ಸ್ನೇಹ ಪ್ರೀತಿಗೆ ತಿರುಗುವ ಮುನ್ನ
ಒಂದಿಷ್ಟು ಸವಾಲು ಹಾಕಿಕೊಳ್ಳೋಣ
ನನ್ನ ಬಯಕೆ ನಿನದು, ನಿನ್ನವು ನನದು
ಹೀಗೆ ಒಂದಷ್ಟು ಕಾಲು ಸಾಗೋಣ
ಎಲ್ಲಿಯಾದರೂ ಎಡವಿದಾಗ
ನೋವ ಪರಸ್ಪರ ಹಂಚಿಕೆಯಾಗಿ
ಕಣ್ಣೀರಿನು ಕೂಡಿಟ್ಟುಕೊಳ್ಳೋಣ
ಬತ್ತದ ಮಧುಬಟ್ಟಲಿನಲ್ಲಿ
ಜೇವಕಾಮದ ಅರ್ಥವನ್ನು
ದೂರುಳಿದೇ ಅನುಭವಿಸುತ್ತ
ದೇಹ ದಂಡನೆಯನ್ನು ಮೀರಿ
ಮೋಹ ಬಣ್ಣನೆಯಲ್ಲಿ ಲೀನರಾಗೋಣ
ಆದ ತಪ್ಪುಗಳನ್ನು ನೆನೆದು
ಆಗುತ್ತಿರುವವುಗಳ ಅವಲೋಕಿಸಿ
ಆಗಬಹುದಾದವನ್ನು ಊಹಿಸಿ
ನಿರ್ಧಾರ ಕೈಗೊಳ್ಳೋಣ
ಸ್ನೇಹ ಎಲ್ಲವನ್ನೂ ಕ್ಷಮಿಸಬಹುದು
ಪ್ರೀತಿ ಹಾಗಲ್ಲ, ಆಗಾಗ ಕೆದಕಿ ಹುಣ್ಣಾಗಿಸಿ
ಮಾಗುವ ಮುನ್ನ ಮತ್ತೆ ಕೆದಕಿ
ಸಹನೆ ಪರೀಕ್ಷಿಸುತ್ತದೆ
ಸ್ಪರ್ಶದ ಅಂತರ ಅರಿತು
ಉಸಿರಿಗೆ, ತೊಗಲಿಗೆ, ನೋಟಕೆ, ನೆನಪಿಗೆ
ಅದರ ಪರಿಚಯ ಮಾಡಿಸಿ
ಭಾವಕೋಶವ ರೂಪಿಸಿಕೊಳ್ಳೋಣ
No comments:
Post a Comment