ಬಾ
ಮುಗಿಲಾಚೆ ಒಂದು
ಮನೆ ಮಾಡುವ
ಈ
ಒಲವೆಂಬ ಹೆಸರ
ಅದಕಿರಿಸುವ
ನೂರಾರು ಬಣ್ಣ
ಅಲ್ಲಲ್ಲಿ ಖಾಲಿ ಬಿಳಿ ಬಣ್ಣ
ನಾನೊಂದು ಸಾಲು
ನೀನೊಂದು ಸಾಲು
ಮನೆಗೊಪ್ಪುವ ಹಾಗೆ
ಮನಕೊಪ್ಪುವ ಹಾಗೆ
ಗೀಚೋಣ..
ಗೀಚಿ ಸಾಗೋಣ..
ಮಾಳಿಗೆಯ ಮೇಲೆ
ಒಣಗಿಸಲು ಸಂಡಿಗೆ
ಹನಿ ಬರುವ ಆತಂಕವಿರಲಿ
ಮೊಗಸಾಲೆಯಲಿ ಬಿಟ್ಟ
ರಂಗೋಲಿಯೊಳಗಿಂದ
ರಾಗ ಲಹರಿ ಹೊಮ್ಮಿ ಬರಲಿ
ಬಿಡಿಗಾಸು ಗಿಟ್ಟದ
ಪದ್ಯಗಳ ಬರೆದು
ಹೊಂಗನಸು ಕಾಣುತ
ಮುತ್ತುಗಳ ಬೆಸೆದು
ಸಂತೆಯಲಿ ನಮಗಿಂತ
ಸಿರಿವಂತರಿರಬಹುದೇ
ನೋಡಿ ಬರುವ ಬಾ…
ಚಿಗುರು ಕಾಲದ ತಳಿರು
ತರಗೆಲೆಗಳಾದವು
ಹಗುರ ಹೆಜ್ಜೆಯ ಇಡಲು
ಮಾತಿಗಿಳಿದಾವು
ನಿಂತು ಸಾಗುವ ಮುಂದೆ
ಆಲಿಸಿ ಪ್ರಶ್ನೆಗಳ
ಹೂದೋಟ ತಲುಪಲು
ತಾಲೀಮು ಬೇಕು
ದೊಂದಿಯೊಂದನು ಉರಿಸಿ
ಕತ್ತಲನು ದಾಟುವ
ಕಣ್ಣಿನ ಮಾತುಗಳ
ನಾವರಿತುಕೊಳ್ಳುವ
ಬಾ ಗೆಳತಿ ಬಾ..
ಎದೆಗೊರಗುವುದು ಸಾಕು
ಉಸಿರು ಉಸಿರಿಗೆ ಸಿಗಲಿ
ಅಷ್ಟು ಹತ್ತಿರ ಬಾ
ತುಟಿಗೆ ತುಟಿ ಗೀರುತಲಿ
ಆವರಣ ಬೆಚ್ಚಗಿರಿಸುವ
ಸರಿದು ಬಾ
ದಣಿದ ಸರೋವರಕೆ
ಬೆವರಿಳಿಸುವ
ಕೆಸರು ಕಚ್ಚಿದ ದೋಣಿ
ಹೊರಗೆಳೆಯುವ
ಬಾ ವಿಹರಿಸುವ
ತರಂಗಳ ಮೂಡಿಸಿ
ಅಂತರಂಗದ ಸಮರ
ಶಮನಿಸಲಿ ಬಾ
ಬಾ ಸಖಿ ಬಾ…
No comments:
Post a Comment