Friday, 3 April 2026

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ

ಮನಸಿನೊಳಗೆ 
ನಿನಗೆಲ್ಲ ತಿಳಿವಂತೆ
ಅರಿವೆ ಏನಂದುಕೊಂಡರೂ
ನಿನ್ನೊಳಗಿರುವ 
ನಾನೆಲ್ಲ ಕಲಿತಂತೆ
ಬರುವೆ ಮುಂಚಿತವಾಗಿ
ಎದುರುನೋಡುತ ಕೂತು
ನಿನಗಾಗಿ, ನಿನಗಾಗಿ

ನೂರಾರು ಕಾಲಕ್ಕೂ
ಹೀಗೇನೇ ಒಂದಾಗಿ
ಬಳೋಣ ನಾವಿನ್ನೂ
ಹಾಯಾಗಿ.. ಹಾಯಾಗಿ
ಈ ಪ್ರೇಮ ಯಾನಕ್ಕೆ
ಸುತ್ತೋಲೆ ನೀಡುತ್ತ
ಸುತ್ತಾಡಿಕೊಳ್ಳೋಣ
ಹಾಯಾಗಿ.. ಹಾಯಾಗಿ

ಒಂದು ಎಲೆಯು ಉದುರೋದು
ಮತ್ತೆ ಚಿಗುರಿ ಅರಳೋಕೆ
ಕಳೆದುಕೊಂಡುದ ನೆನೆದು
ಇರುವ ಕ್ಷಣವ ಕಳಿಬೇಕೆ?
ನೆನಪ ಸಂತೆಯ ತುಂಬ
ನಮ್ಮ ಹೆಜ್ಜೆಯ ಗುರುತು
ಹುಡುಕೋಣ.. ಹುಡುಕೋಣ..

ಒಂದೂರಿನಲ್ಲೊಬ್ಬ
ಚೆಲುವಾಂತ ಮಾರಾಯ
ಯುವರಾಣಿ ಹುಡುಕುತ್ತ
ಬಂದಂತೆ.. ಬಂದಂತೆ..
ಆ ರಾಣಿ ಯಾರೆಂದು
ಕಣ್ಣಾರೆ ಕಂಡಾಗ
ದಂಗಾಗಿ ನಿಲ್ಲುತ್ತ
ಸೋತಂತೆ.. ಸೋತಂತೆ..

ನಿದಾನಿಸು ನಿದಾನಿಸು ನೀ

ನಿದಾನಿಸು 

ನಿದಾನಿಸು ನೀ 
ನಿದಾನಿಸು 
ನಿದಾನಿಸು ನೀ 
ನಿನ್ನ ಹಿಂಬಾಲಿಸಿ
ಬಂದೆ ನಾ
ಬಚ್ಚಿಡುವೆ ನೆರಳ
ಕಾಣದೆ
ನಿನಗೆ ನಾ ಸಿಗುವೆ
ನಿದಾನಿಸು ನೀ

ಎಲ್ಲೋ ಕಳೆದ ಸಾಲನ್ನು ಹುಡುಕಲೇ?
ನಾನೇ ಮರೆತ ಹಾಡೊಂದ ಹಾಡಲೇ?
ಒಂಟಿ ನಾನು ಆಗೋದು 
ನಿನ್ನ ನೆನಪೇ ಇರದಾಗ
ಎಲ್ಲ ಸಮಯ ನೀ ಜೊತೆಯಾದೆ
ನೆನಪಿಗೆ..

ಆಗುವೆ ರೂಪಾಂತರ ನಾ ದಿನ
ಗುರುತು ಸಿಗದೇ ಹೋಗೋಕೆ ಕಾರಣ
ಕಣ್ಣಿನೆದುರು ಬಂದಾಗ
ಕಣ್ಣಲೇ ಒಂದಾದಾಗ
ಜಾರಿ ಬಂದ ಕಂಬನಿ ಸಾಕ್ಷಿ
ನೆನಪಿಗೆ..

ಚಂದ್ರ ಬಂದ ನಿನಗಾಗಿ

ಚಂದ್ರ ಬಂದ ನಿನಗಾಗಿ

ಬೆಳದಿಂಗಳೊಳಗೊಂಡು
ಬಿಳುಪಾದ ಬೆಳಕನ್ನು ಎದೆಗಾನಿಸಿ
ಇದೋ ಕಂದ ಜೊತೆಗಾರ
ಇರುತಾನೆ ಸದಾ ಕಾಲ
ಇರುಳಾಗೆ ಭಯ ಬೇಡ ಕವಿಯೇ ಮಸಿ
ಒಂಟಿ ಮನೆಯ ಒಂಟಿ ದೀಪ ಊರಿಗೆಲ್ಲವೂ
ಜಾರಿಕೋ.. ನಿದ್ದೆಗೆ..

ಕಣ್ಣ ಕಡಲಾಗೆ ನೂರಾರು ಬಣ್ಣ
ಬೆರೆತಂತೆ ಕನಸಿನ್ನೂ ಚನ್ನ
ನೀ ಮಲಗೋಕೂ ಮುನ್ನ
ಬಿಗಿದಪ್ಪು ನನ್ನ
ಅತ್ತ ಇತ್ತ ನೋಡುತ್ತ
ಮರುಳಾಗ ಬೆಡಯ್ಯ
ನಿನ್ನ ಕೈಯ್ಯ ಹಿಡಿದಾನು
ಆ ಗುಮ್ಮಯ್ಯ

ಅಮ್ಮ..
ನಿನ್ನಲ್ಲಿ ನನ್ನನ್ನ
ನನ್ನಲ್ಲಿ ನಿನ್ನನ್ನ
ಹೇಗೆ ಬಚ್ಚಿ ಇಟ್ಟುಕೊಂಡೆ ಹೇಳು
ಏನೋ ಒಂದು
ನೆಪ ಹೇಳಿ
ವಿಷಯಾಂತರ ಮಾಡೋ ಕಲೆ.. ಓ..
ಇಲ್ಲಿ ಕೇಳು
ನನ್ನ ಬಾಳು
ನಿನಗಾಗೇ ಮೀಸಲು ಈಗಲೇ.. ಓ..

ತಾರೆ ತಾರೆ ಸಾಲಾಗಿ
ನಿಲುತಾವೆ ಸೊಗಸಾಗಿ
ನಿನ್ನ ರೂಪ ಬಿಡಿಸೋಕೆ ಆಕಾಶದಿ
ಬಾರೋ ಬೇಗ ಹಸಿದಲ್ಲಿ
ದಣಿದಲ್ಲಿ ಕರುವಾಗಿ
ಬಸಿದಂತ ಬೆವರಲ್ಲೇ ಹಾಲುಣಿಸುವೆ
ಅಂಟಿದಂಥ ಪಸೆಯನ್ನು ನೇವರಿಸುವೆ
ಕಂದ ಜೋ.. ಜೋ ಲಾಲಿ...

ತೀರದ ಮೋಹ ನಿನ್ನ ಕಂಡು

ತೀರದ ಮೋಹ ನಿನ್ನ ಕಂಡು

ಹೇ.. ಯಾಕೆ
ಸಖಿ, ತಿಳಿ
ನಾ ನಿನ್ನ ಬೇಡಿ
ಸಾಕಾಗಿ 
ಹೀಗಾದೆ
ಮರುಭೂಮಿ ಬರಡಾದೆ
ನಿನ್ನ ಜೊತೆ, ನನ್ನ ಕತೆ
ಶುರುವಾಗಿ ಕೆಲ ಕಾಲ
ಆದಂತೆಯೇ ಮುಗಿವಂತಿದೆ
ಬೇಡ ಇನ್ನು
ಆತುರ ಏತಕೆ
ನನ್ನ ಸಂಕೋಲೆ ನೀ ಮುರಿದು ಹೋದೆ
ಹಾಕುಲೇ ಪೀಠಿಕೆ
ಕೈಯ್ಯ ಹಿಡಿಯುತ್ತ ಮುನ್ನಡೆಸಲು
ಜೀವವೇ.. ಜೀವವೇ...

ಕಮಲಾಂಕಿತ ನಯ ನಾರಿ

ಕಮಲಾಂಕಿತ ನಯ ನಾರಿ 

ಹೂ ಬಾಣ ಹೂಡೋ ಪ್ರಹಾರಿ 
ಮೃದು ಮಲ್ಲೆಯನೂ ಮೀರಿ
ನುಡಿದಾಗ ಹೊಮ್ಮೋ ಶಾಯರಿ 

ಬೇಕೆಂದರೂ ಬಾರದಪಸ್ವರ 
ಸಾಕೆಂದರೂ ಸುರಿವ ಧಾರೆ 
ಆ ಕೋಮಲ ಬೆರಳಾಕೃತಿ
ಕೊಳಲನ್ನೂ ಮೀರಿಸುವ ಸೂರೆ

ಸರಿದೂಗಿ ಕೊಡುವಾಸೆ

ಸರಿದೂಗಿ ಕೊಡುವಾಸೆ 

ಹೃದಯ ನಿನದಾಗಿದೆ 
ನಿನ ಮೇಲೆ ಅತಿಯಾದ 
ಒಲವು ಶುರುವಾಗಿದೆ 
ಅಂತರವೆಲ್ಲ ನಂತರವಿರಲಿ 
ಆದರೆ ಬೇಗ ಒಪ್ಪಿಗೆ ಸಿಗಲಿ 

ನಿನಗೂ, ನನಗೂ ಹೊಂದುವ ಹಾಗೆ 
ಸರಳ ದಾರಿ ಹುಡುಕೋಣ 
ಕೊನೆಯ ವರೆಗೂ ಹೆಜ್ಜೆ ಇರಿಸು 
ಜೊತೆಯ ಸವಿದು ಸುಖಿಸೋಣ 
ಹೇಳಿ ಕೇಳಿ ಮಾಡೋದಲ್ಲ (೨)
ತಾನಾಗೆ ಪ್ರೀತಿ ಮೂಡೋ ಮಾಯೆ..

ಒಲಿದೆ ನೀನು ಕ್ಷಿತಿಜದ ಹಾಗೆ
ನಿನ್ನ ತಲುಪೋ ರೆಕ್ಕೆ ನೀಡು
ನನ್ನ ನೆರಳೇ ನನ್ನನು ತಡೆದು
ನಿನ್ನ ಕಡೆಗೆ ದೂಡಿತು ನೋಡು
ನಿಂತು ಕಣ್ಣಾರೆ ನೋಡೋ ಆಸೆ (೨)
ನೋಡಿ ನೋಡದ ಹಾಗೆ ನಟಿಸು..

ನೀನು ಬಂದೆ ಸನಿಹ ಹೀಗಾದೆ

ನೀನು ಬಂದೆ ಸನಿಹ ಹೀಗಾದೆ 

ನಿನ್ನ ಮೇಲೇ ಗಮನ 
ನೀನೇ ನನ್ನ ಮನದ ಇರಾದೆ 
ನೀನೇ ನನ್ನ ಕವನ 
ಯಾರೇನೇ ಅಂದರೂ
ನಿನ್ನಲ್ಲೇ ಇರುವೆ ನಾ
ಪ್ರೇತಿಗೆ ಮೀಸಲು
ಈ ನನ್ನ ಜೀವನ
ಓ... ಓ...

ಕೆಂಬಣ್ಣದ ಸಂಜೆಗೆ
ನೀನಾದೆಯಾ ಕಾರಣ?
ಮುಂಗೋಪವ ಬೀರುವೆ
ಎದೆಯಲ್ಲಿ ಭೂ ಕಂಪನ
ಮುಂಗಾರಿನ ಆಗಮನಕೆ
ಬಿರಿದ ನೆಲ ಸಜ್ಜಾಗಿದೆ....
ಓ... ಓ...

ಆರಂಭವೇ ರೋಚಕ
ಈ ಪಯಣವಿನ್ನೂ ಸವಿ
ಒಲವಾಗುವ ಮೂಲಕ
ನಾನಾದೆನಾ ಹುಸಿ ಕವಿ
ಬೆರಳಂಚಿನ ಗೋರಂಟಿಯ
ನನ್ನೆದೆಗೆ ನೀ ಗೀಟಾಗಿಸು...
ಓ... ಓ...

ನಿನ್ನೊಂದಿಗೆ, ಎಲ್ಲಿದ್ದರೂ

ನಿನ್ನೊಂದಿಗೆ, ಎಲ್ಲಿದ್ದರೂ 

ಮಾತು ಕತೆ, ಸಾಗಿದೆ 
ಗುಟ್ಟುಗಳ, ಬೇಕಂತಲೇ 
ಕಾಪಾಡುವೆ, ಹೇಳದೆ 
ಏಕೋ ಈಗ 
ಕಣ್ಣು ತುಂಬಿದಂತೆ 
ಬೇಡೆಂದರೂ 
ನಿಲ್ಲದೆಯೇ 
ಜಾರಿದೆ ಮತ್ತೆ.. ಕಣ್..

ಒಂಟಿತನವೇ ಜೊತೆಯು ಈಗ
ಬೇರೆ ಯಾವ ನಂಟಿಲ್ಲ
ನಿನ್ನ ನೆರಳು ಕಂಡೂ ಕೂಡ
ನನಗೆ ನಂಬಿಕೆ ಬರುತಿಲ್ಲ
ಎಂದೋ ಮರೆತ ಊರು ಇನ್ನೂ
ದೂರದಲ್ಲೇ ಉಳಿದಂತೆ
ನನ್ನ ಗುರುತು ನನಗೇ ಇಲ್ಲ
ನಿನ್ನಲ್ಲಿ ಹುಡುಕಲು ತರವಲ್ಲ
ಮನದಾಳದ, ಕುಸಿದ ಸ್ವರ
ತುಟಿಯಂಚಿಗೆ, ಬಂದಿದೆ
ನಿನ್ನೆದುರು, ಹಾಡದಿರೋ
ಹಾಡುಗಳೇ, ಕಾಡಿದೆ
ಏಕೋ ಈಗ 
ಕಣ್ಣು ತುಂಬಿದಂತೆ 
ಬೇಡೆಂದರೂ 
ನಿಲ್ಲದೆಯೇ 
ಜಾರಿದೆ ಮತ್ತೆ.. ಕಣ್..

ನಿನ್ನ ಜೊತೆಯಲ್ಲೇ ಈ ಜೀವನ

ನಿನ್ನ ಜೊತೆಯಲ್ಲೇ ಈ ಜೀವನ 

ಖುಷಿಗಳೆಲ್ಲಕ್ಕೂ ನೀ ಕಾರಣ 
ಒಂದುಗೂಡಿ ಹಿತವಾಗಿದೆ 
ಎಂಥ ಚಂದ ನಮ್ಮೀ ಬಂಧನ 
ನಾ ಬರುವೆನು ನಿನ್ನ ಬೆನ್ನ ಹಿಂದೆ 
ಅದಾವುದೇ ದಾರಿಯ ನೀ ಹಿಡಿ 
ಒಲವಿನ ಸಾಲು ಗೀಚಿ ಕಳಿಸು 
ಅದಾಗಲಿ ಬಾಳ ಮುನ್ನುಡಿ 

ನರನಾಡಿಯಲ್ಲೂ ಸಂಭ್ರಮ ನೀ 
ಹಿಡಿವಾಗ ನನ್ನ ಕಯ್ಯನು 
ಏನೆಂದು ಹೇಳೋ ಮುನ್ನವೇ ನಾ 
ಏನೆಂಬುದೆಲ್ಲ ಬಲ್ಲೆನು 
ಈ ಗರಿಗೆದರಿಸುತ ಆಕಾಶಕೆ 
ನಾ ಹಾರಿದೆ ಯಾವ ಭಯವಿಲ್ಲದೆ 
ಸಮಯದ 

ಸಂಗಾತಿ, ಸಂಗಾತಿ

ಸಂಗಾತಿ, ಸಂಗಾತಿ

ಬಾ ಹೇಳುವೆ ಒಂದು ಸಂಗತಿ
ಈ ಬಾಳ ಯಾನದಲಿ
ಆಗುವೆಯಾ ನನ್ನ ಸಾರಥಿ
ಮುಂದಾಗಿ ಹೋಗಬೇಡ ನಿಲ್ಲು ಚೂರು
ಬಂದೆ ಈಗಲೇ
ಕಲ್ಲಾಗಿ ನಿಂತೆ ನೋಡು ನೀನು ಒಮ್ಮೆ 
ಸೋಕಿದಾಗಲೇ
ಕರೆದಲ್ಲಿ ನಾನು ಬರುವೆ ಸದಾ
ನಗುವಲ್ಲಿ ನಾನು ಸಿಗುವೆ ಸದಾ
ಜಗವನ್ನೇ ಗೆಲ್ಲಬಲ್ಲೆ ಹೇಳು ಜಯಿಸೋದಾ..

ಓ.. ಹೇಗಾದರೂ ಹೊಂಗನಸನು
ನೀ ಕದ್ದು ಹೋಗೆಯಾ
ಮುನ್ನೆಚ್ಚರ ಇರುವಂತೆಯೇ
ನೀ ಎಡವಿ ಬಿದ್ದೆಯಾ
ನನ್ನ ಕತೆ ನಿನ್ನ ಜೊತೆ
ಗೀಚೋದೇ ಸುಂದರ
ಈ ನಾಳೆಯ ಚಪ್ಪಾಳೆಗೆ
ನೀ ಹಾಳೆಯಾದೆಯಾ
ಹೇಗೋ ಮನ ದಿನ ಹೊಸ ಹೊಸ
ವಿಚಾರ ಮಾಡುತ
ನಿನ್ನ ಜಪ ತಪನೇ ಜೀವಮಾನಕೆಂದು ಶಾಸ್ವತ.
ಕರೆದಲ್ಲಿ ನಾನು ಬರುವೆ ಸದಾ
ನಗುವಲ್ಲಿ ನಾನು ಸಿಗುವೆ ಸದಾ
ಜಗವನ್ನೇ ಗೆಲ್ಲಬಲ್ಲೆ ಹೇಳು ಜಯಿಸೋದಾ..

ಅರಿಯದ ಸಂಭ್ರಮ

ಅರಿಯದ ಸಂಭ್ರಮ

ನಿನ್ನ ಜೊತೆ ಇದ್ದರೆ
ಖುಷಿಗಳ ಸಂಗಮ
ನೀನು ನಗುತಿದ್ದರೆ
ನನ್ನ ದಾರಿ, ನಿನ್ನ ದಾರಿ ಒಂದೇ ಇನ್ನೂ
ಬಿಟ್ಟು ದೂರ ಆಗಲಾರೆ ಎಂದೂ ನಾನು
ಜೀವ ನಿನ್ನದಾದಮೇಲೆ ಬೇರೆ ಏನು
ಕಣ್ಣಿನಲ್ಲಿ ಪ್ರೀತಿ ಉಕ್ಕ ಬಾರದೇನು?

ಕರುಣಿಸು ಒಂದು ವರ.. ಒಪ್ಪಿಸುವೆ
ಪ್ರಣಯದ ಕವಿತೆಯ
ಭಯವನು ಪಡದಿರು.. ಹೊತ್ತಿಸುವೆ
ಒಲವಿನ ಹಣತೆಯ
ಇನ್ನೂ ಮುಂದೆ ಧ್ಯಾನವೆಲ್ಲ ನಿನ್ನದೇನೇ
ಎಲ್ಲ ನಿಜವನ್ನೂ ಮೀರೋ ಸ್ವಪ್ನ ನೀನೇ
ನೋಡು ಎಂಥ ಈಡು-ಜೋಡು ನಾವಿಬ್ಬರೂ
ಒಂದುಗೂಡಲೆಂದ ನೋಡು ದೇವರೇನೇ..
ನನ್ನ ದಾರಿ, ನಿನ್ನ ದಾರಿ ಒಂದೇ ಇನ್ನೂ
ಬಿಟ್ಟು ದೂರ ಆಗಲಾರೆ ಎಂದೂ ನಾನು
ಜೀವ ನಿನ್ನದಾದಮೇಲೆ ಬೇರೆ ಏನು
ಕಣ್ಣಿನಲ್ಲಿ ಪ್ರೀತಿ ಉಕ್ಕ ಬಾರದೇನು?

ಹೂವಿಗೆ ಜೇನ್ನೊಣಗಳ ಕಾಟ

ಹೂವಿಗೆ ಜೇನ್ನೊಣಗಳ ಕಾಟ 

ಹೂವಿಗೂ ಆ ಕಾಟವೇ ಇಷ್ಟ 
ಬಣ್ಣಗಳ ಬೆರೆಸುವ ಆಟ 
ಪ್ರಕೃತಿಯು ಕಲಿಸಿದ ಪಾಠ 

ಅನುರಾಗ ಶುರುವಾಗಿ

ಅನುರಾಗ ಶುರುವಾಗಿ 

ಜಗವೇ ಬದಲಾಗಿದೆ 
ಜೊತೆಗಾಗಿ ನೆರಳೀಗ 
ಬೆಳಕ ಹುಡುಕಾಡಿದೆ 
ಹಂಬಲದಲ್ಲಿ ಪ್ರೀತಿಸುವಾಗ
ಅಂಗಳವೆಲ್ಲ ಹಬ್ಬವೇ ತಾನೇ

ಮರದ ಹೃದಯ ಬಡಿದ ವೇಳೆ 
ಇರುವ ಹೃದಯಕ್ಕೆ ಕಲಸ ಇಲ್ಲ 
ಕರೆವ ಹೆಸರೇ ಹಾಡಾಗಿರಲು
ಬೇರೆ ಹಾಡೇ ಹಿಡಿಸೋದಿಲ್ಲ
ನಂಟು ಹಾಕೋ ನೂರು ಗಂಟು
ಎಂದೂ ಬಿಡಿಸೋಕೆ ಆಗೋದಿಲ್ಲ..

ಎದುರು ಬದುರು ಕೂತಾಗೆಲ್ಲ
ಕಣ್ಣು ಕಣ್ಣನ್ನೇ ನೋಡೋದೇಕೆ?
ಒಂದೋ ಎರಡೋ ಮಾತಾಡೋಣ
ಬಾಕಿ ಸಮಯ ಕಿರು ಸರಸಕ್ಕೆ
ಚಂದ ಚಂದ ತಂದ ಈ ಬಗೆ
ಪ್ರೀತಿ ಹೊರತು ಬೇರೆಲ್ಲಿಲ್ಲ..

ಹುಣ್ಣಿಮೆಯ ಸೊಬೆಗೆ

ಹುಣ್ಣಿಮೆಯ ಸೊಬೆಗೆ 

ನೀ ಧಾರೆಯಾಗಿ ಸುರಿದೆ
ಬೆರಗಾಗಿ ನಾನು ಉಳಿದೆ 
ಕಂಡು ಕೇಳರಿಯದಂಥ ಅಂದವೇ 
ನೀ ಬಳಿಯಲಿರಲು ಆನಂದವೇ 

ನೀನದೇ ನಿನದೇ ಸಕಲ 
ನನ್ನೇ ಬರೆದು ಕೋಡಲಾ?
ಮೊದಲ ಸಿಡಿಲು ಬಡಿದ ಭುವಿಯು
ಮಳೆಗೆ ಕಾದ ಹಾಗೆ ನಾನು
ಮರಳಿ ನಿನ್ನ ಮೊಗವ ಕಂಡು
ಮೊದಲಿಂತೆ ಅರಳಲೇನು?
ಗರಿಗೆದರಿದ ಅನುಭವ
ಉಸಿರುಸಿರಲೂ ಆಗಿದೆ
ಹದಿಹರೆಯದ ಕಲರವ
ಕನಸಿಗೂ ಖುಷಿ ತೋರಿದೆ
ಸರಿದ ಪರದೆಯನು, ಸರಿಸಿ ಹರಿದು ಬಿಡು
ಕವಿದ ಪ್ರೀತಿಯಲಿ ಸುಖಿಸು
ನೆಲವ ಕೊರೆಯುವುದ, ನಿಲಿಸಿ ಬೆರಳುಗಳ
ಎದೆಯ ಮೇಲಿರಿಸಿ ರಮಿಸು
ಬದುಕೋಣ ಪ್ರೀತಿಗಾಗಿ...

ಹಿಡಿಯ ನೆನಪ ಜೊತೆಗೆ
ಬಳಪ ಹಿಡಿಸು ನನಗೆ
ತವಕಗಳಿಗೆ ಬಿರಿದ ಪದವು
ಕರಗೋ ಮೊದಲೇ ಬರೆದು ಬಿಡುವೆ
ನಡುವೆ ಖಾಲಿ ಸ್ಥಳವ ಬಿಡುತ
ಗೀಚಿಕೊಳಲು ಅನುವು ಕೊಡುವೆ
ಉಲಿಯದ ಸರಿಗಮಗಳ
ಬೆರೆಸುತ ಹಾಡೋಣವೇ?
ನಾಳೆಯ ಹೊಸ ಪುಟಗಳ
ಈಗಲೇ ರಚಿಸೋಣವೇ?
ಹಸಿದ ಮನಸಿನಲಿ, ಕುಸಿದ ಬಯಕೆಯಿದೆ
ಬಿಸಿಯ ಪಾಯಸವ ಉಣಿಸು
ಸಿಗುವೆ ಬಿಡುವಿನಲಿ, ಮಗುವೇ ಆಗುತಲಿ
ನನಗೂ ಕುಣಿಯುವುದ ಕಲಿಸು
ಬೆರೆಯೋಣ ಪ್ರೀತಿಗಾಗಿ...

ಹೇಳದ ಮಾತು ನೂರಿವೆ

ಹೇಳದ ಮಾತು ನೂರಿವೆ 

ನಿನ್ನ ಮುಂದೆ ಮೌನ ತಾಳಿವೆ

ಮೀರಿ ಹೋಗಬೇಡ ಕಣ್ಣ 
ಗಾಯ ಮಾಡಬೇಡ 
ಗೇಲಿ ಮಾಡಬೇಡ ಹೀಗೆ 
ದಾಳಿ ಮಾಡಬೇಡ 
ನೀಲಿ ಬಾನಿನಾಚೆ ಸಾಗಿ
ತೇಲಿಹೋಗ ಬೇಡ

ಉತ್ತರ ನೀಡಬಲ್ಲೆಯಾ
ನಿನ್ನ ಮುಂದೆ ಮೌನ ತಾಳುವೆ

ಓಡಿ ಬಂದೆ ಹಿಂದೆ
ರೂಢಿಯಾದ ಹಾಗೆ
ಕೇಳಬೇಕು ನೀನೇ ನನ್ನ ಪಾಡು
ನೀನು ಅತ್ತ ವೇಳೆ
ನಾನು ಸತ್ತ ಹಾಗೆ
ಆಗ ಒಮ್ಮೆ ತಟ್ಟಿ ಪ್ರಾಣ ನೀಡು

ಈಗೀಗ ಎಲ್ಲ ನಿನ್ನದೇ
ನಿನ್ನ ವಿನಹ ಶೂನ್ಯಾವರಿಸಿದೆ...

ಹುಣ್ಣಿಮೆ ನಿನ್ನ ಪ್ರತಿರೂಪ

ಹುಣ್ಣಿಮೆ ನಿನ್ನ ಪ್ರತಿರೂಪ 

ಕಣ್ಣಲೇ ಹೊತ್ತು ಕಿರು ದೀಪ 
ಚಂದಿರ ನಿನ್ನ ಗುಣಗಾನ 
ಮಾಡುವ ದಿನ ಬರೋ ಮುನ್ನ 

ನಾನಿದ ಹೇಳಬೇಕು 
ಬಾಳಿಗೆ ನೀನೇ ಸಾಕು 
ಸಾಕ್ಷಿ ನಮ್ಮ ಪ್ರೀತಿಯೇ…


ಸಾಗುವುದು ಹೇಗೆ ಚೆಲುವ
ದಾರಿ ಒಂಟಿ ಈಗಲೂ 
ಹೆಜ್ಜೆಗೆ ಹೆಜ್ಜೆ ನಿನದು 
ಇರಲಿ ಜೊತೆಗೆ ಮೀಸಲು 
ಮೋಡವ ಹೊತ್ತು ತರುವೆ 
ನಿನ್ನ ಉಸಿರು ಸೋಕಲು 
ಮೀಯುವ ಇಬ್ಬರೂ ಅಲ್ಲಿ 
ನಮಗೆ ನಾವೇ ಕಾವಲು 
ಉಮ್ಮಳಿಸಿ ಬಂದ ಪ್ರೇಮ 
ತೋರುವುದು ಎಂದಿಗೆ?
ತುಂಬಿಸುವೆ ನೋಡು ನಲ್ಲೆ 
ಆಸೆಗಳ ಬಿಂದಿಗೆ 
ಆಲಿಸು ಪಿಸು ನುಡಿಯನ್ನು 
ಪೋಣಿಸು ನನ್ನ ಹೆಸರನ್ನು 


ಬಣ್ಣಿಸುವ ಯಾವ ಸಾಲು 
ಸಾಲೋದಿಲ್ಲ ಏತಕೆ
ಬಣ್ಣಗಳು ನಿನ್ನ ಕುರಿತೇ 
ಯೋಚಿಸುವ ವಾಡಿಕೆ 
ಎಲ್ಲವನೂ ನೀನೇ ಹೇಳಿ 
ಎದುರು ನೋಟವೇತಕೆ 
ನನ್ನ ಪಾಲಿಗಂತೂ ನೀನು 
ದೈವ ಕೊಟ್ಟ ಕಾಣಿಕೆ 
ಜನ್ಮಕೆ ನಿನ್ನ ವಿನಹ 
ಬೇಡಿಕೆ ಇಲ್ಲವೇ 
ನನ್ನ ಗೆಲುವೆಂದಿಗೂನು 
ನಿನ್ನದೇ ಅಲ್ಲವೇ 
ಕಂಪನ ನೀನಿಲ್ಲದ ವೇಳೆ 
ತಲ್ಲಣ ನೀನಿಲ್ಲದೆ ನಾಳೆ 

ಅಲೆ ಅಲೆಗಳ ಸಂಗೀತ

ಅಲೆ ಅಲೆಗಳ ಸಂಗೀತ 

ಮನಗಡಲಿಗೆ ಉಲ್ಲಾಸ 
ಮರೆತಂತೆ ತುಟಿ ಅರಳೋ ಸಮಯ 
ಪರಿ ಪರಿಯಾದ ಮಿಲನ 
ಪರಿಚಯದಲ್ಲೇ ಮಿಥುನ 
ಇದು ಪ್ರೀತಿ ಉಂಟಾಗೋ ವಿಷಯ 
ಕದ್ದು ಮುಚ್ಚಿ ಹೇಳಬೇಕು ಎಲ್ಲವನ್ನೂ ಬಾ ಬೇಗ 
ನಿನ್ನ ಬಿಟ್ಟು ಬೇರೆ ಏನೂ ಬೇಡೆನು ಏಕೋ 
ಸಣ್ಣ ಪುಟ್ಟ ಆಸೆಗಳು ರೆಕ್ಕೆಯನ್ನು ಪಡೆವಾಗ 
ಬಾನಿಗಾರಿ ಮೋಡ ಮುಟ್ಟಿ ಬರಬೇಕು 

ಬಂತು ಬದುಕೀಗ ನೆರವಾಗಿ 
ಮಳೆಗಾಲ ಶುರುವಾಗಿ 
ಒಲಿದಂಥ ವರವಾಗಿ.. ಪ್ರೀತಿಯು 
ಎಲ್ಲ ತಿರುವಲ್ಲೂ ಹೊಸತಾಗಿ 
ಬಿರಿದಂಥ ಸುಮವಾಗಿ 
ಒಲಿದ ಇಂಚರವೀಗ ಇನ್ನೂ ಸೊಗಸು 


ಕಲಿಸುವರಾರಿಲ್ಲ ಕಲಿತವರೇ ಎಲ್ಲ 
ಉಸಿರಾಟದ ರೀತಿ ಪ್ರೀತಿ ಪಾಠ 
ಅನುಭವಿಸಲು ಇನ್ನೂ ಅನುಭೂತಿಯ ನೀಡೋ 
ಸರಿ ದಾರಿಯ ತೋರಿ ಸೋಲಿಸುವಾಟ 
ಆಯಾ ತಪ್ಪಿ ಬೀಳುವ ವೇಳೆಲಿ 
ಚಾಚಿ ಹಿಡಿವ ನೆರಳು ನೀನು 
ಕಣ್ಣಿನಲ್ಲಿ ಮೂಡೋ ಬಿಂಬದಲಿ 
ನಿನ್ನನ್ನೇ ಹಿಡಿದಿಡುವೆ ನಾನು ಇನ್ನು 

ಅತಿ ಸುಲಭದ ಮಾತು, ನಿನ್ನೆದುರಲು ಕೂತು 
ನುಡಿಯುವ ಪ್ರತಿ ಬಾರಿ ಏನೋ ತೊಡಕು 
ಜೊತೆ ಕಳೆಯುವ ಸಮಯ, ಗತಿ ಬದಲಿಸಿದಂತೆ 
ತಳಮಳವೇ ತಾನೆ ಎಲ್ಲ ಕ್ಷಣಕೂ 
ತನ್ನ ತಾನೇ ಎರವಲು ಕೊಡುವಂತೆ 
ತೇಲಿ ಬಂತು ತಂಪು ಗಾಳಿ 
ನೀನು ಬರುವ ಕಾತರಿ ದೊರೆತಾಗ 
ತಂಗಾಳಿಯೂ ನಿಂತಂತಿದೆ ಕಾತರದಲ್ಲಿ 

ಎಲ್ಲ ಸಮಯ ನಿನದೇ ಜಪ

ಎಲ್ಲ ಸಮಯ

ನಿನದೇ ಜಪ
ನೀನಿರದೆ ಹೋದಲ್ಲಿ
ನಾನು ನೆಪ
ಕರಗೋದಕೆ ಸಜ್ಜಾಗುವೆ
ಕಣ್ಣೀರ ಧಾರೆಲೂ ನಿನ ಜ್ಞಾಪಕ
ಮಾತೇ ಬರದ ಮಗುವಾಗುವೆ
ನೀನೇ ಅರಿತು ಸಂಬಾಳಿಸು
ಹೇಳಬೇಕೀಗ ನೀನೇ ಸಂತ್ವನ
ನಿನ್ನ ಕೈಯಲ್ಲೇ ನನ್ನ ಜೀವನ
ನೀಡಬೇಡ ಬೇರೇನೂ ಕಾರಣ 
ನಿನ್ನ ಕೈಯಲ್ಲೇ ನನ್ನ ಜೀವನ 

ಯಾವುದೇ ದಿಕ್ಕಲಿ
ಸಾಗುತ ನಿಂತರೆ
ನೀನಿರೋ ಜಾಗವ
ಹುಡುಕುತ ಸೋಲುವೆ
ಕನ್ನಡಿ ಬೀರುವ
ನನ್ನಯ ನಗುವನು
ನೀ ಜೊತೆ ಇಲ್ಲದೆ
ನಂಬಲು ಸಾಧ್ಯವೇ
ಅಸಹಾಯಕ ಈ ಹೃದಯವು
ನಿನ್ನೆಸರಲೇ ಬಡಿದಾಡಿದೆ...
ಹೇಳಬೇಕೀಗ ನೀನೇ ಸಂತ್ವನ
ನಿನ್ನ ಕೈಯಲ್ಲೇ ನನ್ನ ಜೀವನ

ಸಾಗರ ಸಂಗಮ
ಕಾಣದ ನದಿಯಲಿ
ಸಿಲುಕಿದ ಹಾಗೆಯೇ
ನನ್ನೇ ನಾ ಕಂಡೆನು
ಸಂತೆಯ ಬೀದಿಯ
ನಿಲ್ಲದ ಗದ್ದಲ
ನನ್ನ ಈ ಮೌನಕೆ
ಬದಲಿಸಿಕೊಂಡೆನು
ಕನಸಾಗದೆ ನಿಜವಾಗಿರು
ಏಕೆ ಮನಕೆ ನೋವಾಗುವೆ..

ಮೊದಲ ಮಳೆ, ಕವಿದ ಮುಗಿಲೆಲ್ಲ.. ಈ ದಿನ

ಮೊದಲ ಮಳೆ

ಕವಿದ ಮುಗಿಲೆಲ್ಲ.. ಈ ದಿನ
ಎದುರು-ಬದುರು
ಸಿಗುವ ಬಾ ಈಗ.. ತಕ್ಷಣ

ಒಂದೇ ಕೊಡೆ ಸೂರಿದೆ
ಅಂತರವೇ ಇಲ್ಲದೆ
ನಿನ್ನ ಜೊತೆ ನಿಂತಾಗ
ಮಳೆ ಜೋರು ...

ಅಂಗೈಯ್ಯಲಿ ಹಿಡಿದ ಹನಿ
ಕೈ ಜಾರುವ ಮುನ್ನ 
ಎರಚೋಣವೇ ನಾವು
ಒಬ್ಬರಮೇಲೊಬ್ಬರು!

ಈ ಮಣ್ಣು ಹೂವಾಗಿ
ಘಂ ಎನ್ನುತಲೀಗ
ಹರಿವ ನೀರಿಗೆ
ಹತ್ತಾರು ಪ್ರಯೋಗ
ನಿಧಾನ ಒಂದೊಂದೇ 
ಎಲೆ ಬಿಂದು ತೊಟ್ಟಿಕ್ಕಿದೆ

ನೆಲ ಕಾದು ಕಾದು
ದಣಿದದ್ದು ಹೌದು
ಹಸಿ ಮೈಯ್ಯ ಹಸಿವಿನ್ನೂ
ನೀಗಲೇ ಬಾರ್ದು
ಆ ಸೂರ್ಯ, ಈ ಚಂದ್ರ
ವಿರಮಿಸಿಕೊಳಲಿ..

ತಾರೆಗಳೆಲ್ಲ ರಜೆ ಹಾಕಿವೆ
ಏನಿದ್ದರೂ ಬಾನಿಗೆ
ಮಿಂಚು, ಗುಡುಗು ಆಸರೆ
ಹಕ್ಕಿಗಳು ಗೂಡಿನೆಡೆ ಕಾಲ್ಕಿತ್ತಿವೆ
ಅದೆಷ್ಟೋ ಉಪ್ಪರಿಗೆ ಸೋರುತ್ತವೆ...

ಇಷ್ಟಾಗಿ ನಾವಿಬ್ಬರೂ
ಒಂದೇ ಸೂರಿನಡಿ
ಇನ್ನೂ ಮೈ ಮರೆತು

ತಿಳಿದಿಲ್ಲ ನಮಗೆ
ಮಳೆ ನಿಂತದು
ಅಥವ ನಮ್ಮನು ನೋಡಿ 
ನಿಂತಿರ ಬಹುದು..

ಮನದಾಳದ ಮಧುರ ದನಿ

ಮನದಾಳದ ಮಧುರ ದನಿ

ಬರಿದಾಗದ ಓ ಇಬ್ಬನಿ
ನವಿರಾದ ಪುಟದೊಂದಿದೆ
ಹೊಸ ಬಾಳು ತೆರೆದಂತಿದೆ
ನೀ ಬಂದು ಸಹಿ ಮಾಡಲು.. ಪ್ರೀತಿಯಲಿ..

ನಿನಗೆ ಹೇಳಲು
ಬಲು ಖಾಸಾ ಮಾಹಿತಿ
ಹೃದಯ ತುಂಬಿ ಬಂತು
ಅನುರಾಗ ಸಂಗತಿ
ಭಯವೇಕೋ ನನ್ನನು ಕಾಡಿದೆ
ಕನಸಲ್ಲೇ ಎಲ್ಲವ ಹೇಳಿದೆ..

ಸಲುಗೆ ಮೀರಲು
ಇದೆ ಗೆರೆಯ ಅಂತರ
ಎಲ್ಲ ಗುಟ್ಟುಗಳನು
ಹಂಚಿಕೊಳುವ ನಂತರ
ನೆರಳನ್ನು ನೆರಳಿದು ಸೋಕಲು
ಅದೂ ಕೂಡ ನಲ್ಮೆಯ ದಾಖಲು...

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...