Tuesday, 27 September 2016

ಓ ಹೃದಯವುಳ್ಳ ಮಾನವರೇ

(ಹೆಂ)
ಓ ಹೃದಯವುಳ್ಳ ಮಾನವರೇ ಮಿಡಿತಗಳನಾಲಿಸಿ
ಪರಿತಪಿಸುವ ಪ್ರಾರ್ಥನೆಗಳ ಮನಸಾರೆ ಗ್ರಹಿಸಿರಿ
ಕಣ್ಣೀರ ಹಾಡು-ಪಾಡು ನಿಮ್ಮೊಳ ರಿಂಗಣಿಸಲಿ
ನಮ್ಮ ನೋವ ಕಥೆಯಲೊಮ್ಮೆ ನಿಮ್ಮನ್ನೂ ಇಣುಕಿಸಿ
(ಗಂ)
ಅಸಹಾಯಕರಾಗಿ ಸೋತ ನಮ್ಮ ಕ್ಷಮಿಸು ಸೋದರಿ
ಅಂಧಕಾರ ಸೀಳುವಂಥ ಬೆಳಕ ಹೊತ್ತು ತರುವೆವು
ಆಗದು ಇನ್ನೆಂದೂ ನಿನಗೆ ಈ ರೀತಿಯ ಅಪಮಾನ
ಅಭಿಮತದ ಸಂಕಲ್ಪದಿ ನಿನಗಿದೋ ಸನ್ಮಾನ
(ಹೆಂ)
ಓ ಅಮಾನುಷ ವ್ಯಾಘ್ರಗಳೇ ಕರುಣಿ ಇಲ್ಲವೇ?
ಎರಗಿದಿರಿ ಹೂವ ಹೊಸಕಿ ಉಸಿರ ಹೀರುತ
ಕಾಣಲಿಲ್ಲವೇ ನಮ್ಮಲಿ ನಿಮ್ಮದೇ ಪ್ರತಿಬಿಂಬ
ಹೀಗೆ ಪರಿಚಯಿಸಿಕೊಳ್ಳುವ ವಿಕೃತ ಮನಸೇಕೆ?
(ಗಂ)
ಅನುಮಾನವೇ ಇಲ್ಲ ನಾವು ಸೋತೆವು ತಾಯೇ
ಶರಣಾದೆವು ಆದರೆ ಸೋಲೊಪ್ಪುವ ಮಾತಿಲ್ಲ
ಆಗದು ಇನ್ನೆಂದೂ ನಿನಗೆ ಈ ರೀತಿಯ ಕಿರುಕುಳ
ಅಭಿಮತದ ಸಂಕಲ್ಪದಿ ನಿನಗಿದೋ ಬೆಂಬಲ
(ಹೆಂ)
ಓ ಆತ್ಮ ಬಂಧುಗಳೇ ಬಂಧನದಿಂ ಮುಕ್ತಗೊಳಿಸಿ
ಬಲಹೀನ ಮನಸುಗಳ ಕೈ ಹಿಡಿದು ಶಕ್ತಗೊಳಿಸಿ
ಸರಹದ್ದುಗಳಾಚೆ ನಮ್ಮ ಕನಸಿನ ಊರಿದೆ ಕಾಣಿ
ಹಾರುವ ರೆಕ್ಕೆ ಪಡೆದು ಆಕಾಶವ ಮೀರುವಾಸೆ
(ಗಂ)
ಬೆಂಬಲಿಸಲು ನಿಮ್ಮ ಬಲಕೆ ಹಂಬಲವದು ನಮ್ಮದು
ತಂಬೆಲರಿನ ತೇರಿನಲ್ಲಿ ನಿಮ್ಮ ಬದುಕು ಸಾಗಲಿ
ಆಗಲು ಬಿಡೆವಿನ್ನು ನಾವು ಹೆಣ್ತನಕೆ ಅಗೌರವ
ನೀಡುವೆವು ಹೀಗೊಂದು ಹೃತ್ಪೂರ್ವಕ ವಚನವ!!
 
                                                 - ರತ್ನಸುತ 

ಶ್ವೇತ ಪದ್ಮ

ಶ್ವೇತ ಪದ್ಮದಲ್ಲಿ ಮಿನುಗು
ಕಣ್ಣು ಅದರ ಹೆಸರು
ಕಡಿದ ಬೆಣ್ಣೆ ಮುದ್ದೆಯೊಂದು
ಕೆನ್ನೆ ಮೇಲೆ ಪಸರು
ಹರಳ ಬೆರಳ ಸರಳತೆಯಲಿ
ಕಲೆಗಾರನ ಕುಸುರಿ
ಮುಗಿಲ ಹೆಗಲ ಏರಿ ಬಂತೇ
ಹೊಂಬಿಸಿಲು ಸವರಿ?
 
ಕದ್ದು ಸೋಕುವಾಗ ಗಾಳಿ
ಕೇಶದಷ್ಟೇ ನವಿರು
ನಿನ್ನ ಸೋಕಿ ಧನ್ಯತೆಗೆ
ಪಾತ್ರವಾಯ್ತು ಹಸಿರು
ಹಣೆಗಿಟ್ಟ ಕಪ್ಪು ಕರಗಿ
ಕಣ್ಣುಬ್ಬಿಗೆ ಮೆರಗು
ಭಾವಚಿತ್ರ ಕಂಡೊಡನೆಯೇ
ಕುಂಚಗಳಿಗೂ ಕೊರಗು
 
ಕವಿದ ಕಪ್ಪು ಮೋಡದಂತೆ
ಕುರುಳ ಸಾಲು ಸಾಲು
ಮಾತುಗಳೂ ತೊದಲುತಿವೆ
ನಾಚಿ ಬಾರದಿರಲು
ಉತ್ಕೃಷ್ಟಗಳೆಲ್ಲ ಶರಣು
ಸಣ್ಣ ಕಿರು ನಗೆಗೆ
ಪ್ರಕೃತಿಯೇ ತಲೆ ಬಾಗಿತು
ಆ ನಗೆಯ ಬಗೆಗೆ
 
ಅಂಬೆಗಾಲು ಇಟ್ಟ ಕನಸು
ನಿದ್ದೆಗೊಡದು ಈಗ
ಎಚ್ಚರಗೊಳ್ಳುವೆ ಎಚ್ಚರ
ಬೆದರುತ ಆಗಾಗ
ಆಮ್ಮ ಇರುವಳು ಪಕ್ಕ
ಅಪ್ಪನ ಎದೆಗಪ್ಪು
ನೋವು ನಿನ್ನ ಸುಳಿಯದಿರಲಿ
ಹೇ ಪುಟಾಣಿ ಪಾಪು!!
 
                     - ರತ್ನಸುತ 

Monday, 26 September 2016

ಪಾದರಸ

ಪಲ್ಲವಿ
ಅನುಮಾನ ಇಲ್ಲವೇ ಇಲ್ಲ
ಅನುರಾಗಿ ಆಗಿಹೆ ನಾನು
ಅಲೆಮಾರಿ ಮನಸಿಗೆ ಈಗ
ಕಡಿವಾಣವಾಗುವೆಯೇನು?
ಎದುರಲಿ ನಿಂತರೆ ಹೀಗೆ
ಎದೆಯಲ್ಲಿ ನೂರಾರು ಚಿಲುಮೆ
ಅತಿ ಸುಂದರ ಭಾವ ಅರಳುತಿದೆ
ನಿನ್ನಲ್ಲಿ ಒಂದಾಗಲೆಂದು....
ಅನುಮಾನ ಇಲ್ಲವೇ ಇಲ್ಲ....
 
ಚರಣ 1
ಉಸಿರ ಒಳಗೆ, ಬಿಸಿಯೇ ನೀನು
ನಿದ್ದೆ ಕಸಿದ ಕನಸು ನಿನ್ನದೇ
ಎದೆಯ ಬಿರಿದು, ಹೃದಯ ಸೇರಿ
ನನ್ನ ಪ್ರಾಣ ತೆಗೆವೆ ಕೊಲ್ಲದೆ
ಅತಿಯಾಗಿ ಪ್ರೀತಿಸುವಂತೆ
ಹಿತವಾಗಿ ಅನುಮತಿ ನೀಡು
ಜೊತೆಯಲ್ಲಿ ನೀ ಇರುವಾಗ
ನೆರಳಲ್ಲೂ ಬಣ್ಣದ ಸೊಗಡು...
 
ಚರಣ 2
ಯಾರಲಿ ಹೇಳೋದು ಈ ಪಾಡು
ನನಗಿರೋ ಸಂಗಾತಿ ನೀ
ತಡಬಡಿಸದೆ ನೀ ಕೇಳು
ಅತಿಶಯವೆನಿಸುವ ಈ ಹಾಡು
ಇದರಲಿ ನೀ ಮಿಂದು ಒದ್ದಾಡು
ನೀನಾಗೇ ನನ್ನ ಮುದ್ದಾಡು
ಪ್ರತಿ ಕ್ಷಣವನು ನಿನ್ನ ಮಡಿಲಿನಲಿ
ಎಣಿಸಿ ಬಾಳೋದೇ ಬಾಳು...
ಹಲವಾರು ಕಥೆಗಳು ಬೇರೆ
ನನ್ನ ಪ್ರೇಮ ಪ್ರಕರಣ ಬೇರೆ
ಬಳಿಯಲ್ಲಿ ಬಂದರೆ ನಿನಗೆ
ಬಿಡಿಸುತ್ತ ಹೇಳುವೆ ಬಾರೆ...
 
                        - ರತ್ನಸುತ 

ಮನದ ಕೊಡ

ಕೈ ಹಿಡಿದ ಕೊಡವನ್ನ
ಕೈಲಿಡಿದು ಬಂದವಳೇ
ಕೊಡು ಬೊಗಸೆಯ ತುಂಬ
ಸಿಹಿ ನೀರ ಗುಟುಕು
ನೀ ಸಾಗಿ ಬಂದ ಆ
ರಸ್ತೆಯಲಿ ಬಳುಕಿಲ್ಲ
ನಿನ್ನ ಮೈ ಬಳುಕಲ್ಲಿ
ನೋಟಕ್ಕೆ ಚಳುಕು
 
ತಲೆ ಮೇಲೆ ಒಂದು ಕೊಡ
ನಡುವಲ್ಲಿ ಒಂದು
ಕರಗುತುದೆ ಹಣೆಗಿಟ್ಟ
ಕುಂಕುಮದ ಬೊಟ್ಟು
ತಾ ಹೊರುವೆ ತುಸು ದೂರ
ದಣಿವಾರಲಿ ನಿನಗೂ
ಕೊಳ್ಳುವೆ ಕೊಡವನ್ನ
ಮನವ ಅಡವಿಟ್ಟು
 
ಸೀರೆ ಅಂಚಿನ ಠಸ್ಸೆ
 ಒತ್ತುತಿರೆ ಮೊಗದಲ್ಲಿ
ಬೆವರು ರುಪಾಂತರ-
-ಗೊಳ್ಳುತಿಹ ಸೊಗಸು
ಇನ್ನೂ ಬಿಟ್ಟಿಲ್ಲವೇ
ನೀರು ಸೇದಲು ನಿನ್ನ
ಗೆಳತಿಯರು ರೇಗಿಸಲು
ಹುಟ್ಟಿದ ಮುನಿಸು?!!
 
ಕಳ್ಳ ನೋಟದಿ ನನ್ನ
ಕೊಲ್ಲುವುದು ನಿನಗಿಷ್ಟ
ಎಷ್ಟೇ ಆದರು ನೀನು
ಹೃದಯ ಕದ್ದವಳು
ಎಲ್ಲ ಕನಸುಗಳಲ್ಲೂ
ನಿನ್ನ ಸಹಿಯನು ಗೀಚಿ
ಏನೂ ತಿಳಿಯದ ಹಾಗೆ
ಸುಮ್ಮನಿದ್ದವಳು
 
ಎರಡು ತಿರುವಿನ ಆಚೆ
ಕಾಣುವುದು ನಿನ್ನ ಮನೆ
ಹದರಿಕೆ ಹೆಚ್ಚುತಿದೆ
ಕಂಪಿಸಿದೆ ಕೊರಳು
ನಿನಗೋ ಬಂಡತನ
ಆಲಿಸುವ ಶ್ರಮವಷ್ಟೇ
ಸೋಲಬಹುದೋ ಏನೋ
ಮತ್ತೊಮ್ಮೆ ಸೊಲ್ಲು
 
ಹಿಡಿ ನಿನ್ನ ಕೊಡವನ್ನ
ಬದಲಿ ನೀಡದೆ ಏನೂ
ಇರಲಿ ನನ್ನವುಗಳೆಲ್ಲ
ನಿನ್ನ ಬಳಿಯಲ್ಲೇ
ಹೇಳ ಮರೆತೆ ಕೇಳು
ನಿನ್ನ ಕುರಿತೀ ಕವನ
ಜೋಪಾನ ಮಾಡುವೆನು
ನನ್ನ ಮನದಲ್ಲೇ!!
 
                 - ರತ್ನಸುತ

ನೀನೇ

ಪಲ್ಲವಿ 
(ಹೆಂ)
ನೀನೇ ಮೊದಮೊದಲವ ನೀನೇ
ಮನ ಸೆಳೆದವ ನೀನೇ
ಮಾಯಗಾರನೇ... ನೀನೇ ನೀನೇ...
ಪಲ್ಲವಿ 
ಹಗಲು, ಇರುಳು ನೀನೇನೆ
ಕಡಲು ಅಲೆಯು ನೊರೆಯು ನೀನೇನೆ
ಎದೆಯ ಉಸಿರು ನೀನೇ
ಹೃದಯ ಬಡಿತ ನೀನೇ
ಮಧುರ ಕನಸು ನೀನೇ...
(ಗಂ)    
ನೀನೇ ಎತ್ತರದ ಸಿರಿ
ನೀನೇ ಉತ್ತರದ ಪರಿ
ನೀನೇ ಜೀವಮಾನವೇ.. ಆ ಆ
ಪ್ರೀತಿ ಇಷ್ಟವಾಗುವ ಪಜೀತಿ
ಎಲ್ಲ ಬೇಲಿಯನ್ನೂ ದಾಟಿ
ನಿನ್ನ ಸೇರುವೆ  
 
ಚರಣ ೧ 
(ಗಂ)
ಎಲ್ಲೇ ನೋಡಲು ನಿನ್ನ
ಮೊಗವೇ ಕಾಡಿದೆ ಇಂದು
ಹಿತವೇ ಅನಿಸಿ ತಲೆ ಬಾಗಿ
ಮತ್ತೆ ಮತ್ತೆ ಸೋಲುವೆ
(ಹೆಂ)
ನೀನು ಎದುರು ಬಂದಾಗ
ಹೃದಯ ನಾಚಿಕೊಂಡಂತೆ
ದೂರವಾದರೆ ಅಲ್ಲೇ
ನಾನು ಚೂರಾಗುವೆ
(ಗಂ)
ನೀನೇ... ನನ್ನ ಇತಿ ಮಿತಿ
ನೀನೇ... ನನ್ನ ಸ್ಥಿತಿ ಗತಿ
ನೀನೇ... ನಾನಾದೆನೇ..
ಯಾರೂ ನೀಡಲಾಗದಷ್ಟು 
ಪ್ರೀತಿ ನಾನು ನೀಡಬಲ್ಲೆ
ನಂಬು ನೀ ನನ್ನನೇ....
 
ಚರಣ ೨
(ಹೆಂ)
ನಿನ್ನನು ಹೊರತು ನಾ
ಯಾರನೂ ಬೇಡೆನು
ನನ್ನನೇ ಬರೆಯುವೆ ನಿನ್ನ ಈ ಬದುಕಿಗೆ
(ಗಂ)
ಎಲ್ಲ ಸಿಕ್ಕು ಬಿಡಿಸುತ್ತ 
ನಿಂತೆ ನಿನ್ನ ಜೊತೆಯಾಗಿ 
ನಿನ್ನ ಕರೆಯ ಮರೆಯಲ್ಲೇ ವಾಸವಾಗುವೆ... 
ನೀನೇ... ಅತಿ ಮಧುರವೂ
ನೀನೇ... ಕಣ ಕಣದಲೂ
ನೀನೇ... ವರವಾದಾನವೇ... 
ಪ್ರೀತಿ ಸೋಲುವಂಥದಲ್ಲ
ಪ್ರೀತಿ ಸಾಯುವಂಥದಲ್ಲ
ಪ್ರೀತಿ ಸಂಜೀವಿನಿ.....
 
                                - ರತ್ನಸುತ 

Monday, 1 August 2016

ಒಂದೇ ನಾವಿಬ್ಬರು..

...
ಆ ಮೊದಲು ಹೃದಯವೇ ನೀನಾಗಿ
ನೋಡುತ್ತ ನಿಂತ ನನ್ನ ಬಡಿತಗಳ
ಕಸಿದಂತೆ ಬಡಿದಾಡಿಕೊಂಡಿದ್ದ ನೀನು
ಇನ್ನೂ ಅಸ್ತಿತ್ವಕ್ಕಾಗಿ ಹೋರಾಡುತ್ತಿದ್ದೆ


ದೇಹ ಬೆಳೆದಂತೆಲ್ಲ ಹೃದಯ ಕಮರಿದರೂ
ಕೊಟ್ಟಷ್ಟೂ ಪ್ರೀತಿಯ ನರನಾಡಿಗಳಿಗೆ ರವಾನಿಸಿ
ಆಕಾರ ಪಡೆಯತೊಡಗಿದ ನಿನ್ನ ಬೆನ್ನಿಗೆ
ಇಡಿ ಜನ್ಮವ ಹೊತ್ತು ಬದುಕುವ ಶಕ್ತಿ ದೊರೆಯಲಿ


ಯಾವ ಬಯಕೆಗಳಿಗೂ ಚಾಚದ ಕೈಗಳು
ಯಾವ ಗಮ್ಯದೆಡೆಗೂ ಮೋಹಗೊಳ್ಳದ ಕಾಲ್ಗಳು
ಎಲ್ಲ ತಿಳಿದೂ ತಟಸ್ಥ ಸ್ಥಿತಿಯಲ್ಲುಳಿವ ಭಂಗಿ
ಎಲ್ಲ ಕಂಡೂ ಮೌನ ಆಚರಿಸುವ ಪರಿ
ಈಚೆಗೆ ನನ್ನ ಹೆಚ್ಚು ಸೆಳೆತಕ್ಕೊಳಪಡಿಸುತ್ತಿವೆ


ನಿನ್ನ ಸೃಷ್ಟಿಯ ಮಜಲುಗಳೆನ್ನ ಸವೆಯುವಿಕೆ
ನನ್ನ ಅಹಂಕಾರಗಳೆಲ್ಲ ಅಲಂಕೃತಗೊಂಡು
ಅಂತಿಮ ಮೆರವಣಿಗೆಯಲ್ಲಿ ಪಾಲ್ಗೊಂಡಿವೆ
ನಾ ಮೆಲ್ಲೆ ಕಳೆದು ನನ್ನನ್ನು ಕಂಡುಕೊಳ್ಳುವ ತವಕ


ನೀ ಹುಟ್ಟುವ ಆ ಕ್ಷಣದ ಮುನ್ನ, ನನ್ನ ಸಾವು
ನೀ ಹುಟ್ಟಿದ ಮರುಕ್ಷಣವೇ ಜನನ
ನಾನು, ನೀನು ಇಬ್ಬರೂ ಮಗುವಂತೆ ಕೂಡಿ
ಜೀವನವನ್ನ ಕಟ್ಟುವಾಟಕ್ಕೆ ನಾಂದಿ ಹಾಡೋಣ


ಅಂದಹಾಗೆ, ಅಸಲಿಯತ್ತೇ ಕಳೆದ ನನಗೆ
ಹೆಸರೇ ಗುರುತಿಲ್ಲದಂತೆ ನಟಿಸುವಾಸೆ
ನಾ ನಿನಗೆ, ನೀ ನನಗೆ ಹೆಸರಿಟ್ಟುಕೊಳ್ಳುವ
ಇಬ್ಬರದ್ದು ಒಂದೇ ನೆತ್ತರು
ಒಂದೇ ನಾವಿಬ್ಬರು....


                                         - ರತ್ನಸುತ

Wednesday, 22 June 2016

ನಮ್ಮ ಸ್ವಗತ

ಮಳೆಯಲ್ಲಿ ನಿನ್ನ ನೆನೆದು ನೆನೆದು
ನೆನೆವುದನ್ನೇ ರೂಢಿಯಾಗಿಸಿಕೊಂಡ ಮನ
ನೀ ಹತ್ತಿರವಿದ್ದಾಗ ನಿರ್ಭಾವುಕ


ಎಲ್ಲ ಚಂಚಲತೆಗಳ ಪರಿಚಯವಿರುವ
ನಿನ್ನ ಅಂಗೈಯ್ಯ ಮೇಲೊಂದು ಸಾಲು ಗೀಚಿ
ಗುಟ್ಟಾಗಿ ಹಿಡಿದಿಟ್ಟುಕೋ ಅಂದಾಗ
ಅದೇನು ನಾಚಿಕೆ ನಿನ್ನ ಕಣ್ಣಲ್ಲಿ?!!


ನಿನ್ನೆದುರು ಯಾವ ಕವಿತೆಗಳೂ ಮೂಡದೆ
ನೀನೇ ಕವಿತೆಯೆಂದು ಬೀಗುವಾಗ
ಮಾಗಿದ ಮೋಡದಂತಾಗಿ ಕರಗಿಬಿಡುತ್ತೇನೆ
ಸಂಪೂರ್ಣವಾಗಿ ನಿನ್ನನ್ನಷ್ಟೇ ತೋಯ್ಸಿ


ಬಾ ಕೈ ಚಾಚು ಕೊಡೆಯೊಂದಿಗೆ
ಕಣ್ಣಮುಚ್ಚಾಲೆಯಾಟವಾಡೋಣ ಮಳೆಯೊಂದಿಗೆ
ಸೋತು ಗೆಲ್ಲುವ, ಗೆದ್ದು ಸೋಲುವ
ಎಲ್ಲ ಸ್ವಾದಗಳನ್ನೂ ಸವಿದಷ್ಟೆ ಸವಿಯಾಗಿ
ಸವೆಸಿಬಿಡೋಣ ಪುನರಾಗಮನದ ಆಕಾಂಕ್ಷಿಗಳಾಗಿ!!


ಮಳೆ ಎಷ್ಟು ಉತ್ಸಾಹಿಯಾಗಿದೆಯೆಂದರೆ
ನಮ್ಮ ಏಕಾಂತಕ್ಕೆ ವಿಘ್ನ ಹಾಡಲೆಂದೇ
ಉಪ್ಪರಿಗೆ ಮೇಲೆ ಸದ್ದು ಮಾಡಿದಂತೆ
ಅದಕ್ಕೇನು ತಿಳಿಯಬೇಕು ನಮ್ಮ ಸ್ವಗತ!!



                                               - ರತ್ನಸುತ

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...