ಹೀಗೇ ಮರುಳಾಗುತ್ತ

ಸುಮ್ಮನಿರು ಶಕುಂತಲ
ಕಾವ್ಯವೆಂಬುದು ನನಗೆ
ಬಡವನ ಮನೆ ಪಾಯಸದಿ 
ಗೋಡಂಬಿ ಸಿಕ್ಕಂತೆ;
ಅಲ್ಲಲ್ಲಿ ಒಮ್ಮೊಮ್ಮೆ ಹಿಗ್ಗಿ,
ಪದಗಳ ಮಾಮೂಲಿ ಸುಗ್ಗಿ.
ಕ್ಷಣಿಕ ಪ್ರಿಯ ನಾ, ಇಳೆಯ ಧೂಳು 
ಆತ ಮಿನುಗುವ ಚುಕ್ಕಿ!!

ನಾಲಗೆಯ ಶೂಲಕ್ಕೆ ಕೊಟ್ಟು
ಬದ್ಧನಾಗುವ ಯೋಗ ನನದಲ್ಲ,
ಇನ್ನೂ ದಡ್ಡನೇ ತಿಳಿ ನನ್ನ
ಪ್ರೇಮ ಕಾವ್ಯಗಳೆಲ್ಲ ಬಾಲಿಶ ಕಂತೆ;
ಒಮ್ಮೆ ಮೈ ಮರೆತು, ಮತ್ತೆ ಹಾಗಲ್ಲವೆಂದು
ನೀ ಒಡ್ಡುವ ವಾದಕ್ಕೆ
ನನ್ನ ಮೌನವೇ ಉತ್ತರ
ನಾ ನೀರ ಚಂದಿರ!!

ನಾ ತೊಡಿಸಿದ ಉಂಗುರ
ಬಂಗಾರದ ಬೆಲೆ 
ಉತ್ತುಂಗದಲ್ಲಿದ್ದಾಗ ಕೊಂಡದ್ದು;
ಜೋಪಾನ ಬಲು ಜೋಪಾನ ಕಣೆ,
ಜಲ ವಿಹಾರದಲ್ಲಿ ಬೆರಳಾಡಿಸಿ ಕಳೆದೆಯೋ
ಹಿಂದಿರುಗಿಸೋ ಬೆಸ್ತನಾರೂ ಇರಲಾರ,
ನನ್ನ ಕೆಟ್ಟವನಾಗಿಸುವುದು 
ನಿನ್ನ ಗ್ರಹಚಾರ!!

ನೀ ಹೂವಿನುಡುಪು ತೊಟ್ಟರೆ
ದುಂಬಿಯಾದ ನಾ ಸುಳಿದಾಗ
ಪೋಲಿ ಅನ್ನ್ನದಿರು ಸದ್ಯ 
ಅದು ಪ್ರಕೃತಿ ನೇಮ!!
ಕೂಡಿ ಕಳೆದು ಗಳಿಸಿದ ಅಂಕದಲ್ಲಿ
ಕಾಪಿ ಹೊಡೆದದ್ದೂ ಸೇರಲಿ,
ಸಹಜವಾಗಿದ್ದರೂ ಸರಿಯೇ
ಸಣ್ಣದಾಗದಿರಲಿ ಈ ಪ್ರೇಮ!!

ನಿನ್ನ ಕುರಿತು ಬರೆದವುಗಳಲ್ಲಿ
ನಿನ್ನ ಕಣ್ಣರಳಿಸಿದವುಗಳನ್ನಷ್ಟೇ ಹಿಡಿದು
ಮತ್ತೆ, ಮತ್ತೆ ಯತ್ನಿಸುತ್ತೇನೆ
ಹೆಗ್ಗಳಿಕೆಗಲ್ಲ, ಸಣ್ಣ ಮುಗುಳ್ನಗೆಗೆ!!
ನೀ ಒಪ್ಪುವುದೇ ಮಹಾಕಾವ್ಯ
ಒಪ್ಪದ್ದು ನಿನಗೊಪ್ಪದ್ದು
ನಾನಾರೋ ನಿನಗೆ ತಿಳಿದಿಲ್ಲ
ದಾಸನೋ, ದುಷ್ಯಂತನೋ ಈವರೆಗೆ!!

                                    --ರತ್ನಸುತ

Comments

  1. ನಾನೂ ದಾಸನೋ, ದುಷ್ಯಂತನೋ ಇದೇ ಪ್ರಶ್ನೇ.

    ReplyDelete

Post a Comment

Popular posts from this blog

ಜೋಡಿ ಪದ

"ಪಾಸ್ವರ್ಡ್" - RESET ಆಗ್ತಿರ್ಲಿ ಆಗಾಗ!!!

ಗರುಡ ಪ್ರಯತ್ನ ೩