ ಸಂಸ್ಕರಿಸ ಬೇಕು!!

ಮಳೆ ಜೋರಾಗುತ್ತಲೇ 
ಕೊಚ್ಚಿ ದಡ ಸೇರುವ ಹಂದರಗಳಿಗೆ
ಹೆಸರಿಡಬೇಕು, ಸಮಾದಾನಕ್ಕಾಗಿ!!

ಈಗ ಜಡಿಯುತಿದೆ ಜಡಿ ಮಳೆ,
ಬಿಡುವಿಗೂ ಬಿಡುವಿರದ ಸಮಯ!!
ಇಕ್ಕಟ್ಟಿನಲ್ಲಿ ಸವರಿದ ತಲೆಗಳೂ ಉರುಳಬಹುದು,
ಕಾಲಕ್ಕೆ ಕಾಲಾವಕಾಶ ಕೊಟ್ಟರೆ
ಒಳ್ಳೆ ಕಾಲ ಬರಬಹುದೆಂದು ಸುಮ್ಮನಾದೆ!!

ಹೀಗಂದುಕೊಂಡು ಮಾಸಗಳಳಿದವು
ಮಳೆ ನಿಲ್ಲಲೇ ಇಲ್ಲ!!

                                                --ರತ್ನಸುತ

Comments

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩