Wednesday, 6 January 2016

ಕಪ್ಪೊಪ್ಪಿಗೆ

ನಿಜದ ನೆರಳು ಕಪ್ಪು
ಅಷ್ಟಾದ ಮಾತ್ರಕ್ಕೆ ಜರಿಯಬೇಡ
ಕಪ್ಪು ಪರಾವಲಂಬಿಯಲ್ಲ
ಬೆಳಕಿನ ಮೋಸದ ತುಣುಕು


ಕೋಗಿಲೆ ಕಪ್ಪಿಗೆ ಒಪ್ಪಿಗೆ
ಕಾಗೆಯದೇಕೋ ಕಡೆಗಣನೆ
ಕಪ್ಪು ಇದ್ದಿಲ ಅಟ್ಟಕ್ಕೇರಿಸಿ
ಕೆಂಡವ ಕೆನ್ನೆಗೆ ಹೋಲಿಸುವೆ


ಕಣ್ಣ ತೀಡುವ ಕಪ್ಪು ತಂಪು
ಕಪ್ಪಾದರೂ ನಾದಸ್ವರ ಇಂಪು
ಬಿಳಿ ಕರ್ಪೂರದ ಕೊನೆಯ ರೂಪ
ಮುಪ್ಪೇ ಇಲ್ಲದ ಕಪ್ಪು


ತಪ್ಪನು ಎತ್ತಿ ತೋರುವ ಕಪ್ಪು
ದೃಷ್ಟಿಗೆ ಕಪ್ಪು, ದೋಷಕೂ ಕಪ್ಪು
ಹುಟ್ಟುವ ಮುನ್ನ ರೆಪ್ಪೆಯ ಕಾವಿಗೆ
ಹತ್ತಿರವಾದ ಕೌತುಕ ಕಪ್ಪು


ಕೊಳೆಯಲು ಕಪ್ಪು, ತುಳಿಯಲು ಕಪ್ಪು
ಇಳಿಯಲು ಆಳಕೆ ಬೆಳೆವುದು ಕಪ್ಪು
ಹಣತೆಯ ಛಾಪು ತಿಳಿಯಲು ಅಲ್ಲಿ
ಮೂಡಲೇ ಬೇಕು ಸುಂದರ ಕಪ್ಪು


ನೆರಳಿನ ಆಟಕೆ ಬೆಂಬಲ ಕಪ್ಪು
ಬೆಳಕಿನ ಪಾಠಕೆ ಮುನ್ನುಡಿ ಕಪ್ಪು
ಎಲ್ಲ ತನ್ನೊಳ ಸೆಳೆದು ಕಡೆಗೆ
ಹೊರ ಚೆಲ್ಲುವು ಔದಾರ್ಯತೆ ಕಪ್ಪು


                                    - ರತ್ನಸುತ

Tuesday, 5 January 2016

ಫೋನ್ ಇನ್ ಲವ್


ಲಾಕ್ ಸ್ಕ್ರೀನಲ್ಲಿ ನಿನ್ನ
ಫೋಟೋಗ್ರಾಫು ಕಂಡು
ಅನ್ಲಾಕ್ ಮಾಡೋದಕ್ಕೆ ಕೈಯ್ಯೇ ಬಾರದು
ಇನ್ಕಮ್ಮಿಂಗ್ ಕಾಲು
ನಿನ್ನದಾಗದ ಹೊರತು
ರಿಸ್ಸೀವ್ ಮಾಡೋದಕ್ಕೆ ಮನಸೇ ಬಾರದು



ಕಾನ್ಟಾಕ್ಟ್ ಲಿಸ್ಟಲ್ಲಿ
ಫೇವ್ರೇಟ್ ಆದ ನೀನೇ
ಬೇಡವೆಂದರೂ ಸಿಗುವೆ ಫರ್ಸ್ಟ್ ರೋ ಅಲಿ
ಕನ್ಫೆಶ್ಷನ್ ಏನೇ ಇದ್ರೂ
ಪರ್ಮಿಶ್ಷನ್ ಕೇಳದೆ ನಾ
ಸೆಂಡ್ ಮಾಡುವೆ ಖಾಲಿ ಎಸ್ಸೆಂಮ್ಮೆಸ್ಸಲಿ



ಹೆಲ್ಲೋ ಅಂತ ನೀನು
ಅನ್ನೋದಕ್ಕೂ ಮುನ್ನ
ಕಾಲರ್ ಟ್ಯೂನು ತುಂಬ ಚಂದ ಅನಿಸಿತು
ಮೊನ್ನೆ ಗ್ಯಾಪಿನಲ್ಲಿ
ಸಣ್ಣ ಸ್ಮೈಲು ಕೊಟ್ಟೆ
ಅಂದಿನಿಂದ ಅದುವೇ ರಿಂಗ್ ಟೋನಾಯಿತು



ಪ್ಲೇ ಸ್ಟೋರಿನಲ್ಲಿ ಸಿಗದ
ಫ್ರೀ ಗೇಮಂತೆ ನಾನು
ಬೇಕು ಅಂದರೆ ಡೌನ್ಲೋಡ್ ಮಾಡಿಕೋ
ಪ್ರೈವೇಟಾಗಿ ಒಂದು
ಲವ್ ಪೋಸ್ಟ್ ಹಾಕುತೀನಿ
ಇಷ್ಟ ಬಂದ ಸಾರಿ ಅದ ನೀ ಓದಿಕೋ



ಫುಲ್ ಚಾರ್ಜ್ ಫೋನು ನಂದು
ಡ್ರೈನ್ ಔಟ್ ಆಗೋ ತನ್ಕ
ನಾನ್ ಸ್ಟಾಪ್ ಮಾತನಾಡು ವಾಯ್ಸ್ ಕಾಲಲಿ
ಲಾಸ್ಟ್ ಬಟ್ ನಾಟ್ ಲೀಸ್ಟ್
ಸ್ಟೇಟಸ್ ನಿನ್ನ ಹೆಸರೇ
ಬದಲಾಗದೆ ಉಳಿವುದು ವಾಟ್ಸಾಪಲಿ!!



                                       - ರತ್ನಸುತ

Wednesday, 30 December 2015

ನನ್ನರಸಿಗೆ

ಮುತ್ತಿಡುವ ಆಟದಲಿ ಮುರಿಯೋಣವೇ
ಎಲ್ಲ ನಿರ್ಮಿತ ದಾಖಲೆಗಳ?
ಹೀಗೆ ಚೂರು ಚೆಲ್ಲಾಟದ ನಂತರ
ನಡೆಸೋಣವೇ ನಾವು ಸಣ್ಣ ಜಗಳ?


ಹೊಗಳಿದ ಗಳಿಗೆ ಮುಗುಳಿನ ಗುಳಿಗೆ
ಬಂದು ತಲುಪಿದೆ ನೋಡು ಎಂಥ ಸ್ಥಿತಿ
ಒಂಟಿ ಅನಿಸುವ ವೇಳೆ ಅಂಟಿ ಕೂತಂತೆ
ನೆರಳಲ್ಲಿ ಕೂಡ ನಿನ್ನಾಕೃತಿ


ಕನಸುಗಳ ಗುತ್ತಿಗೆ ಪಡೆದಾಗಿನಿಂದ ತಾ
ಕಣ್ಣು ನಿನ್ನ ಹೊರತು ಬೇಡವೇನನ್ನೂ
ನಿನ್ನಷ್ಟೇ ಸೊಗಸಾಗಿದೆ ನನ್ನ ದಿನಚರಿ
ಬಣ್ಣಿಸುತಲಿ ಇರಲು ಬಿಡದೆ ನಿನ್ನನ್ನು


ಸ್ವಗತಗಳು ಸ್ವಾಗತಿಸಿವೆ ನಿನ್ನ ಹೆಬ್ಬೆರಳು
ಗೀರಿದ ಮೊದಲಾಕ್ಷರಕೆ ಬಡ್ತಿ ಬೇಡಿ
ಪ್ರಣಯವೇ ಪರಿಪಾಠವಾಗಿರಲು ಬದುಕಲ್ಲಿ
ಹೆಜ್ಜೆಜ್ಜೆಗೂ ಏನೋ ನಡೆದಂತೆ ಮೋಡಿ


ಗೀತೆಗೂ ಮುನ್ನ ಹೊಮ್ಮುವ ಆಲಾಪ-
-ದಂತೆ ನಿನ್ನ ಸಣ್ಣ ಕೋಪ
ವಿರಹಗಳು ಈಚೆಗೆ ಕಾಡದಾಗಿವೆ ವಿಧಿಸಿ-
-ಕೊಂಡು ಸ್ವತಃ ತಮಗೇ ಶಾಪ


ಹೊಂಗೆಯ ನೆರಳನ್ನು ಹೊಂದಿಸಿ ನಿನ್ನನ್ನು
ನನಗಾಗಿ ತಂದನಾ ಬ್ರಹ್ಮ
ಎಲ್ಲವ ಅರಿತಂತೆ ಪೂರೈಸುವ ನೀನೇ
ಪ್ರೇಮ, ಕಾಮವನುಣಿಸಿದಮ್ಮ!!


                                          - ರತ್ನಸುತ

ಈ ಚಳಿಗಾಲದ ರಾತ್ರಿಗಳು....

ಈ ಚಳಿಗಾಲದ ರಾತ್ರಿಗಳು
ಅದೆಷ್ಟು ಮೈ ಸುಡುತ್ತವೆಂದರೆ
ಒಳಗೊಳಗೇ ಕರಗಿಸುತ್ತ
ಸುತ್ತ, ಮುತ್ತ ಮಿರುಗಿಸುತ್ತ
ಒಂಟಿತನವ ಮರುಗಿಸುತ್ತ
ಆಸೆಗಳ ಒರಗಿಸುತ್ತ
ಎತ್ತ ಸಾಗಲಿಕ್ಕೂ ಬಿಡದೆ
ಇತ್ತ ಸಾಯಲಿಕ್ಕೂ ಕೊಡದೆ
ನಿದ್ದೆಗೊಡದೆ ಕಣ್ಣುಗಳ
ಜ್ವಲಿಸಿ, ಜ್ವಲಿಸಿ ಕಾಡುತವೆ



ಈ ಚಳಿಗಾಲದ ರಾತ್ರಿಗಳು
ಅದೆಷ್ಟು ಸ್ತಬ್ಧವೆಂದರೆ
ನಿಚ್ಚಲಗೊಳಿಸುತ್ತ ಇರುಳ
ಹೆಚ್ಚಳಗೊಳಿಸುತ್ತ ವಿರಹ
ಕುಹುಕವಾಡುತ್ತ ತನ್ನ
ಬೆಂದ ಬೇಳೆ ಬೇಯಿಸುತ
ಅತ್ತ ಮಂಜ ಪರದೆ ಮಾಡಿ
ಇತ್ತ ಕೊಂಚ ಪಳಗದಂಥ
ಗರಡಿಯಲ್ಲಿ ಇರಿಸುವವು 

ಸುಳುವೂ ನೀಡದಂತೆ 



ಈ ಚಳಿಗಾಲದ ರಾತ್ರಿಗಳು
ಅದೆಷ್ಟು ಭಾವುಕವೆಂದರೆ
ಚಂದಿರನೊಡನಾಟದಲ್ಲಿ
ಮಿಂದೇಳುವ ಮನಸ ಕೊಟ್ಟು
ಹತ್ತಿರ ಇರುವವುಗಳಿಗೆ
ಎತ್ತರದ ಸ್ಥಾಯಿ ದೊರೆತು
ಮತ್ತೇರಿಸಿ, ಮದವೇರಿಸಿ
ಹದವಾಗಿಸಿ ಹೃದಯವನ್ನು
ಹರಿಬಿಡುವುದು ನಿಮಿಷದಲ್ಲಿ
ಕರಗಿಸಿ ನೀರಾಗಿಸಿ



ಈ ಚಳಿಗಾಲದ ರಾತ್ರಿಗಳು
ಅದೆಷ್ಟು ಅಗಣ್ಯವೆಂದರೆ
ಜಪಮಾಲೆಯ ಬೀಜಾಕ್ಷರ
ಕೂಡಿ ಕೂಡಿ ನೀಳವಾದ
ಕವಿತೆಯೊಂದ ಕಟ್ಟಿಕೊಂಡ
ಧ್ಯಾನಿಯೊಬ್ಬನಾಗಿಸುತ್ತ
ಬೇನೆಗೆ ಬೇರೆಯದ್ದೇ
ಉಪಮೆಗಳ ಉಪಹಾರವಿತ್ತು
ಬಿಮ್ಮನೆ ಬದುಕಿದ ಬುದ್ಧಿಯ
ಕ್ಷಣಾರ್ಧದಲ್ಲಿ ಚುರುಕುಗೊಳಿಸಿ
ಲೆಕ್ಕ ತಪ್ಪಿ ಬಿಡುವುದು



ಈ ಚಳಿಗಾಲದ ರಾತ್ರಿಗಳು
ಅದೆಷ್ಟು ರಮ್ಯವೆಂದರೆ
ಇಲ್ಲದ ಜಗವೊಂದ ತಾನು
ಇಹುದೆಂದು ನಂಬಿಸಿ
ಒಳ ತಳಮಳಗಳ ಅಳೆದು
ನೇರ ನೇರ ಬಿಂಬಿಸಿ
ಖಾಲಿತನದ ಮನದ ತಣಿಗೆಗೆ
ಸವಿಯೆ ಮಧುವ ಉಣಬಡಿಸಿ
ಎಲ್ಲ ಬಿಡಿಸಿ ಒಗ್ಗೂಡಿಸಿ
ಒಲೈಸಿ ತಿಳಿಸುವುದು
ಎಲ್ಲ ಪೂರೈಸುವುದು




ಈ ಚಳಿಗಾಲದ ರಾತ್ರಿಗಳು
ಅದೆಷ್ಟು ಗೌಪ್ಯವೆಂದರೆ
ಓದಿಕೊಳ್ಳುವಂತದಲ್ಲ
ಕೊಂಡು ಓದುವಂತದಲ್ಲ
ಹಂತ ಹಂತವಾಗಿ ತೆರೆದು
ಮತ್ತೆ ಎಲ್ಲೋ ಮರೆಯಾರಿ
ಸಾಗರದ ಅಬ್ಬರದಲಿ
ಸಣ್ಣದೊಂದು ತೊರೆಯಾಗಿ
ಸೆರೆಯಾಗಿ, ಬಿಡುಗಡೆ
ಇದ್ದೂ ಇಲ್ಲದಂತಾಗಿ
ಇದ್ದಷ್ಟೇ ಸೊಗಸಾಗಿ
ಎದುರು ನೋಟಕೂ ಮೊದಲೇ
ಸಿರಿಯಾಗಿ ದಕ್ಕುವುದು!!



                         - ರತ್ನಸುತ 

ಬಾ ಕೋಗಿಲೆ

ಎಲ್ಲಿ ಕಾಯುತ ಕುಳಿತೆ ಕೋಗಿಲೆ?
ಗೌಣವಾಗಿದೆ ಮನ
ಬಂದು ಒಮ್ಮೆ ನೀಡಬಾರದೇ
ಹಾಡಲೊಂದು ಕಾರಣ?


ಗೂಡು ಸ್ವತಃ ನಾನೇ ಕಟ್ಟಿದೆ
ಮೆತ್ತಗಿರಿಸಿದೆ ನಡುವಲಿ
ನಿನ್ನ ಹಂಬಲಕೊಂದು ಚಿಗುರನು
ಬೇಡಿ ಪಡೆದೆ ಮಾವಲಿ


ಬುಡಕೆ ಇಟ್ಟ ಕೊಡಲಿ ಹಿಡಿಯು
ಧೂಪವಾಗಿಹೋಗಿದೆ
ಕುಲುಮೆಯಲ್ಲಿ ಕಾದ ಕಬ್ಬಿಣ
ಊದುಗೊಳವೆಯಾಗಿದೆ


ಹಿತ್ತಲಿನ್ನೂ ಮಸಣವಲ್ಲ
ತುಂಬು ಹೂವ ಸಡಗರ
ಮತ್ತೆ ನಿನ್ನ ಕೂಗಿ ಬಿಕ್ಕಿದೆ
ಸತ್ತು ಹುಟ್ಟಿದ ಮಾಮರ


ಕಬ್ಬಗಳಿಗೆ ಹಬ್ಬವಿಲ್ಲ
ಕಬ್ಬಿಗನ ಕೈ ಹೀನವಾಗಿ
ಉಬ್ಬರಿಸಿತು ಅನಾಥ ಕೊರಳು
ನಿನ್ನ ನೆನೆದು ಘೊರವಾಗಿ


ಬಂದು ನಿಲ್ಲು ಆರಿಸುತ್ತ
ಹರಸಿ ಹೋಗು ನಿನ್ನವನ್ನ
ನಿನ್ನ ದನಿಯ ಇನಿಯನೊಡನೆ
ನಕ್ಕು ನಲಿಯಲಿ ಉಳಿದ ಪ್ರಾಣ


ನೀಡಿ ಹೋಗು ಹೊರಡೋ ಮುನ್ನ
ಕಾಯುವಿಕೆಗೆ ಚೂರು ಗರಿಮೆ
ಮುಂದಿನ ಸಲ ಬರುವ ನಿನ್ನೆಡೆ
ದ್ವಿಗುಣಗೊಳ್ಳಲಿ ಇಹದ ಒಲುಮೆ!!


                                - ರತ್ನಸುತ

Tuesday, 29 December 2015

ಒಲವಿನಲಿ


ಎಲ್ಲಿ ಇರಿಸುವೆ ಹೃದಯವನ್ನು
ನನ್ನ ಅರಿವಿಗೆ ಬಾರದಂತೆ?
ಎಲ್ಲ ಹಾಡಿ ಮುಗಿಸುತೀಯ
ನನಗೆ ಏನೂ ಕೇಳದಂತೆ


ನಿದ್ದೆ ಹೊದ್ದ ಹೂವು ನೀನು
ಕನಸಿನೊಳಗೆ ಬೀಳುವಾಗ
ಮನಸಿಗಂತೂ ಸುಗ್ಗಿ ನೀನು
ಸಿಗ್ಗಿನಿಂದ ಅರಳಿದಾಗ


ನೀನು ನೆನಪಲ್ಲುಳಿದ ಮೇಲೆ
ಬಾಕಿ ಎಲ್ಲ ರದ್ದಿಯಂತೆ
ನಿನ್ನ ಒಲವು ದಕ್ಕಿತೆನಗೆ
ತೀರಲಾರದ ಸಾಲದಂತೆ


ಮೂಡಿ ಬರುವೆಯಾ ನನ್ನೊಳಗೆ
ಒಂದು ಮಧುರ ಹಾಡಿಗಾಗಿ
ಗೀಚಿ ಹರಿದ ಹಾಳೆಗಳಿಗೆ
ಸೋತು ಎರಗಿದ ಸಾಲಿನಂತೆ?


ಕಲಿಸು ಮೊದಲಿನಿಂದ ಪಾಠ
ಕೈಯ್ಯ ಹಿಡಿದು ತೀಡಿ
ತಲುಪುವ ದಿಗಂತವ
ಒಲವಿನಿಂದ ಕೂಡಿ!!


                        - ರತ್ನಸುತ

Tuesday, 22 December 2015

ಸಾವಿಲ್ಲದವು

ಸಾವಿರ ಸುಳ್ಳಿನ ನಡುವೆ
ನಿಜವಾದ ಬದುಕೊಂದು
ತನ್ನ ಸಾಚಾತನವನ್ನ ಸಾರುತ್ತ
ಸುಳ್ಳಿನ ಬಣ್ಣ ಹಚ್ಚುತ್ತಲೇ
ಸುಳ್ಳನ್ನು ಸುಳ್ಳಾಗಿಸುವ ಹಾದಿಯಲಿ
ಬಹಳ ಬೇಗ ಕೊನೆಗಾಣುತ್ತಿದೆ



ಬಿತ್ತಿದ ಬೀಜದ ಸತ್ಯದಲಿ
ಹೆಮ್ಮರವಾಗುವಷ್ಟು ತೂಕ
ಸುಳ್ಳು ತಾನಾಗಲೇ ಕಳಚಿಕೊಂಡ ತೇವ,
ಈಗ ಬೀಜಕ್ಕೆ ಹೆಮ್ಮರವಾಗುವ ಆಸ್ತೆಗಿಂತ
ತೇವಾಂಶ ಗಿಟ್ಟಿಸಿಕೊಳ್ಳುವ ತವಕ



ಮೋಡದ ನಿಧಾನ ಗತಿಯಲ್ಲಿ
ಹುನ್ನಾರವುದುಗಿಹುದೆಂದನಿಸಿ
ಮಣ್ಣು ಸತ್ತಂತೆ ನಟಿಸಿದರೆ
ಅನುಕಂಪಕ್ಕೆ ಜಲಪ್ರಳಯವಾಗಬಹುದು,
ಸುಳ್ಳಾಡುವಲ್ಲಿ ಎಚ್ಚರಿಕೆಯ ನಡೆಯಿಟ್ಟರೆ
ಸತ್ಯದ ಬಾಯಿ ಮುಚ್ಚುವುದು ಖಾಯಂ



ಕನಸಿನ ಹಸಿ ಸತ್ಯ ಇಷ್ಟಪಟ್ಟವರು
ಚಿರನಿದ್ದೆಯ ಮೊರೆ ಹೋಗಿ
ಗುರುತೇ ಇಲ್ಲದಂತಾಗಿರುವುದ
ಕಪಟಿಗಳು ಒತ್ತಿ ಒತ್ತಿ ಹೇಳುವಾಗ
ನಂಬಿಕೆಗಳು ಒಂದೊಂದಾಗಿ
ಸೋತು ಶರಣಾಗುತಿವೆ



ನೆರಳು ಸುಳ್ಳಾಗದಿರಲು
ಮೂಲ ಸುಳ್ಳಾಗದಿರಬೇಕೆಂದು
ಪ್ರತಿಪಾದಿಸುವ ಆಕಾರಗಳದೆಷ್ಟು ಸತ್ಯ?
ಎಲ್ಲವೂ ಸುಳ್ಳೆಂದು ಭಾವಿಸಿದರೆ
ಕೆಲವಾರು ನಿಜದಿಂದ ನಿಟ್ಟುಸಿರು ಬಿಡಬಹುದು
ಅನ್ಯತಾ ಭಾವಿಸಿದೊಡೆ
ನಮ್ಮತನಗಳೇ ನಮ್ಮನ್ನು ದೂರಬಹುದು!!



ಸತ್ಯಕ್ಕೆ ಸಾವಿಲ್ಲ
ಅಂತೆಯೇ ಸುಳ್ಳಿಗೂ...

                                     - ರತ್ನಸುತ

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...