Sunday 20 April 2014

ಬಂದು-ಹೋಗಿ

ನೀ ಬರುವ ಹಾಗಿದ್ದರೆ ಹೇಳಿ ಬಾ,
ಹೊರಡುವಾಗ ಹೇಳದಿರು;
ಒಂದು ಗಾಯವ ಮಾಡಿ ಹೋಗು
ಯಾವ ಕಾರಣ ಕೇಳದಿರು!!

ಗಂಜಿ ಬೇಯಿಸಿ ಇಟ್ಟು ಹೋಗು
ಒಲೆಗೂ ಚೂರು ಕಾವು ಸಿಗಲಿ;
ಕೊನೆಯ ಗಳಿಗೆ ನಿನ್ನ ತಾಕಿ
ಮುಸರೆಯೂ ತುಸು ನಕ್ಕುಬಿಡಲಿ!!

ನಮ್ಮ ಗುರುತಿಗೆ ಸಿಕ್ಕ ದಾರಿಯ
ಅಪ್ಪಿ ತಪ್ಪಿಯೂ ಹಿಡಿಯ ಬೇಡ;
ಹಾಗೆಂದು ಕಲ್ಲು-ಮುಳ್ಳಿನ
ಕಾನನಕೆ ಮುಖ ಮಾಡಬೇಡ!!

ಉರಿಸಿ ಹೋಗು, ಹೋಗೊ ಮುನ್ನ
ನಾಲ್ಕು ಬತ್ತಿಯ ಹಣತೆಯನ್ನು;
ದೇವರಿಲ್ಲದ ಕೋಣೆಯಲ್ಲಿ
ನಂದ ಬೆಳಕಿಗೂ ನಷ್ಟವೇನು?!!

ಹಿತ್ತಲಲ್ಲಿ ಕೀಳದಂತೆ ಹಾಗೇ ಬಿಡುವೆ
ಒಂಟಿ ರೋಜ;
ಕದ್ದು ಕಿತ್ತು ಮುಡಿಗೆ ಇರಿಸು
ಇದ್ದು ಬಿಡಲಿ ನಿತ್ಯ ತಾಜಾ!!

ಗೆಜ್ಜೆ ಕಟ್ಟಲು ಸದ್ದು ಬಡಿವುದು,
ಅಂತೆಯೇ ಕೈ ಬಳೆಗಳೂ;
ಕಿವಿ ಮುಚ್ಚುವೆ ಒಂದು ನಿಮಿಷ
ಇರದ ಹಾಗೆ ಈ ಜಗದೊಳು!!

ಬರುವ ಮುನ್ನ ತಟ್ಟ ಬೇಡ
ಬಾಗಿಲಿಗೂ ಗುಂಡಿಗೆಯಿದೆ;
ಹೋಗುವಾಗ ಮುಚ್ಚ ಬೇಡ
ಉಸಿರು ನಿಂತರೆ ಸಾವಿದೆ!!

                      -- ರತ್ನಸುತ

1 comment:

  1. 'ಬರುವ ಮುನ್ನ ತಟ್ಟ ಬೇಡ
    ಬಾಗಿಲಿಗೂ ಗುಂಡಿಗೆಯಿದೆ;
    ಹೋಗುವಾಗ ಮುಚ್ಚ ಬೇಡ
    ಉಸಿರು ನಿಂತರೆ ಸಾವಿದೆ!!'

    ಹೊಗಳಲು ಪದಗಳಿಲ್ಲ ಎನ್ನಲಿ.

    ReplyDelete

ಅತಿ ಮಧುರ ಅನುರಾಗ

ಅತಿ ಮಧುರ ಅನುರಾಗ  ನಿನ್ನೊಲವ ಮಳೆ ಹನಿಗೆ  ಮಿಂದಿರಲು ಮನಸಿದು     ನಿಂತು ನಿಂತು ಬೀಸಿದಂತೆ  ಸಂಜೆ ತಂಪು ಗಾಳಿ  ಅಂಕೆ ಮೀರಿ ಬರುವ ಮಾತು  ಹಾಕಬೇಕೇ ಬೇಲಿ  ಜೊತೆ ಇರಲು ...