Tuesday, 10 December 2013

ನಾ ನಿಜಕ್ಕೂ ಬದಲಾದವ?!!

ಮೌನ ನಿನಗೆ ಒಪ್ಪುತ್ತದೆ
ಅದರ ಆಚರಣೆಯ ಭರದಲ್ಲಿ
ಮಾತುಗಳ ಕಟ್ಟಿ 
ಮೂಲೆಗುಂಪು ಮಾಡಿದ ನಿನ್ನ 
ಮಾತನಾಡಿಸಿದಷ್ಟೂ ಸಿದ್ಧಿಸದ-
ಉತ್ತರ, ಸಮ್ಮತಿಯೋ?
ನನ್ನ ಕಣ್ತಪ್ಪಿಸಲು ನೆಪವೋ?
ಅಥವ ಘೋರ ಜಪವೋ?
 
ಹೆಜ್ಜೆ ಗುರುತ ಬಿಟ್ಟು ಹೋದೆ 
ಒಗಟಿಗೆ ತಿರುವು ಕೊಟ್ಟು 
ಹಿಂಬಾಲಿಸಲೆಂದೇ?
ಸಂಬಾಳಿಸಲೆಂದೇ?
ನಾನಂತೂ ಎರಡೂ ಮಾಡದೆ 
ಮಗ್ನನಾಗಿ ಕಾಯುತ್ತ ಕುಳಿತೆ 
ಆ ಗುರುತುಗಳನ್ನೇ ಹೊಣೆ ಮಾಡಿ 
ನಿನ್ನ ಸೇರದ ಸೋಲಿಗೆ 
 
ಅದೆಷ್ಟೋ ಬಾರಿ ನೀ 
ಮೌನದಲ್ಲೇ ಕಪಾಳಕೆ ಬಾರಿಸಿದ್ದೆ!!
ಅದು ನನಗೆ ಸಿಹಿ ಮುತ್ತಾಗಿತ್ತು 
ತೇಲಾಡಿಸುವಷ್ಟು ಮತ್ತಾಗಿತ್ತು 
ಹಸಿದ ಮನಸಿಗೆ, ಕಾದ ಕನಸಿಗೆ 
ಹೊಟ್ಟೆ ತುಂಬಿಸುವ ತುತ್ತಾಗಿತ್ತು 
ನಿರ್ಗತಿಕನ ಪಾಲಿಗೆ 
ಕೂಡಿಟ್ಟ ಸ್ವತ್ತಾಗಿತ್ತು 

ನೀ ಜಗ್ಗಿದ ತುಟಿಗೆ 
ನಾ ತುಂಡಾಗುವ ಭೀತಿಯಲ್ಲಿ 
ಕಣ್ಣು ಮುಚ್ಚಿದ ನೆನಪು 
ಪ್ರಸ್ತುತದಲ್ಲೂ ಕಣ್ಮುಂದಿದ್ದಂತಿದೆ 
ನೀ ಹೆಸರ ಮರೆತಾಗ 
ನಾ ನಕ್ಕು ತೊದಲಿದ್ದು 
ನೀ ಗೊತ್ತಿದ್ದೂ ಮರೆತಂತೆ ನಟಿಸಿದ್ದು 
ನನಗೂ ಗೊತ್ತಿತ್ತು, ನಾನೂ ನಟನೇ?!!

ಕಣ್ಣಂಚಿನ ಹನಿಯ 
ಕಿರುಬೇರಳಿಂದ ಮೀಟಿ 
ಅಂಗಿಗೆ ಒರೆಸುವಾಗ
ಸಿಕ್ಕಿ ಬಿದ್ದ ನನಗೆ 
ಅದು ನಿನ್ನ ಬೀಳ್ಗೊಡುಗೆಗೆ  
ಗುರುತೆಂದು ಹೇಳುವ ತಾಕತ್ತು 
ಇರಲಿಲ್ಲವೆಂಬ ವಿಷಯ 
ನಿನಗೂ ತಿಳಿದಿತ್ತು?

ಇದ್ದಷ್ಟೂ ದಿನ ನೀ ಮೌನಿ
ನೆನಪಲ್ಲಿ ನಿನ್ನ ಮಾತಿಗೆ ತಲೆ ಬಾಗಿ 
ಮೌನಕ್ಕೆ ವಾಲೀರುವೆ,
ಅನುಚಿತವೆನಿಸಿದರೂ ನಿಜವಾಗಿ 
ನಾನು ನಾನೆಂಬ ಸತ್ಯ 
ನಿನಗೂ ಸುಳ್ಳನಿಸಬಹುದು 
ಒಮ್ಮೆ ಧಾವಿಸು, ಕಣ್ಹಾಯಿಸು 
ನಿನಗೆ ಯೋಗ್ಯನಾಗಬಹುದು, ನಾ ಈಗಲಾದರೂ..............?!!
 
                                                -- ರತ್ನಸುತ 

Monday, 9 December 2013

ಆ ಮೂವರ ನಡುವೆ !!!

ಒಂದು, ಎರಡು, ಮೂರು 
ಮರಳಿ ಒಂದರಿಂದ ಶುರು 
ನಾಲ್ಕೈದಾರರ ಸರದಿ?
ಇನ್ನು ಮಿಕ್ಕವುಗಳ ವರದಿ?
ಇದ್ದೂ ಇರದಂತಿದ್ದವು 
ಇದ್ದೇನು ಲೆಕ್ಕ!!
ಲೆಕ್ಕದಲಿ ಪಾಲ್ಗೊಳ್ಳದ ಅಂಕಿ
ಫಲಿತಾಂಶದಲಿ ಇಣುಕೋ ಮೂಖ ಪ್ರೇಕ್ಷಕ
 
ನಾಲ್ಕು ಸದಾ ನೆರಳಾಗಿತ್ತು 
ಮೂರರ ಪಾಲಿಗೆ 
ಮೀರುವ ತವಕವಿದ್ದರೂ, ಅದಕೆ- 
ಸಿಕ್ಕ ಪಟ್ಟವೇ ಬೇತಾಳ 
ಅದರ ಹಿಂದಿನವುಗಳ ಅಬ್ಬರ, 
ಅಬ್ಬಬ್ಬಾ ಒಬ್ಬಿಬ್ಬರಾ?!!
ಎಷ್ಟೇ ಆಗಲಿ, ಲೋಕದ ಕಣ್ಣಿಗೆ 
ಉತ್ತಮರು ಆ ಮೂವರೇ!!
 
ಒಂದಕ್ಕೆ ಒಮ್ಮೆ ಕನಸು ಬಿತ್ತು 
ಎರಡರೆದುರು ಸೋತಂತೆ 
ಎರಡಕ್ಕೂ ಅದೇ ಥರದ ಕನಸು 
ಮೂರರೆದುರು ಸೋತಂತೆ 
ಮೂರಿಗೆ ಇಬ್ಬರನ್ನೂ ಗೆದ್ದಂತೆ 
ಬೊಗಸೆ ಮೀರುವಷ್ಟು ಕನಸು 
ಇನ್ನುಳಿದವುಗಳ ಕನಸು?
"ಬಿಡಿ, ಯಾತಕ್ಕೆ ಕಾಲಹರಣ!!"
 
ಕೊನೆಗುಳಿದ ಅಂಕಿಗೆ ತನ್ನ-
ಯಾರೂ ಮೀರಿಸಲಾರರೆಂಬ ಪೊಗರು 
ಆ ಪೊಗರನ್ನು ಮೀರಿಸುವ ಸಲುವೇ 
ಕೊನೆಗೊಂದು ಸೊನ್ನೆ 
ಮತ್ತಷ್ಟು ಪೈಪೋಟಿ, ಮತ್ತಷ್ಟು ಓಟ 
ಮೊದಲಿದ್ದ ಸೊನ್ನೆಗೆ ಬೆಲೆ ಕಡಿಮೆ 
ಕೊನೆ-ಕೊನೆಗೇ ಹೆಚ್ಚು ಮಹಿಮೆ 
ಇದೇ ಭಾರತೀಯರ ಹಿರಿಮೆ!!
 
ಅನಂತಾನಂತ ಲೆಕ್ಕಾಚಾರದಲ್ಲಿ 
ಪ್ರಚಾರಕ್ಕೆ ಸಿಕ್ಕವು ಅನೇಕ 
ವಿಚಾರಕ್ಕೆ ಸಿಕ್ಕವು ಅನೇಕ 
ಆದರೂ ಆ ಮೂವರೇ ಪ್ರತ್ಯೇಕ 
ಮೊದಲೆಲ್ಲಿಂದಲೇ ಆಗಿರಲಿ,
ಎಲ್ಲೇ ಕೊನೆಗೊಂಡಿರಲಿ 
ಚಿನ್ನ, ಬೆಳ್ಳಿ, ಕಂಚಿನ ಬಿಲ್ಲೆ
ಕುಗ್ಗಿದ ಆ ಮೂವರ ಕೊರಳಿಗೇ!!

ನಾನೆಂಬವ ನಾಲ್ಕನೆಯದರಲ್ಲಿ 
ಒಂದು ಸಣ್ಣ ಚುಕ್ಕಿ ಭಾಗ 
ಅವಗೆ ಮೂರರಲ್ಲಿ ಒಂದನ್ನು
ದಕ್ಕಿಸಿಕೊಳ್ಳುವ ಹುಂಬ ರೋಗ
ಇದ್ದಲ್ಲೇ ಉಳಿದು ತಟ್ಟುವ ಚಪ್ಪಾಳೆ 
ಗಿಟ್ಟಿಸಿಕೊಳ್ಳುವಲ್ಲಿ ಸೋತಿದ್ದರೂ 
ಸೋತವರಲ್ಲಿ ಉತ್ತಮನೆಂಬ 
ತೃಪ್ತಿಗೂ ಇದೆ ಅವನಲ್ಲಿ ಜಾಗ!!
 
                           -- ರತ್ನಸುತ 

Wednesday, 4 December 2013

"ಮುಖ್ಯಾಂಶಗಳು - ನರರು ನಾಡಿನಿಂದ ಕಾಡಿನೆಡೆಗೆ"

ಬಂದವೋ ಹಿಂಡು ಹಿಂಡಾಗಿ 
ಉದ್ದ, ಗಿಡ್ಡ ಬಾಲವುಳ್ಳವು 
ಕೆಂಪು, ಕಪ್ಪು ಮೂತಿಯುಳ್ಳವು  
ಪಿಳ್ಳೆಗಳ ಅಪ್ಪಿ ಹೊತ್ತುಕೊಂಡವು 
ಕರೆಂಟು ತಂತಿ ಮೇಲಿಂದ 
ಮನೆ ಮಾಳಿಗೆ ಮೇಲೆ ಹಾರಿ 
ತೆಂಗಿನ ಮರದಲ್ಲಿ ತಂಗಿ 
ಜೋಳದ ಹೊಲಗಳಿಗೆ ತೂರಿ 
 
ಊರಾಚೆ ಕೆರೆಯಲಿ ಈಜಿ 
ದಂಡೆ ಮೇಲೆ ಮೈ ಒದರಿ 
ವಾನರ ಸೇನೆಯ ದಾಳಿ 
ಈ ಕೇರಿ, ಆ ಬೀದಿಗಳಲಿ 
ಪಟಾಕಿ ಸಿಡುಕಿಗಿನ್ನೆಷ್ಟು ದಿನ 
ಬೆಚ್ಚಿ ಬೀಳಿಸುವ ಸಂಚು?
ಅವುಗಳಿಗೂ ಅನುಭವವುಂಟು 
ಬಲಾಬಲ ಈಗ ಮ್ಯಾಚು 
 
ದಿನಸಿ ಅಂಗಡಿ ಡಬ್ಬಿಯೊಳಗೆ 
ಒಣ ದ್ರಾಕ್ಷಿ ಮಂಗ ಮಾಯ
ಪುಟ್ಟ ಕಂದನು ಕೈಲಿ ಹಿಡಿದ 
ಲಾಲಿಪಪ್ಪಿಗೆ ಪರಚು ಗಾಯ  
ಮನೆ ಆಚೆ ಒಣಗಿಸಿಟ್ಟ 
ಸಂಡಿಗೆ ಸೀರೆ ಸಹಿತ ಲೂಟಿ 
ಕಲ್ಲು ಹೊಡೆದರೆ ಬೆನ್ನು ಹತ್ತುವ 
ಒಂದೊಂದೂ ಭಾರಿ ಘಾಟಿ 
 
ತಾಳಲಾರದೆ ಇವುಗಳ ಕಾಟ 
ಊರು ಬಿಟ್ಟವರೆಷ್ಟು ಮಂದಿ 
ಉಳಿದವರು ಮನೆಗಳಿಗೆ ಗ್ರಿಲ್ಲು 
ಹಾಕಿಕೊಂಡು ತಾವೇ ಬಂದಿ 
ಅಧಿಕಾರಿಗಳು ಬಂದು ಹೋದರು 
ತಾವೂ ವೀಕ್ಷಿಸಿ ಮಂಗನಾಟ 
ಭಯದ ಬದುಕಿಗೆ ಮುಕ್ತಿಯಿಲ್ಲದೆ 
ಕಾಣು ಜನರ ದೊಂಬರಾಟ 
 
ಕಾಡ ಕಡಿದರು ನಾಡ ಬೆಳೆಸಿ 
ಹಸಿರ ಮೇಲೆ ಕಾಂಕ್ರೀಟ್ ಸುರಿದು 
ಎತ್ತರದ ಕಟ್ಟಡಗಳೆದ್ದವು  
ಅಭಿವೃದ್ಧಿಯ ಹೆಸರ ಪಡೆದು 
ಬಂಡ ಮೃಗಗಳು ಕೆರಳಿದವು 
ಬಂಡಾಯ ಗುಣವ ಮೈಗೂಡಿಸಿ 
ಮುತ್ತಿಗೆ ಹಾಕಿದವು ಮೆಲ್ಲಗೆ 
ತಮ್ಮ ಮನೆ-ಮನಗಳನು ಅರಸಿ 
 
ಬುದ್ಧಿ ಜೀವಿಯ ಪೆದ್ದತನದಲಿ 
ಭೂ ಮಾತೆಯ ಅತಿಕ್ರಮಣ 
ನೆನ್ನೆಗುಳಿದವು ಇಂದಿಗಿಲ್ಲ 
ಇಂದಿಗಿದ್ದವು ನಾಳೆ ಮರಣ 
"ಮುಖ್ಯಾಂಶಗಳು - 
ನರರು ನಾಡಿನಿಂದ ಕಾಡಿನೆಡೆಗೆ"
ಕಾಡು ಪ್ರಾಣಿಗಳ ಸುದ್ದಿ ವಾಹಿನಿ
ದಿನವೂ ಸಾರುವುದು ಇದೇ ಸುದ್ದಿಯನ್ನ .... 

                                 -- ರತ್ನಸುತ 

Tuesday, 3 December 2013

ಹೀಗೊಂದು ದೊಡ್ಡ ಸಮಸ್ಯೆ !!

ಒಂದೇ ಒಂದು ಬಿಳಿಗೂದಲಿಗೆ 
ನಿದ್ದೆಗೆಡಿಸುವ ಶಕ್ತಿ 
ಅಬ್ಬಬ್ಬಾ ಇದೆಂಥ ಸೋಜಿಗ!!

ಒಂದು ಎರಡಾಗಿ, ಎರಡು ಹತ್ತಾಗಿ 
ಹತ್ತು ಸಾವಿರಾರುಗೊಂಡಾಗ 
ನಿದ್ದೆಯೇಲ್ಲಿ, ಪ್ರಾಣವೇ ಹೋದಂತೇ 

ಯೌವ್ವನಾವಸ್ಥೆಯಲ್ಲಿ ಇದ್ದವು ಸಾಲದೆ 
ಇದೊಂದು ವಕ್ರ ದೆಸೆ 
ಚಿಂತೆ ಮೂಟೆಯೊಳಗೆ ಮತ್ತೊಂದು ಕಂತೆ 

ಬಂದ ಸಂಭಂದಗಳೆಲ್ಲ ಹಾಗೇ ಹಿಂದಿರುಗಲು 
"ಹುಡುಗನಿಗೆ ವಯಸ್ಸು ಹೆಚ್ಚಾಗಿದೆ"ಯೆಂದು 
ಮೂವತ್ತರೊಳಗಿನ ಮೈಗೆ ಎಪ್ಪತ್ತರ ಭಾಸ 

ಪುರೋಹಿತ ಕೇಳುತ್ತಾನೆ ಅರ್ಚನೆ ಮಾಡುವಾಗ 
"ಮಕ್ಕಳ ಹೆಸರು ಸ್ವಾಮಿ?"
ಅಯ್ಯೋ, ನಾನಿನ್ನೂ ಬ್ರಹ್ಮಚಾರಿ ಸ್ವಾಮಿ!!

ನನಗಿಂತಲೂ ಐದೋ, ಹತ್ತೋ ವರ್ಷ ಸಣ್ಣವರು 
ಅಂಕಲ್ ಅಂದರೆ ಅಡ್ಡಿಯಿಲ್ಲ
"ತಾತ" ಅಂದುಬಿಟ್ಟರೆ? ಅಲ್ಲಿಗೆ ನಾ ಗೋತ!!

ಬಿಳಿಗೂದಲ ಕಪ್ಪು ಮಾಡಿದರೆ?
ಉದುರುವುದೇನೋ? ಬೋಳಾಗುವೆನೇನೋ?
ಯಾರೂ ಕೊಡುತ್ತಿಲ್ಲ ಸಮಾದಾನಕರ ಸೂಚನೆ, ಅದೇ ಯೋಚನೆ!!

ಒಂದು ದಿನ ಇಡೀ ತಲೆ ಹಿಮಗಟ್ಟಿದ ಶಿಖರವಾಗಿ 
ಅಲ್ಲಲ್ಲಿ ಕರಿ ಬಂಡೆಯ ರೇಖೆಯ ಇಣುಕು 
ಅಯ್ಯೋ ಇನ್ನೇಕೆ ಬದುಕಿರಬೇಕು!!

ಕಣ್ಣು ಬಿಟ್ಟರೆ ಗೊತ್ತಾಯಿತು, ಅದು ಕನಸು 
ನಿಲುವುಗನ್ನಡಿಯಲ್ಲಿ ನಡುಗುತ್ತಲೇ ಬಿಂಬಿಸಿಕೊಂಡೆ 
ಆ ಒಂದು ಬಿಳಿಗೂದಲು ಗಹಗಹಿಸಿ ನಗುತ್ತಿತ್ತು..... 

                                                   -- ರತ್ನಸುತ 

ಜೂಲಿ, ಮತ್ತವಳ ಜೋಡಿ !!

ನಿನಗೆಲ್ಲೋ ಲಜ್ಜೆ?
ತೂಕಡಿಕೆ ತಿಮ್ಮ!
ಮಂಪರಲೇ ಮೈ ಮರೆತು 
ದಿನಗಳೆದೆಯಲ್ಲ!
ಈಗ ಕಣ್ಣುಜ್ಜಿ ಏನು ಬಂತು?
ನಿನ್ನ ನಂಬಿ ಹೋದೆ ಸೋತು.  
ಕೊಂದು ಬಿಟ್ಟೆ ವಿಶ್ವಾಸವ 
ಪರಮ ದ್ರೋಹಿ !!
 
ಎಲ್ಲೋ ಬೀದಿಯಲಿ ಸಿಕ್ಕೆ 
ಅನಾಥನಾಗಿ 
ಯಾರೂ ಮೂಸಿ ನೋಡಿದವರಲ್ಲ 
ನಿನ್ನ 
ಒಲ್ಲದ ಮನಸಿಂದ ಎತ್ತಿ 
ವಿರೋಧಗಳ ನಡುವೆ 
ಮನೆಗೆ ತಂದುಕೊಂಡೆ 
ಇನ್ನು ನೀನು, ಛೇ!!
 
ಕುದಿಸಿದ ಘಟ್ಟಿ ಹಾಲೇ 
ಎರೆದದ್ದು ನಿನಗೆ 
ತಿಂಡಿ ಡಬ್ಬಿಯ ಬಿಸ್ಕತ್ತು, ಬ್ರೆಡ್ಡು
ಮೂಳೆ, ಮಾಂಸ ವಾರಕ್ಕೊಮ್ಮೆ 
ನಿನಗಾಗಿ ಕಟ್ಟಿದೆ 
ಒಂದು ಪುಟ್ಟ ಗೂಡು 
ಕಟ್ಟುವ ಬರದಲ್ಲಿ 
ಹೊಸ ಜೀನ್ಸು ಹರಿದುಕೊಂಡೆ 
 
ನನ್ನ ಅವಸರವನ್ನೂ ಲೆಕ್ಕಿಸದೆ 
ನಿನ್ನ ಅವಸರಕ್ಕೆ ಧಾವಿಸಿದೆ 
ಬೀದಿ-ಬೀದಿ ಸುತ್ತಿ 
ನಿನ್ನ ಹಿಂದೆ ಅಲೆದೆ 
ನಿಂತಲ್ಲಿ ನಿಂತೆ 
ಹೋದಲ್ಲಿ ಎಚ್ಚರ ವಹಿಸಿದೆ
ಯಾರೂ ನೋಡದಂತೆ 
ನಿನ್ನ ಮಾನ ಕಾದೆ 
 
ಆ ಮೂರನೇ ಬೀದಿಯಲ್ಲೇ 
ನಾಲ್ಕಾರು ಬಾರಿ ಸುತ್ತಿಸಿ 
ನಿನ್ನ ಕಣ್ತಂಪು ಮಾಡಿಕೊಂಡೆ 
ಜೂಲಿಯ ಕೆಕ್ಕರಿಸಿ 
ತಡೆದೆನೇ? ಪ್ರಶ್ನಿಸಿದೆನೇ?
ನಿನ್ನ ಪಾಡಿಗೆ ಬಿಟ್ಟೆನಲ್ಲ?
ಬೆಂದ ಬೇಳೆಯ 
ಮತ್ತಷ್ಟು ಬೇಯಿಸಿಕೊಳ್ಳಲಿಕ್ಕೆ 

ಇನ್ನು ನನ್ನದೊಂದು ಕೋರಿಕೆ 
ಅಸಾಧ್ಯವೇನಾಗಿರಲಿಲ್ಲ, 
ಸಂದೇಶದೊಟ್ಟಿಗೆ ಹೂ-
-ಬುಟ್ಟಿಯ ನನ್ನವಳಿಗೆ ತಲುಪಿಸ ಬೇಕಿತ್ತು 
ಆದರೆ ನೀನು, 
ನಡುದಾರಿಯಲ್ಲಿ ಜೂಲಿ ಕಂಡಳೆಂದು 
ಎಲ್ಲ ಮರೆತೆಯಲ್ಲ?
ಈಗ ಕೆಲಸ ಕೆಟ್ಟಿತಲ್ಲ!!

ಜೂಲಿಯ ಒಡತಿ ನನ್ನವಳು 
ನಿನ್ನಂತೆ ನಾನೂ ಅಂದುಕೊಳ್ಳುವಳು 
ಮುಖ ತೋರಿಸಲಿ ಹೇಗೆ?
ಮಾತನಾಡಿಸಲಿ ಹೇಗೆ?
ಎಲ್ಲವೂ ಎಡವಟ್ಟಾಯಿತು
ನಿನ್ನಿಂದ 
ಮೆಚ್ಚುಗೆ ಗಳಿಸಬೇಕು ಈಗ 
ಮೊದಲಿಂದ ...... :((

                         -- ರತ್ನಸುತ 

Monday, 2 December 2013

ಯಥಾಪ್ರಕಾರ !!

ಮರುಭೂಮಿಯ ಮರಳಿಗೆ ನೆಲೆಯೆಲ್ಲಿ?
ಬೀಸುವ ಗಾಳಿಯ ದಿಕ್ಕಿಗೆ ಮೈಯ್ಯೊಡ್ಡಿ 
ಇದ್ದಷ್ಟೂ ಸಾಲದೇ, ಇನ್ನೂ ಮರುಳಾಗಿ 
ಉರುಳುರುಳಿ ತಲುಪುವ ತೀರ, ಯಥಾಪ್ರಕಾರ
 
ಬಯಲೊಳು ಹಿಡಿದ ದೀಪದ ಬೆಳಕು, ಬಳುಕು 
ನನ್ನ ಪದಗಳ ಹುಟ್ಟು, ಸಾವಿನ ಗುಟ್ಟು 
ಹೊತ್ತಿಕೊಳ್ಳುವುದೇ ಅಪರೂಪ, ಇನ್ನು ಹೊಂದಿಸಿ,
ಕಾಯಿಸಿ ಬಿಟ್ಟರೆ; ಬತ್ತಿ ಊದುವುದು ಬಂಗಿ 
 
ತರಂಗದೊಳಗೆ ಇಣುಕಿದಾಗ ಗೋಚರಿಸುವ-
-ನಾನು, ಅದೇ ನನ್ನ ಭಾವ 
ಎಲ್ಲವೂ ಸ್ಪಷ್ಟವಾಗದೊಡಗಿದರೆ ನಾನು ನಾನೇ 
ಆಗ, ಉಳಿದದ್ದೂ ಮರೆಯಾಗುವುದದರ ಸ್ವಭಾವ 
 
ಕಟ್ಟಿ ಹಾಕಿ, ಪೆಟ್ಟು ಕೊಟ್ಟು, ಬಂಡಾಯವಗಿ 
ನೆತ್ತರಿನಲ್ಲಿ ಬರೆದೆ, ಚೂರೂ ಕನಿಕರವಿಲ್ಲದೆ 
ಮುಗಿದ ಶಾಯಿಗೆ ಕಣ್ಣೀರೇ ಆಸರೆ 
ಹಾಳೆಗೂ ಅರ್ಥವಾಗದ ಸಾಲು, ನನಗೂ ಸಹಿತ 
 
ಪ್ರೇಮಕೆ, ಮೋಹಕೆ, ದುಃಖಕೆ ಒಂದೆರಡು ಸಾಲು 
ಹಿಂದೆ ಕುರಿ ಮಂದೆ ಸಾಲು 
ಎಲ್ಲವೂ ಬಡಕಲು ಭಿಕ್ಷುಕ ಪಶುಗಳು 
"ಭವತಿ ಭಿಕ್ಷಾಂದೇಹಿ", ಓದುಗರೆದುರು  

ಅನುಕರಿಸಿ, ಅನುಸರಿಸಿ ಅನವರತ  
ಅನುಭವಿಸುವುದನ್ನೇ ಮರೆತಿರುವೆ, ಗಮನಿಸಿಲ್ಲೀ-
-ತನಕ, ಹಿಂದಿನ ಸಾಲು ಮುಗಿವನಕ 
ಇನ್ನೂ ಗಮನಿಸದೆ ಹೋದ ಅಜ್ಞಾತ ನಾನು
 
ಮುದಿ ಎಲೆಗಳ ಮತ್ತೆ-ಮತ್ತೆ ಜೋಡಿಸಿ 
ಮೆತ್ತಿಕೊಂಡೆ ಬೋಳು ಮರದ ರೆಂಬೆಗೆ 
ಉದುರುವುದನ್ನೂ ಸಂಭ್ರಮಿಸಿ, 
ಮತ್ತೆ ಮೆತ್ತುವುದನ್ನೂ.
ಇದರ ನಡುವೆ ಒಂದು ಕವನ. ಯಥಾಪ್ರಕಾರ

                                           --ರತ್ನಸುತ  

ಮನೆಗೊಂದು ಬಾಗಿಲು, ಅಜ್ಜಿಯೂ ಇರಬೇಕು !!

ಯಾವ ಪ್ರಶ್ನೆಗೂ ಸಿಗದ ಉತ್ತರ 
ಸಿಕ್ಕರೂ ಅದು ಅಸಮಂಜಸ 
ವಿನಾಕಾರಣ ನಗು, ಕಣ್ಣೀರು 
ತನ್ನಿಷ್ಟದ ಮಾತು, ರಾಗ, ತಾಳ 

ತಲೆ ತುಂಬ ಬೆಳ್ಳಿ ಕುರುಳು 
ಎಲ್ಲೋ ಒಂದೆರಡು ಉಳಿದ ಹಲ್ಲು 
ಸುಣ್ಣಗಾಯಿ ತೀಡಿ-ತೀಡಿ ಬಿಳಿ ತೋರ್ಬೆರಳು 
ದಿನವಿಡೀ ಕುಟ್ಟಾಣಿ ಕುಟ್ಟುವಳು 

ಸೊಂಟಕ್ಕೆ ಸಿಕ್ಕಿಸಿದ ತಾಂಬೂಲ ಚೀಲ 
ಎಲೆ, ಅಡಿಕೆ, ಕಡ್ಡಿಪುಡಿ, ಹೊಗೆ ಸೊಪ್ಪು 
ಚಲಾವಣೆಯಲ್ಲಿಲ್ಲದ ಒಂದು ಪೈಸೆಯಿಂದ್ಹಿಡಿದು 
ನಾಲ್ಕಾಣಿಯ ಹಿಡಿ ಚಿಲ್ಲರೆ 

ತಾತ ಕೊಡಿಸಿದ ಜೋಡಿ ಮೂಗುತ್ತಿ 
ಬಿಳಿ ಕಲ್ಲ ಓಲೆ, ಚಿನ್ನದ ಸರ 
ಕಿತ್ತುಕೊಂಡ ಕುಂಕುಮ, ಹೂವು 
ಮಿಂಚು, ಸಿಂಗಾರ 

ಆದ ವಯಸ್ಸಿಗೆ ಪ್ರತಿಬಾಗಿದ ಬೆನ್ನು 
ಅರುಳು-ಮರುಳು ನೂರರ ಅಂಚು 
ಮಿತಿ ಓಡಾಟ, ಆಹಾರ, ಕಾಫಿ-ಟೀ 
ಸೆಂಚುರಿ ಹೊಡೆವಳು ಗ್ಯಾರಂಟೀ 

ಸಾಯುವಳೆಂದು ಅಪ್ಪನ ಮದುವೆ 
ಮಾಡಿಸಿ ಸತ್ತನು ಆಗಲೇ ತಾತ 
ಸಾವಿನ ಕದವ ತಟ್ಟಿ ಬಂದು 
ತಾತನ ಪಟಕೆ ಮುಗಿದಿಹಳೀಕೆ 

ಮಗುವೊಂದಿರುವ ಹಾಗೆ ಮನೆಯೊಳಗೆ 
ಅವಲಂಬಿತ ಪ್ರತಿಯೊಂದಕ್ಕೂ 
ದೂರ ನೆಂಟರ ಗುರುತು ಹಿಡಿಯಲು 
ನಂಟು ಬೆಸೆಯಲು ಇವಳಿರಬೇಕು 

ನಮ್ಮ ನಾಳೆಯ ದರ್ಶನ ಇಂದೇ 
ಮಾಡಿಸುತಿರುವಳು ಉಚಿತದಲಿ 
ಕೊನೆ ಘಟ್ಟವ ತಲುಪಿಹಳು
ಬದುಕಿನ ಸಿಹಿ-ಕಹಿಗಳ ರುಚಿಸುತಲಿ .... 

                                    --ರತ್ನಸುತ 

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...