ಒಂದು ಹೆಜ್ಜೆ ನಿನ್ನದು
ಒಂದು ಹೆಜ್ಜೆ ನನ್ನದು
ಒಂದುಗೂಡಿ ಹೆಜ್ಜೆ ಹಾಕುವ
ಒಂದು ಮಾತು ನಿನ್ನದು
ಒಂದು ಮಾತು ನನ್ನದು
ಕೂತು ನಾಕು ಮಾತನಾಡುವ
ಒಂದು ಸಾಲು ನಿನ್ನದು
ಒಂದು ಸಾಲು ನನ್ನದು
ಚಂದವಾದ ಗೀತೆ ಗೀಚುವ
ಎಲ್ಲವನ್ನೂ ಅರಿಯಲು
ಒಂದೇ ಜನುಮ ಸಾಲದು
ನೂರು ಜನ್ಮವನ್ನು ಪಡೆಯುವ
ಯಾವ ಕಾಲಮಾನಕೆ
ಸರಿದು ನೋಡಿಕೊಂಡರೂ
ನಮ್ಮದೊಂದು ಛಾಯೆ ಅಲ್ಲಿದೆ
ನಾವು ನಿಧಿಯ ಹುದುಗಿಸಿ
ಇಟ್ಟ ಜಾಗದಲ್ಲಿಯೇ
ಪ್ರೇಮ ವೃಕ್ಷ ಬೆಳೆದು ನಿಂತಿದೆ
ಯಾವ ಮೆಟ್ಟಿಲಿಲ್ಲದ
ಬೆಟ್ಟವೇರಿ ಕೂತರೂ
ಬಂಡೆ ಮೇಲೆ ನಮ್ಮ ಕೆತ್ತನೆ
ಅರ್ಥವಾಗದಂತಹ
ಭಾಷೆಯಲ್ಲಿ ತರಗೆಲೆ-
-ಮೇಲೆ ಹೆಣೆದ ಕಾವ್ಯ ಕಲ್ಪನೆ
ದಾರಿ ತಪ್ಪಿದಾಗಲೂ
ಎದುರು ಬದುರು ಸಿಕ್ಕೆವು
ಏನೋ ನಂಟು ಉಂಟು ನಮ್ಮಲಿ
ಕಂಗಳಾಡೋ ಮಾತನು
ಏರಿದುಸಿರ ಭಾವಕೆ
ಹೂಗಳೂಹೆ ಮಾಡಿಕೊಳ್ಳಲಿ
No comments:
Post a Comment