Friday, 3 April 2026

ಎಳನೀರು ಮಾರುವವಗೆ ದಣಿವಾಗದೇ?

ಎಳನೀರು ಮಾರುವವಗೆ ದಣಿವಾಗದೇ?

ಕೊಚ್ಚಿ ಒಂದಾದರೂ ಕುಡಿಬಾರದೇ?
ಬಿರು ಬಿಸಿಲ ಬೇಗೆಯಲಿ ಬೆಂದು ಬಸವಳಿದರೂ
ದಾಹಕಿಂತಲೂ ಜೇಬು ಮಿಗಿಲಾದುದೇ?

ಗಂಜಿ, ಪೇಪರ್ ಗಂಜಿ, ಬರಿ ನೀರ ಕಾಯಿ
ಯಾವುದಾವುದು ಎಂದು ಅವ ಹೇಗೆ ಬಲ್ಲ?
ಒಂದೊಂದ ಮೊಟಕುತ್ತ ಕಿವಿಗೊಟ್ಟು ನೋಡುವ
ಶಬ್ಧಾರ್ಥದ ಗುಟ್ಟು ಅವನಷ್ಟೇ ಬಲ್ಲ

ಮೂರೇ ಏಟಿಗೆ ಸೀಳಿ ತಲೆ ಬುರುಡೆಯನ್ನು
ಮಚ್ಚಿನ ಅಂಚಿಂದ ಕೊತ್ತು ತೂತಿಟ್ಟು
ಕೈಲಾಗದವರೆಲ್ಲ ಸ್ಟ್ರಾಗೆ ತಡಕಾಡಿದರು
ವೀರರು ತುಟಿಗೊತ್ತಿ ಎದೆಗಿಳಿಸಿಕೊಂಡರು

ಖಾಲಿ ಬೊಂಡವ ಹಾಗೇ ಎಸೆಯುವಂತಿಲ್ಲ
ಒಳಗೆ ತಿರುಳು ಇರಲಿ, ಇರದೆಯೇ ಇರಲಿ
ಹೋಳಾಗುವ ತನಕ ಕಾಲ್ಕಿತ್ತುವಂತಿಲ್ಲ
ಚೂರೇ ದಕ್ಕುವುದಾದರದೂ ದಕ್ಕಲಿ

ಒಂದೊಂದು ಸ್ತರದಲ್ಲಿ ಒಂದೊಂದು ಬೆಲೆ ನಿಗದಿ
ಮರದಲ್ಲಿ ಚಿಲ್ಲರೆ, ಇಳಿಸಿದರೆ ರೇಟು
ರೈತನಿಗೆ ಚಿಲ್ಲರೆ, ಮಾರುವವ ಗ್ರೇಟು
ರಸ್ತೆಯಲಿ ಚಿಲ್ಲರೆ, ಬಾಟ್ಲಿಯಲಿ ನೀಟು
ಸ್ಟಿಕ್ಕರ್ರು ಮೆತ್ತಿದರೆ ಸೂಪರ್ ಮಾರ್ಕೆಟ್ಟು...

No comments:

Post a Comment

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...