Monday 21 April 2014

ನಾ ಅಳ ಬಯಸಿದಾಗ

ಎಲ್ಲರೂ ನಗುವವರೇ 
ಯಾರಲ್ಲೀಯೂ ದುಮ್ಮಾನಗಳಿಲ್ಲ;
ಅದಕ್ಕಾಗಿಯೇ ನಾನೂ ನಕ್ಕಂತೆ-
ನಟಿಸುತ್ತೇನೆ ಅವರತ್ತ
ಅನವರತ.....

ಕೆಲವರು ಹಸಿವನು ಮರೆಸಲು
ನಗುತ್ತಲೇ ಇರುತ್ತಾರಂತೆ,
ಏನು ಅದೃಷ್ಟಶಾಲಿಗಳವರು!!
ಇನ್ಕೆಲವರು ಬದುಕಿಗಾಗಿ ನಗಿಸುತ್ತಾರೆ,
ತಾವು ನಕ್ಕವರೋ ಇಲವೋ ತಿಳಿದಿಲ್ಲ;
ಮುಖವಾಡ ಧರಿಸಿದ್ದಾರೆ,
ಮುಖವಾಡವಂತೂ ನಗುತ್ತಿದೆ!!

ನೆರಳಿಗೆ ನಗು ಅಳುವಿನ ಪ್ರಾಕಾರಗಳಿಲ್ಲ,
ಎಲ್ಲವೂ ಎಲ್ಲರಲ್ಲೂ ಒಂದೇ;
ಅದರ ಮರ್ಮವ ತಿಳಿಯುವುದೇ ಗೋಳು!!
ಆದರೂ, ಸದಾ ನೆಲದಲ್ಲಿ ತೆವಳುತ್ತಲೇ
ಒರಟಿದ್ದಲ್ಲಿ ತರಚಿಕೊಂಡು ಅತ್ತಿರಬೇಕು?
ಕಪ್ಪೊಳಗೆ ಕಪ್ಪನೆಯ ಕಂಬನಿ ಕಾಣಲಾಗದಲ್ಲ!!

ಭುಜಗಳಿಗೆ ಅದೆಷ್ಟು ಬಾರಿ ಹೊರೆಸಿದ್ದೇನೆ
ಕಣ್ಣಿನ ಭಾರವ, ಲೆಕ್ಕವೇ ಇಲ್ಲ;
ಅದಕ್ಕಾಗಿಯೇ ಅವು ಕುಗ್ಗಿರಬೇಕು?
ಎಲ್ಲವೂ ನಗುವ ಸಲುವೇ!!

ಹೂವನ್ನು ನಗಿಸಲು
ಬೇರು ತೆತ್ತ ತ್ಯಾಗ ಕಥೆಗಳಿಗೆ ಕಿವಿಗಳೆಲ್ಲಿ?
ಹೊರ ನೋಟಕ್ಕೇ ಬೆಲೆ ಹೆಚ್ಚು,
ಒಳ ಬಣ್ಣಗಳು ನಳ-ನಳಿಸಿದರೂ,
ಮಂಕಾದರೂ ಪರಿಗಣನೆ ಇಲ್ಲದಿರುವುದೇ
ಈ ಎಲ್ಲ ನಾಟಕ ಮಂಡಲಿಗಳ ಉದ್ಭವದ ಮೂಲ!!

ಕೆಲವೊಮ್ಮೆ ನಗುವಿನೊಟ್ಟಿಗೆ ಉಕ್ಕಿ ಬರುವ
ದುಃಖವನ್ನ ಹಿಡಿದಿಡುವುದೇ ಸಾಹಸ ಕ್ರಿಯೆ;
ಹರಿದ ಕೌದಿಯ ಹೊಲಿದು,
ಮತ್ತೆ ತೂಗಿ ನಿದ್ದೆಗೆ ಜಾರುವಾಗ
ನಾಳೆಗಳ ಭೀಕರತೆ ಎಚ್ಚರಿಸಿದಂತೆ!!

ಎಲ್ಲರೂ ನಗುತ್ತಾರೆ
ನಾನೂ ನಗುತ್ತೇನೆ;
ಎಲ್ಲರೂ ಅತ್ತ ದಿನ
ನಾನೂ ಅಳುತ್ತೇನೆ
ಮುಕ್ತವಾಗಿ!!

           --ರತ್ನಸುತ

1 comment:

  1. ಅಳಲೂ ಇದೀಗ ಮುಲಾಜು.
    ನಗುವಿನ ಹಿಂದೆ ಅಡಗಿದ್ದೀತು ಅಳಲು!
    ಒಂದು ಕವಿತಾ ರತ್ನವಿದು.

    ReplyDelete

ದಣಿವಾರಿ ಕೊಳದಲಿ

ದಣಿವಾರಿ ಕೊಳದಲಿ  ಕೆಂದಾವರೆ ಅರಳಿದೆ  ಮುಗಿಲೇರಿ ಬರದಲಿ  ಹನಿಗೂಡಲು ಇಳಿದಿದೆ  ರವಿಕಾಂತಿ ಸವಿಯುತ  ಹರಳಂತೆ ಮಿನುಗುತಾ  ಬೆರಗಲ್ಲೇ ತಯಾರಿಯಾಗುತಿದೆ  ಮನದಂಗಳ ಮುಂಜಾನೆಯ...