Friday, 16 December 2016

ಸ್ವಾಭಿಮಾನವ ಅಡವಿಟ್ಟಾಗ

ಬೆಳಕು ಬೇಡನಿಸುವಷ್ಟು ಕಾರಣಗಳಿವೆ 
ಆದರೆ ಕತ್ತಲೆ ಬೇಡವೆಂಬ ಕಾರಣಕ್ಕೆ 
ಬಳಕನ್ನು ಸ್ವೀಕರಿಸಿರುವೆ ಅಷ್ಟೇ;
ಬೆಳಕು ಬೇಕೆಂಬುದು ಸಾರ್ವಕಾಲಿಕ ಸತ್ಯ 

ಹಸಿವ ಗೆಲ್ಲುವ ಛಲವಿದ್ದರೆ ಸಾಲದು 
ಹೊಟ್ಟೆಗೆ ತಕ್ಕಷ್ಟು ಗಳಿಸುವ ಕ್ಷಮತೆ ಬೇಕು 
ಬಂಡಾಯ ಚಳುವಳಿಗಳು ಒಳಗಿನ ತಿಂಡಿಪೋತನ 
ಮತ್ತಷ್ಟು ಬಲಿಷ್ಠಗೊಳಿಸುವುದಂತೂ ನಿಜ 

ಹುಟ್ಟಿದ್ದೇನೆಂಬ ಕಾರಣಕ್ಕೆ ಬದುಕಿ 
ಬದುಕಿದ್ದೇನೆಂಬ ಕಾರಣಕ್ಕೆ ಗುರುತಾಗುವ ಗುರುತು 
ಬಹುಕಾಲ ಉಳಿವಿನ ಅರ್ಹತೆ ಗಳಿಸಿಕೊಳ್ಳದು;
ಅಂತಃಕರಣದಲ್ಲಿ ಬದುಕಿದರೆ
ಗುರುತಾಗುವ ಗೋಜಲಿಗೆ ಸಿಕ್ಕಿ ನರಳುವ ತಗಾದೆ ತಪ್ಪುವುದು 

ಬಿದ್ದ ಹೆಸರುಗಳು ನಾವು ಗಳಿಸಿದವಷ್ಟೇ 
ಯಾರೂ ಕೆಲಸ ಬಿಟ್ಟು ಹೆಸರಿಡುವಂತವರಲ್ಲ;
ಒಂದು, ಹೆಸರಿಡಲಾಗದಂತೆ ಜೀವಿಸೋದು 
ಎರಡು, ಹೆಸರುಗಳ ಹಂಗು ತೊರೆದು ಜೀವಿಸೋದು 
ಮೂರು, ಹೆಸರಿಡುವವರಿಂದ ದೂರ ಉಳಿದು ಜೀವಿಸೋದು;
ಮೂರರಲ್ಲಿ ಯಾವೊಂದು ಸುಳ್ಳಾದರೂ 
ವಾಸ್ತವವ ಒಪ್ಪುವ ಸರಳ ಅಸಹಾಯಕತೆ ನಮ್ಮದಾಗಬೇಕಷ್ಟೇ!!

ಸಮಸ್ಯೆಗಳಿಗೆ ಕಣ್ಣೀರು ಜೊತೆಯಾಗಬಹುದು 
ಆದರೆ ಅದೇ ಪರಿಹಾರದ ದಿಕ್ಸೂಚಿಯಾಗಬಯಸಿದರೆ
ಮೂರ್ಖತನಕ್ಕೆ ನೀರೆರೆದು ಪೋಷಿಸಿದಂತೆ,
ಬೇರೂರಿದಷ್ಟೂ ಉರುಳುವ ಸಾಧ್ಯತೆ ಬಹಳ 

ಸ್ವಾಭಿಮಾನವ ಮಾರಿ ಬಂದ ಲಾಭವ ಹೂಡಿ 
ನಾಳೆಗಳ ಲೆಕ್ಕ ಹಾಕುವ ಹೇಯ ಕೃತ್ಯಕ್ಕೆ 
ಸಾವೂ ಹೇಸಿಗೆಯಿಂದ ದೂರುಳಿದು 
ನನ್ನ ಶತಾಯುವನ್ನಾಗಿಸುವ ಆತಂಕವಿದೆ;
ಯಾವುದಕ್ಕೂ ಸಾಯುವ ನೂರು ಮಾರ್ಗಗಳನ್ನ 
ಕಂಡುಕೊಳ್ಳುವುದು ಅನಿವಾರ್ಯವೆನಿಸಿದಾಕ್ಷಣ ಸಜ್ಜಾಗುವುದು ಒಳಿತು;
ಯಾವ ಕ್ಷಣಕ್ಕಾದರೂ ಕೆಲಸಕ್ಕೆ ಬರಬಹುದು!!

                                                                     - ರತ್ನಸುತ

Wednesday, 14 December 2016

ಪರಮಾತ್ಮನಿಗೊಂದು ಪತ್ರ

ಇಲ್ಲಿ ಹಾಳಾಗೋದೆ ತಂದೆ
ಬಂದು ನಿಲ್ಲಪ್ಪ ನೀ ಕಣ್ಣ ಮುಂದೆ
ಬಯ್ಯೋರೇ ಆಗೋದ್ರು ಎಲ್ಲ
ನಾನು ಮಾಡಿರೋ ತಪ್ಪೆಲ್ಲ ಒಂದೇ..


ಇಟ್ಟಾಗ ತಕ್ಷಣ ಕೆಟ್ಟಲ್ಲಿ ಕಾಲ್ಗುಣ
ಬಿದ್ದೋಗ್ಲಿ ಅತ್ಲಾಗೆ ಕಾಲು
ಮಾತಿಗ್ಮಾತು ಸೇರ್ಸೋ ಮುಠಾಳ ನಾನು
ನಾಲ್ಗೆ ತುಂಡಾಗೋದೇ ಮೇಲು


ಕದ್ದು ಕೇಳ್ಬೇಡಂತ ತಿವಿಯೋರ್ಗೆ
ಮೈಯ್ಯೆಲ್ಲ ಕಿವಿಯಂತೆ ಗೊತ್ತಾ?
ನಿದ್ದೆ ಕದಿಯೋ ಮಂದಿ ಇರ್ಬೋದು
ಕನ್ಸೇನ್ ಅವ್ರಪ್ಪನ್ಮನೆ ಸ್ವತ್ತಾ?


ಸುಮ್ನಿದ್ರೆ ಸೋಂಬೇರಿ, ಎಗ್ರಾಡಿದ್ರೆ ನರಿ
ಮೋಸಕ್ಕೆ ಬಲಿಯಾದ್ರೆ ಬನ್ನೂರ್ ಕುರಿ
ಗಳ್ಗೆಗೆ ಒಂದೊಂದು ಬಣ್ಣ ಹಚ್ಚೋಗಂಟ
ಏನ್ಮಾಡಿದ್ರೂ ಇಲ್ಲಿ ಎಲ್ಲ ಸರಿ


ಎಲ್ಲಪ್ಪ ಗುರುವೇ ನೆಮ್ದಿ ಇರೋ ಜಾಗ?
ನೀನಿರೋ ಜಾಗಾನೂ ಸಂತೆ ಸಿವ
ಕಾಸಿಗ್-ಕಾಸ್ ಕೂಡಿಟ್ಟು ತಂದಿವ್ನಿ ಒಪ್ಪುಸ್ಕೋ
ಹಿಡಿ ತುಂಬ ಕೊಟ್ಬುಡು ಸಂತೋಸವ..


ಮಾಡಿರೋ ತಪ್ಪಾದ್ರು ಏನುಂತ ಕೇಳೋ
ತಲೆ ಬಗ್ಸಿ ಇಡ್ತೀನಿ ಪಾದಕ್ಕೆ
ಉಸ್ರು ಉಸ್ರಿಗುವೆ ದಂಡ ಕಂಟೊಂಗಾಯ್ತು
ಪರ್ಮಾತ್ಮ ಹುಟ್ಟಿದ್ ಪಾಪಕ್ಕೆ...


                                    - ರತ್ನಸುತ 

ಶರಣಾಗತ

ಕಣ್ಣೀರ ಸರಸಕ್ಕೆ ಅಂಗೈಯ್ಯ ಬೇಡಿಕೆ
ಬಾ ಒಡ್ಡು ಬೊಗಸೆಯನು ಜಾರೋ ಮುನ್ನ
ತೂಕಡಿಸಿ ಹೆಗಲಿಗೆ ಒರಗುವೆ ಬೇಕಂತ
ಮುದ್ದಾದ ಕನಸಂತೆ ಸಲಹು ನನ್ನ

ಪದದೊಟ್ಟಿಗೆ ಎರಡು ನೆನಪನ್ನು ಹದವಾಗಿ
ಬೆರೆಸಿ ಬಿಡು ಉಸಿರಲ್ಲಿ ಹಾಡಾಗಿಸಿ
ಎದೆಯಲ್ಲಿ ಮೂಡಿಸು ಹೆಜ್ಜೆ ಗುರುತೊಂದನು
ನಾ ಬರುವೆ ನಿನ್ನನ್ನು ಹಿಂಬಾಲಿಸಿ

ಎಲ್ಲಕ್ಕೂ ನಿನ್ನಲ್ಲಿ ಉತ್ತರವ ಹುಡುಕುವೆ
ಕೆದಕಿ ಹೋಗು ಇದ್ದ ಪ್ರಶ್ನೆಗಳನು
ಬೆಲ್ಲಕ್ಕೂ ಸಿಹಿಯಾದ ಸಂಗತಿಯ ಸರಕಿದೆ
ಮನಸಿಟ್ಟು ಆಲಿಸು ಮಿಡಿತಗಳನು

ಶರವೊಂದು ಶರಣಾದ ಕಥೆಯಲ್ಲಿ ನಿನ್ನದು
ಕಣ್ಣಲ್ಲೇ ಗುರಿಯಿಟ್ಟ ಮೇರು ಪಾತ್ರ
ನನ್ನಲ್ಲಿ ಹುಟ್ಟಿದ ಗುಟ್ಟೊಂದು ಕಳುವಾಗಿ
ನಿನ್ನಲ್ಲಿ ನೆಲೆಸಿದ್ದು ನೆಪಕೆ ಮಾತ್ರ

ಅಂದಕ್ಕೆ ಸಲ್ಲುವ ನ್ಯಾಯಕ್ಕೆ ನೀನೇನೆ
ಪರವಾನಗಿ ಉಳ್ಳ ನ್ಯಾಯಾಲಯ
ನನ್ನೊಲವ ದೀಪ್ತಿಗೆ ಆಪ್ತವಾಗುವ ನಿನ್ನ
ಮನದ ಅಂಗಳವೇ ದೇವಾಲಯ!!

                                  - ರತ್ನಸುತ 

ಬೆಚ್ಚಿದೆಯೇಕೆ ಬಾಲ ಗೋಪಿ?

ಬೆಚ್ಚಿದೆಯೇಕೆ ಬಾಲ ಗೋಪಿ?
ಕನಸಲ್ಲಿ ಕಚ್ಚಿದನಾ ಗುಮ್ಮ ಪಾಪಿ?
ಕೈ ಚಾಚಿ ಅಪ್ಪುಗೆಗೆ
ಕೊರಳುಬ್ಬಿ ಚೀರೋ ಬಗೆ
ನಿಚ್ಚಲಗೋಳಿಸಿತೈಯ್ಯ ಇರುಳ
ಹೇಳು ಏನು ಮಾಡಿದ ಆ ದುರುಳ?


ಹೆಪ್ಪುಗಟ್ಟಿದ ಮುಗಿಲ ಮರೆಯ
ತಿಂಗಳಿಗೆ ಧಾವಿಸುವ ತವಕ
ಜಿಟಿಜಿಟಿಮಳೆ ಬಿಡದೆ ಪಠಿಸುತಿದೆ
ನಿದ್ದೆ ಬಾರದ ರಾತ್ರಿಗಳು ನರಕ
ನಿನ್ನ ತುಟಿಯಂಚಿಗೆ ಅಂಟಿದ ಮುಗುಳು ನಗೆ
ಯಾವ ಸಂಚಿಗೆ ಸಿಕ್ಕಿ ಮರೆಯಾಯಿತು?
ಕಣ್ಣು ತುಂಬಿಕೊಳಲು ಉಸಿರುಗಟ್ಟಿದ ಎದೆಯ
ಹಾಲು ಜಿನುಗಲು ಚೂರು ತಡಬಡಿಸಿತು


ದೀಪದ ಬೆಳಕಿನೆಡೆ ನೋಟ ನೆಡುವೆ
ಅರಳಿಸಿ ಕಣ್ಣುಗಳ ಬಿಕ್ಕಳಿಸುವೆ
ಮುಷ್ಠಿಯಲಿ ಭಯವನ್ನು ಹಿಡಿದಿಟ್ಟೆಯೇಕೆ?
ಪಕ್ಕದಲೇ ಇಹಳಲ್ಲ ನಿನ್ನ ಹಡೆದಾಕೆ
ಹೊದ್ದ ನೆದ್ದೆಯ ತಬ್ಬಿ ಮಲಗು ಕಂದ
ಪದವೊಂದ ಹಾಡುವೆನು ಪ್ರೀತಿಯಿಂದ!!


ನಿನ್ನ ಅಳುವಿನ ಶಾಪ ಗುಮ್ಮನೆಡೆಗೆ
ಜಾರಿಕೊಂಡನು ಮತ್ತೆ ಇರುಳಿನೆಡೆಗೆ
ಹೊಟ್ಟೆ ತುಂಬಿದ ಮೇಲೆ ತೇಗಬೇಕು
ನೆತ್ತಿ ಬೊಟ್ಟು ಗಲ್ಲಕಂಟಬೇಕು
ಜೋಗುಳದ ಜೋಲಿಯನು ಜೀಕುವಾಗ
ನಸುನಗೆಯ ಕಿಸೆಯಿಂದ ಕದ್ದ ತಿರುಳು
ಚೆಲುವಿಗೆ ಮುನ್ನುಡಿಯ ಬೆರೆಯಬೇಕು
ಹೊಂಗನಸಿನ ಚಿಗುರು ಅರಳಬೇಕು!!


                                - ರತ್ನಸುತ 

Friday, 4 November 2016

ನಾಲ್ಕು ದಿನಗಳಲ್ಲಿ

ನಾಲ್ಕು ದಿನಗಳಲ್ಲಿ
 
ಈ ನಾಲ್ಕು ದಿನಗಳಲ್ಲಿ
ಎಷ್ಟು ಸಾಧ್ಯವೋ ಅಷ್ಟು
ನಾನಲ್ಲದ ನನ್ನ ತೃಪ್ತಿಗೊಳಿಸಬೇಕು
 
ಮೂರು ದಶಕಗಳ ದಾಟಿ
ಮೈಗೂಡಿಸಿಕೊಂಡ ಸೋಮಾರಿತನಕ್ಕೆ
ಬೆಚ್ಚನೆಯ ದೀಪದಡಿಯಲ್ಲಿ ಗೋರಿ ಕಟ್ಟಿ
ಮಲ್ಲಿಗೆಯ ಬಳ್ಳಿಯನು ನೆಟ್ಟು
ಹೂ ಕಟ್ಟುವ ಕೆಲಸಕ್ಕೆ ಸಿದ್ಧನಾಗಬೇಕು
 
ಆಕಾಶದ ನೀಲಿಯಲ್ಲಿ ತೇಲುವವ
ಭೂಮಿಯ ಸ್ಪರ್ಶಕ್ಕೆ ಮರುಳಾಗಿ
ಬಿಗಿಯಾಗಿ ಬೇರೂರಬೇಕು;
ಜಂಗಮನ ಜೋಳಿಗೆಯ ಸ್ಥಾವರಕೆ ಸಿಲುಕಿಸಿ
ಜೋಕಾಲಿ ಜೀಕಾಡಿ ಹಗುರಾಗಬೇಕು
 
ಪ್ರಕೃತಿಯ ಮಡಿಲಲ್ಲಿ ಮಗುವಾಗಿ
ನಿಂತ ಗಡಿಯಾರದ ತಿರುವಿನಲ್ಲಿ
ಅಳು-ನಗುವಿನ ಅಂತರವ ವಿಭೇದಿಸುತ್ತ
ಜೀವಂತಿಕೆಯ ಭಂಡಾರವ ಎದೆಗಪ್ಪಿ
ಬದುಕನ್ನು ಹಿಂದಕ್ಕೆ ಉರುಳಿಸಿ
ಅನುದಿನವೂ ಹೊರಳಿ, ಹೊರಳಿ ನೋಡಬೇಕು
 
ಕಥೆಗಳ ಹುಟ್ಟಿಗೆ ದಿನಗಳೆದು
ಹೆಣೆಯುವಲ್ಲಿ ರಾತ್ರಿಗಳೊಡನೆ ಮುಳುಗಿ
ಎಚ್ಚರಗೊಳ್ಳುವಷ್ಟರಲ್ಲಿ ಮರೆತಲ್ಲಿಗೆ
ನೆನಪು ಮಾಡಿಕೊಳ್ಳುವಷ್ಟು ಪುರುಸೊತ್ತಿಲ್ಲದೆ
ಹೊಸ ಕಥೆಗಳ ಕಟ್ಟುವಲ್ಲಿ ತಲ್ಲೀನನಾಗಬೇಕು
 
ಹಠದ ಚಟವ ತೊರೆದು
ಸೋಲುವ ಸುಖಕ್ಕೆ ಹತ್ತಿರವಾಗಿ
ಉತ್ತರ ಸಿಗದ ಪ್ರಶ್ನೆಗಳೆದುರು
ಪ್ರಶ್ನಾತ್ಮಕ ಮುಖವ ಹಿಡಿದು
ನಗೆಗೀಡಾಗುವಲ್ಲಿಗೆ ಮನದುಂಬಿ ನಕ್ಕು
ಉಕ್ಕಿ ಬರುವ ಖುಷಿಯಲ್ಲಿ ಕೆನ್ನೆ ತೋಯ್ದು
ಮೆಲ್ಲ ಮುಸುಕು ಕಳಚಿಕೊಳ್ಳಬೇಕು!!
                                         
                                        - ರತ್ನಸುತ 

Friday, 21 October 2016

"ಸಂತು" ಚಿತ್ರದ "ತಂಗಾಳಿಯಲಿಂದು..." ಹಾಡಿನ ಧಾಟಿಗೆ ಹೆಣ್ಣಿನ ತುಮುಲಗಳ ವ್ಯಕ್ತ ಪಡಿಸುವ ಪ್ರಯತ್ನದ ಸಾಲುಗಳು:

ಪಲ್ಲವಿ
******
ನೀ ಸನಿಹಕೆ ಬಂದು, ಆಡುವ ಮಾತೊಂದು 
ನನ್ನ ಕನಸ ಕದ್ದು ಕೊಂಡೊಯ್ಯುವುದು 
ನೀ ಗಮನಿಸಲೆಂದು, ನಾ ನಗುವೆನು ಎಂದು 
ನನ್ನ ಮನಸು ನಾಚಿ ನೀರಾಗುವುದು 
 
ಹೃದಯದ ಬೀಗ ತೆರೆಯುವ ಮುನ್ನ 
ಕಂಗಳು ತುಂಬಿ ಬರುವುದೇ ಚೆನ್ನ 
ಕದ್ದಲ್ಲಿಯೇ ಕಳುವಾಗಲು ಸಜ್ಜಾಗುವೆ ಬೇಕಂತಲೇ.. 

ನೀ ಸನಿಹಕೆ ಬಂದು....... 
 
ಚರಣ ೧
*******
ಸರಿಯುವ ಸಮಯವನು,ನಿಲ್ಲಿಸಿ ಕೇಳುವೆನು
"ಅವಸರ ಹೀಗೇಕೆ ನಿನಗೆ, ಗೆಳೆಯನು ಇರುವಾಗ?"
ರುಚಿಸದ ಸಂಜೆಗಳು, ರಚಿಸುವ ವ್ಯೂಹದಲಿ 
ಸಿಲುಕುವ ಬಡಪಾಯಿ ನಾನು, ನಿನ್ನನು ತೊರೆದಾಗ 
 
ಬದುಕುವುದ ನೀ ಕಲಿಸು, ಬಡಿದಾಡಿದೆ ಈ ವಯಸು, ನಿನಗಾಗಿ ಮುಡುಪಾಗಿರಲು 
 
ಕಣ್ಣಲಿ ನಿನ್ನ ತುಂಬುವ ನಾನು 
ಜಾರಲು ಬಿಟ್ಟು ಬಾಳುವೆನೇನು?
ಕೈಯ್ಯಲಿದೆ ಕಾಲುಂಗುರ ಸದ್ದಿಲ್ಲದೆ ಒದ್ದಾಡುತ

ನೀ ಸನಿಹಕೆ ಬಂದು....... 

ಚರಣ ೨
*******
ಮರಳಿನ ಮನಸಿನಲಿ ಸ್ವರಗಳ ಮೂಡಿಸುವೆ 
ಉರುಳುವ ಸುಖವೊಂದೇ ನನಗೆ, ಪ್ರೇಮದ ವರದಾನ
ಕೊರಳಿನ ಕೂಪದಲಿ ತೊದಲುವ ಪದಗಳನು 
ಆಲಿಸಿ ಬರೆದಿಟ್ಟೆ ಕೊನೆಗೆ, ಅಚ್ಚಳಿಯದ ಕವನ 
 
ಕೊನೆವರೆಗೂ ಜೊತೆಗಿರುವ, ಭರವಸೆಯ ನೀಡಿಹುದು, ನೀ ಹಿಡಿದ ಈ ಕಿರು ಬೆರಳು 
 
ನನ್ನನೇ ನಾನು ನಂಬುವುದಿಲ್ಲ
ನಿನ್ನನೇ ಪೂರ ನಂಬಿದೆನಲ್ಲ?!!
ಎಚ್ಚೆತ್ತರೆ ನಾ ಸೋಲುವೆ, ಉನ್ಮತ್ತಳೇ ನಾನಾಗುವೆ
 
ನೀ ಸನಿಹಕೆ ಬಂದು....... 
 
                        - ಭರತ್ ಎಂ ವೆಂಕಟಸ್ವಾಮಿ (ರತ್ನಸುತ)

Friday, 14 October 2016

ತಿಥಿ

ಅಜ್ಜ ಸೇದಿ ಬೀಟ್ಟ ಬೀಡಿ
ಇನ್ನೂ ಆರುವ ಮೊದಲೇ
ಮೊಮ್ಮಗ ತುಟಿಗೇರಿಸುತ್ತಾನೆ,
ಉಸಿರಿನಾಳಕ್ಕೆ ಹೀರಿ
ಹೊರಹಾಕುವಾಗ ಕೆಮ್ಮುತ್ತ
ಮತ್ತೊಂದು ದೀರ್ಘ ಉಸಿರು
 
ಅಜ್ಜ ಹೊಸಕಿದ ಹೊಗೆಸೊಪ್ಪನ್ನ
ಥೇಟು ಅವನಂತೆಯೇ ದವಡೆಯಲ್ಲಿಟ್ಟು
ಸಿಕ್ಕ ಸಿಕ್ಕಲ್ಲಿ ಉಗುಳುತ್ತ
ಮದ ಏರಿಸಿಕೊಳುತ್ತಾನೆ,
ಕಣ್ಣು ಗಿರ-ಗಿರ ತಿರುಗಿದಾಗ
ಆಕಶಕ್ಕೆ ಕೈ ಚಾಚುತ್ತಾ
ಮೈ ಬೆಚ್ಚಗಾದರೂ ನಡುಗುತ್ತಾನೆ
 
ಅಜ್ಜ ಹೀರುವ ಖೋಡೆ ರಮ್ಮನ್ನ
ಮುಚ್ಚಳದ ಅಳತೆಯಲ್ಲಿ ಚಪ್ಪರಿಸುವ ಆತ
ಊರುಗಾಯಿಯ ದಾಸ,
ಊರುಗೋಲಿಗೆ ಕೊಟ್ಟ ಬೆನ್ನು
ಈಗ ನಿರಾಳವಾಗಿ ಚೇತರಿಸಿಕೊಳ್ಳಬಹುದು!!
 
ತೋಟದ ಮನೆಯ ಗಿಟ್ಟುಗಳ
ಎಲ್ಲೂ ಕಕ್ಕದಿರಲು ದಕ್ಕಿದ ಬಿಲ್ಲೆಗಳ ಬದಲಿಗೆ
ಈಗ ನೋಟುಗಳ ಎದುರು ನೋಟ,
ಎಲ್ಲ ಅರಿವಾದಂತೆ ನಗುವ ಭೂಪನೆದುರು
ಚಪಲ ತೀರದ ಅಜ್ಜನ ಪೆಚ್ಚು ಮೋರೆ
 
ಅತಿಸಾರದಿಂದ ಹಾಸಿಗೆ ಹಿಡಿದು
ಚೊಂಬು ಕಚ್ಚು ಬಿಡಿಸಿಕೊಂಡಲ್ಲಿ
ಕೊನೆ ಉಸಿರ ಎಳೆಯುವಲ್ಲಿಗೆ
ಗೋಡೆಗೆ ಜೋತ ಅಜ್ಜಿಯ ಮುಖದಲ್ಲಿ
ಮಾಸಲು ಮಂದಹಾಸದ ಕುರುಹು;
ಚಟ್ಟಕ್ಕೆ ಬಿದಿರು ತರಹೋದ ವಂಶಸ್ಥರು
ಬುಂಡೆಯಲ್ಲಿ ಮೂಗಿನ ತನಕ ಮುಳುಗಿ...
 
ಡಂಕನಕ, ಡಂಕನಕ
ಡಂಕನಕ, ಡಂಕನಕ
ನೆರೆದವರಲ್ಲಿ ಒಮ್ಮತದ ಅಳಲು
"ಪುಣ್ಯಾತ್ಮ ಎಷ್ಟ್ ಬೇಗ ಸತ್ತ!!"
ದುಃಖಕ್ಕೆ ಬ್ರಾಂದಿಯ ಜೋರು ಗುದ್ದು
ನಿಂತಲ್ಲೇ ಕುಣಿದ ದೇಹದಲ್ಲಿದ್ದ ಸತ್ತವನೇ ಖುದ್ದು!!
                                           
                                                - ರತ್ನಸುತ

ಕರೆವೆ ಮತ್ತೆ ಮತ್ತೆ ಇದೋ

ಕರೆವೆ ಮತ್ತೆ ಮತ್ತೆ ಇದೋ ಮನಸಿನೊಳಗೆ  ನಿನಗೆಲ್ಲ ತಿಳಿವಂತೆ ಅರಿವೆ ಏನಂದುಕೊಂಡರೂ ನಿನ್ನೊಳಗಿರುವ  ನಾನೆಲ್ಲ ಕಲಿತಂತೆ ಬರುವೆ ಮುಂಚಿತವಾಗಿ ಎದುರುನೋಡುತ ಕೂತು ನಿನಗಾಗಿ,...