ಮೊದಲ ಮಳೆ
ಕವಿದ ಮುಗಿಲೆಲ್ಲ.. ಈ ದಿನ
ಎದುರು-ಬದುರು
ಸಿಗುವ ಬಾ ಈಗ.. ತಕ್ಷಣ
ಒಂದೇ ಕೊಡೆ ಸೂರಿದೆ
ಅಂತರವೇ ಇಲ್ಲದೆ
ನಿನ್ನ ಜೊತೆ ನಿಂತಾಗ
ಮಳೆ ಜೋರು ...
ಅಂಗೈಯ್ಯಲಿ ಹಿಡಿದ ಹನಿ
ಕೈ ಜಾರುವ ಮುನ್ನ
ಎರಚೋಣವೇ ನಾವು
ಒಬ್ಬರಮೇಲೊಬ್ಬರು!
ಈ ಮಣ್ಣು ಹೂವಾಗಿ
ಘಂ ಎನ್ನುತಲೀಗ
ಹರಿವ ನೀರಿಗೆ
ಹತ್ತಾರು ಪ್ರಯೋಗ
ನಿಧಾನ ಒಂದೊಂದೇ
ಎಲೆ ಬಿಂದು ತೊಟ್ಟಿಕ್ಕಿದೆ
ನೆಲ ಕಾದು ಕಾದು
ದಣಿದದ್ದು ಹೌದು
ಹಸಿ ಮೈಯ್ಯ ಹಸಿವಿನ್ನೂ
ನೀಗಲೇ ಬಾರ್ದು
ಆ ಸೂರ್ಯ, ಈ ಚಂದ್ರ
ವಿರಮಿಸಿಕೊಳಲಿ..
ತಾರೆಗಳೆಲ್ಲ ರಜೆ ಹಾಕಿವೆ
ಏನಿದ್ದರೂ ಬಾನಿಗೆ
ಮಿಂಚು, ಗುಡುಗು ಆಸರೆ
ಹಕ್ಕಿಗಳು ಗೂಡಿನೆಡೆ ಕಾಲ್ಕಿತ್ತಿವೆ
ಅದೆಷ್ಟೋ ಉಪ್ಪರಿಗೆ ಸೋರುತ್ತವೆ...
ಇಷ್ಟಾಗಿ ನಾವಿಬ್ಬರೂ
ಒಂದೇ ಸೂರಿನಡಿ
ಇನ್ನೂ ಮೈ ಮರೆತು
ತಿಳಿದಿಲ್ಲ ನಮಗೆ
ಮಳೆ ನಿಂತದು
ಅಥವ ನಮ್ಮನು ನೋಡಿ
ನಿಂತಿರ ಬಹುದು..
No comments:
Post a Comment