Friday, 3 April 2026

ಅಂಬ್ಯುಲೆನ್ಸ್ ಗಡಿಯಲ್ಲಿ

ಅಂಬ್ಯುಲೆನ್ಸ್ ಗಡಿಯಲ್ಲಿ 

ಹುಟ್ಟಿಕೊಂಡ ಕವಿತೆಯಿದು
ನಿಮಿಷ ದಾರಿ ಬಲು ದೂರ 
ಪದಗಳೆಲ್ಲ ಬಲು ಭಾರ 

ಒಳಗಿನವರ ನೋವ ಕತೆ 
ಗಾಡಿ ಹೊರಗಿನವರ ಜೊತೆ 
ಚೀರಿ ಹೇಳುವಂತೆ ಸದ್ದು 
ಸೈರನ್ನು ಮಾಡುವುದು 
ಸತ್ತೆವೆಂದವರು ಮತ್ತೆ 
ಹುಟ್ಟಿ ಬರುವ ಜೀವಕೋಶ 
ಇಲ್ಲೇ ಉಸಿರು ಬಿಟ್ಟವರ 
ಕನಸುಗಳು ಸರ್ವನಾಶ 

ಅಂಬ್ಯುಲೆನ್ಸ್ ಗಡಿಯಲ್ಲಿ 
ಹುಟ್ಟಿಕೊಂಡ ಕವಿತೆಯಿದು

ನಿರ್ಭಾವುಕ ಚಾಲಕ 
ಧೃತಿಗೆಡದೆ ಚಲಿಸುವನು 
ಹಸಿರು, ಹಳದಿ, ಕೆಂಪು 
ದಾರಿ ಬಿಟ್ಟು ಕೊಡಲೇ ಬೇಕು 
ಮನೆಯಿಂದ ಆಸ್ಪತ್ರೆಗೆ 
ಅಲ್ಲಿಂದ ಮತ್ತೆಲ್ಲಿಗೋ?
ಎಲ್ಲ ದಿಕ್ಕು ಸವೆಸಿ ಬಂದ 
ಅನುಭವವಿದೆ ಗಾಲಿಗೆ 

ಅಂಬ್ಯುಲೆನ್ಸ್ ಗಡಿಯಲ್ಲಿ 
ಹುಟ್ಟಿಕೊಂಡ ಕವಿತೆಯಿದು

ಶವಯಾತ್ರೆಯ ಮುಗಿಸಿದಲ್ಲಿ 
ಮಾಸಿರದ ಹೂವ ಕಂಪು 
ಪ್ರಾಣ ಕೊಟ್ಟ ಪುಣ್ಯಕ್ಕೆ 
ಆಗಾಗ ಸಿಕ್ಕ ಬಿರುದು 
ದಾರಿ ಮಾಡಿ ಕೊಟ್ಟವರಿಗೆ 
ದೊಡ್ಡ ಹೃದಯವಿರಬಹುದು 
ರಾಜಕಾರಣಿಗಳು
ಯಮಧೂತರ ಕರೆತರಬಹುದು 

ಅಂಬ್ಯುಲೆನ್ಸ್ ಗಡಿಯಲ್ಲಿ 
ಹುಟ್ಟಿಕೊಂಡ ಕವಿತೆಯಿದು

ಸ್ಟ್ರೆಚರ್ರನು ಮೆಲ್ಲ ಇಳಿಸಿ 
ತನ್ನವರೇ ಎಂಬಂತೆ 
ಎಚ್ಚರ ವಹಿಸುವ ಚಾಲಕ 
ಹೆಗಲನ್ನೂ ಕೊಟ್ಟ 
ಬಕ್ಸೀಸು ಬೇಡುವುದು 
ಆತನ ಹಸಿದ ಜೇಬು 
ಕೊಡುವವರು ಕೊಟ್ಟಾರು 
ಕೇಳುವುದನೇ ಬಿಟ್ಟ 

ಅಂಬ್ಯುಲೆನ್ಸ್ ಗಡಿಯಲ್ಲಿ 
ಹುಟ್ಟಿಕೊಂಡ ಕವಿತೆಯಿದು

ಹೆಚ್ಚಾದವು ರಸ್ತೆ ತುಂಬ
ಸದಾ ಅದೇ ಅವಸರ 
ಯಾರಿಗೇನು ಎಂಬುದು 
ಯಾರಿಗೂ ತಿಳಿಯದ ಗುಟ್ಟು 
ಗುಡಿಗಳಿಗಷ್ಟೇ ಮಡಿ 
ಮಸಣಕ್ಕದರರಿವಿಲ್ಲ 
ತುರ್ತು ಸಮಯದಲ್ಲಾರಿಗೂ 
ಮೈಲಿಗೆ ಅಂಟುವುದಿಲ್ಲ 

ಅಂಬ್ಯುಲೆನ್ಸ್ ಗಡಿಯಲ್ಲಿ 
ಹುಟ್ಟಿಕೊಂಡ ಕವಿತೆಯಿದು..

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...